ಮುಖ್ಯಮಂತ್ರಿ ಸಿದ್ಧರಾಮಯ್ಯ, ಸ್ಪೀಕರ್ ತಿಮ್ಮಪ್ಪ ದೂರ ದೂರ
ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿಗಿಂತ ಹೆಚ್ಚಾಗಿ ತಿವಿಯುತ್ತ ಬಂದಿದ್ದು ಅವರದೇ ಪಕ್ಷದ ಹಿರಿಯ ನಾಯಕ, ಸ್ಪೀಕರ್ ಕಾಗೋಡು ತಿಮ್ಮಪ್ಪ...

ಶಿವಮೊಗ್ಗ: ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿಗಿಂತ ಹೆಚ್ಚಾಗಿ ತಿವಿಯುತ್ತ ಬಂದಿದ್ದು ಅವರದೇ ಪಕ್ಷದ ಹಿರಿಯ ನಾಯಕ, ಸ್ಪೀಕರ್ ಕಾಗೋಡು ತಿಮ್ಮಪ್ಪ. ಇದು ಇಡೀ ರಾಜ್ಯಕ್ಕೆ ತಿಳಿದ ವಿಷಯ. ಅಂತೆಯೇ ಕಾಗೋಡು ತಿಮ್ಮಪ್ಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಎಂಬ ಊಹಾಪೋಹಗಳೆದ್ದಿವೆ.
ಇಲ್ಲಿನ ಪಶು ವೈದ್ಯ ಕಾಲೇಜಿನ ಕಾರ್ಯಕ್ರಮದಲ್ಲಿ ಸೋಮವಾರ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಮ್ಮುಖದಲ್ಲಿ ಸಿಎಂ ಶಂಕು ಸ್ಥಾಪನೆ ನೆರವೇರಿಸಬೇಕಿತ್ತು. ಆದರೆ ಕಾಗೋಡು ತಿಮ್ಮಪ್ಪ ಅವರ ಸುಳಿವೇ ಅಲ್ಲಿರಲಿಲ್ಲ. ಇನ್ನೂ ಹೇಳಬೇಕೆಂದರೆ, ನೆಟ್‌ವರ್ಕ್ ಸಿಗದ ಪ್ರದೇಶದಲ್ಲಿ ಇಡೀ ದಿನ ಕಳೆದದ್ದು ವಿಶೇಷ.
ಶಿವಮೊಗ್ಗ ಪಶು ವೈದ್ಯ ಕಾಲೇಜಿನ ಗೊಂದಲ ರಾಷ್ಟ್ರೀಯ ಮಟ್ಟಕ್ಕೂ ಹೋಗಿತ್ತು. ಮಸ್ಯೆ ಪರಿಹರಿಸುವ ವಿಚಾರ ಪ್ರತಿಷ್ಠೆಯ ಪ್ರಶ್ನೆಯಾಗಿ ಬೆಳೆದಿತ್ತು. ವಿದ್ಯಾರ್ಥಿಗಳು ಪ್ರತಿಭಟನೆಗಿಳಿದರು. ಪ್ರತಿಭಟನೆ ತೀವ್ರಗೊಂಡು ಆಡಳಿತ ಪಕ್ಷಕ್ಕೂ ಮುಜುಗರ ತಟ್ಟಿತ್ತು. ಅಂತಿಮವಾಗಿ ಸರ್ಕಾರ ಕಾಲೇಜಿನ ಮೂಲ ಸೌಕರ್ಯಕ್ಕೆ ಅನುದಾನ ಬಿಡುಗಡೆ ಮಾಡಿತು. ಅದರ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಅವರಿಂದ ಮಾಡಿಸುವಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಆದರೆ , ಈ ಕಾರ್ಯಕ್ರಮಕ್ಕೆ ಕಾಗೋಡು ತಿಮ್ಮಪ್ಪ ಗೈರು ಹಾಜರು ತೀವ್ರ ಚರ್ಚೆಗೆ ಗ್ರಾಸವಾಯಿತು. ಶಿಷ್ಟಾಚಾರದಂತೆ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲೂ ಮುದ್ರಣಗೊಂಡಿತ್ತು. ವೇದಿಕೆಯಲ್ಲೂ ಅವರ ಫೋಟೊವನ್ನು ಪ್ರಕಟಿಸಲಾಗಿತ್ತು. ಆದರೆ ಕಾಗೋಡು ತಿಮ್ಮಪ್ಪ ಮಾತ್ರ ಸಮಾರಂಭದಿಂದ ದೂರ ಉಳಿದರು.
ಈ ಮೊದಲೇ ಮುಖ್ಯಮಂತ್ರಿ ಶಿವಮೊಗ್ಗಕ್ಕೆ ಬರಬೇಕಾಗಿತ್ತು. ಅಂತಿಮ ಹಂತದಲ್ಲಿ ಅವರ ಕಾರ್ಯಕ್ರಮ ರದ್ದಾಗಿತ್ತು. ಕಾಗೋಡು ತಿಮ್ಮಪ್ಪ ಅವರ ಜೊತೆ ವೇದಿಕೆ ಹಂಚಿಕೊಂಡರೆ ಬಗರ್ ಹುಕುಂ ರೈತರಿಗೆ ಸಾಗುವಳಿ ಚೀಟಿ ನೀಡುವ ವಿಚಾರದಲ್ಲಿ ವೇದಿಕೆಯಲ್ಲೇ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗುತ್ತದೆ ಎಂಬುದು ಮತ್ತು ನೇರ ನಿಷ್ಠುರ ನುಡಿಗಳಿಂದ ಕಸಿವಿಸಿ ಆಗಬಹುದೆಂದು ಸಿಎಂ ಶಿವಮೊಗ್ಗ ಭೇಟಿಯಿಂದ ದೂರ ಉಳಿದಿದ್ದರು. ಇದೀಗ ಸಿಎಂ ಬಂದರೂ ಕಾಗೋಡು ಕಾರ್ಯಕ್ರಮದಿಂದ ದೂರ ಉಳಿದರು. ಒಟ್ಟಾರೆ ಸಿದ್ಧರಾಮಯ್ಯನವರಿಂದ ಕಾಗೋಡು ತಿಮ್ಮಪ್ಪ ಅಂತರ ಕಾಯ್ದುಕೊಳ್ಳುತ್ತಿರುವುದು ನಿಜ.
ಕಾಗೋಡು ತಿಮ್ಮಪ್ಪ ಅವರಿಗೆ ಮಂತ್ರಿಸ್ಥಾನ ನೀಡುವ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳದೇ ಇರುವುದು ಇದಕ್ಕೆಲ್ಲಾ ಪ್ರಮುಖ ಕಾರಣ ಎಂದೂ ಹೇಳಲಾಗುತ್ತಿದೆ.
ದೂರ ಉಳಿದ ಬಿಜೆಪಿ: ಪಶು ವೈದ್ಯ ವಿವಿ ಕಾಲೇಜು ಕಾರ್ಯಕ್ರಮದಿಂದ ಸಂಸದರು, ವಿಧಾನಪರಿಷತ್ ಸದಸ್ಯರು, ಮೇಲ್ಮನೆ ಪ್ರತಿಪಕ್ಷ ನಾಯಕರು ದೂರ ಉಳಿದಿದ್ದು ಅಚ್ಚರಿಗೆ ಕಾರಣವಾಗಿತ್ತು. ಆಹ್ವಾನ ಪತ್ರಿಕೆ ವೇದಿಕೆಯಲ್ಲಿ ಜನಪ್ರತಿನಿಧಿಗಳ ಹೆಸರು ಫೋಟೋ ಅಚ್ಚಾಗಿದ್ದರೂ ಬಿಜೆಪಿಯಿಂದ ಆರಿಸಿಬಂದ ಜನಪ್ರತಿನಿಧಿಗಳು ಕಾರ್ಯಕ್ರಮ ಬಹಿಷ್ಕರಿಸಿದಂತೆ ಕಂಡುಬಂತು. ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಹೋರಾಟಕ್ಕೆ ಕಿಚ್ಚುಹಚ್ಚಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಬಿಜೆಪಿ ನಾಯಕರು ಸಮಾರಂಭ ನಡೆದ ಸ್ಥಳದತ್ತ ಸುಳಿಯಲಿಲ್ಲ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


