ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಕಡ್ಡಾಯ ರಜೆ ಮೇಲೆ ಹೊರ ನಡೆದ ಪ್ರೊಫೆಸರ್!
ಸಾಹಿಲ್ ಸಾವಿನ ಸುತ್ತಲಿನ ಘಟನೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು IIT ಬಾಂಬೆ 10 ಸದಸ್ಯರ ಸಮಿತಿಯನ್ನು ರಚಿಸಿದೆ. ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಮುಂಬೈ: IIT ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಕೇಸ್ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಸಾವಿಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಪ್ರಾಧ್ಯಾಪಕರನ್ನ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
ಮೃತ ಸಾಹಿಲ್ ಕುಟುಂಬದವರು ಕ್ಯಾಂಪಸ್ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರ ವಿರುದ್ಧ ಜಾತಿ ಆಧಾರಿತ ತಾರತಮ್ಯದ ಆರೋಪದಡಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಪ್ರೊಫೆಸರ್ ಡೂಲ್ಲಾ ವಿರುದ್ಧ FIR ದಾಖಲಿಸಿದ್ದಾರೆ. ಇದೀಗ ಪ್ರಕರಣವನ್ನು ಮುಂಬೈ ಕ್ರೈಂ ಬ್ರ್ಯಾಂಚ್‌ಗೆ ವರ್ಗಾಯಿಸಲಾಗಿದ್ದು, ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಸಾಹಿಲ್ ಸಾವಿನ ಸುತ್ತಲಿನ ಘಟನೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು IIT ಬಾಂಬೆ 10 ಸದಸ್ಯರ ಸಮಿತಿಯನ್ನು ರಚಿಸಿದೆ. ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಇತ್ತ ಮುಂಬೈ ಕ್ರೈಂ ಬ್ರ್ಯಾಂಚ್ ಕೂಡ ತನಿಖೆಯನ್ನು ಚುರುಕುಗೊಳಿಸಿದೆ. ಮಂಗಳವಾರ ಸಾಹಿಲ್ ಅವರ ಪೋಷಕರ ಹೇಳಿಕೆ ದಾಖಲಿಸಲಾಗಿದೆ. ಪರೀಕ್ಷಾ ಹಾಲ್‌ನಲ್ಲಿ ಸಾಹಿಲ್ ಜೊತೆ ಇದ್ದವರು, ಹಾಸ್ಟೆಲ್‌ನಲ್ಲಿ ಅವರ ಸಂಪರ್ಕದಲ್ಲಿದ್ದವರು ಹಾಗೂ ಸ್ನೇಹಿತರಿಂದ ಮಾಹಿತಿ ಪಡೆಯಲಾಗಿದೆ.
ಸಾಹಿಲ್ ಸಾವಿನ ಹಿಂದೆ ನಡೆದಿರುವ ಘಟನೆಗಳ ಸರಣಿಯನ್ನು ತಿಳಿದುಕೊಳ್ಳಲು ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಮೇಲೂ ಗಮನಹರಿಸಿದ್ದಾರೆ. ಸಾಹಿಲ್ ಬಳಸುತ್ತಿದ್ದ ಲಾಕ್ ಆಗಿರುವ ಐಫೋನ್ ಅನ್ನು ತಾಂತ್ರಿಕ ಸಹಾಯದಿಂದ ಪರಿಶೀಲಿಸಲಾಗುತ್ತಿದೆ.
ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಕಲಿಯುತ್ತಿದ್ದ ಸಾಹಿಲ್ ವಕೋಡ್, ಸೆಪ್ಟೆಂಬರ್ 18 ರಂದು ಸಂಜೆ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಮಧ್ಯಂತರ ಸೆಮಿಸ್ಟರ್ ಪರೀಕ್ಷೆಯ ವೇಳೆ ಆತ ಚಾಟ್‌ಜಿಪಿಟಿ (ChatGPT) ಬಳಸುತ್ತಿದ್ದ ಆರೋಪ ಹೊರಿಸಲಾದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿತ್ತು.
ಸಾಹಿಲ್ ಫೋನ್‌ನಿಂದ ಡೇಟಾ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದು, ವಿಶೇಷವಾಗಿ ಚಾಟ್ ಜಿಪಿಟಿ ಹಿಸ್ಟರಿಯನ್ನು ಪರಿಶೀಲಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸಾಹಿಲ್ ಮನಸ್ಥಿತಿ, ಅವರು ಎದುರಿಸಿದ್ದ ಸಮಸ್ಯೆಗಳು ಹಾಗೂ ಸಾವಿಗೂ ಮುನ್ನ ನಡೆದ ಘಟನೆಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತನಿಖೆಯಲ್ಲಿ ಸಿಗುತ್ತಿರುವ ಡಿಜಿಟಲ್ ಸಾಕ್ಷ್ಯಗಳು, ದಾಖಲಾಗಿರುವ ಹೇಳಿಕೆಗಳು ಮತ್ತು ಇತರ ಮಾಹಿತಿಯನ್ನು ಅಧಿಕಾರಿಗಳು ಒಟ್ಟಿಗೆ ಪರಿಶೀಲಿಸುತ್ತಿದ್ದಾರೆ.
ಸಾಹಿಲ್ ಸಾವಿನ ಬೆನ್ನಲ್ಲೇ ಆತನ ತಾಯಿ ಸೋನಾಲಿ ವಕೋಡ್ ಆಡಳಿತ ಮಂಡಳಿ ಮತ್ತು ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ಕಳೆದ ಮೂರು ತಿಂಗಳಿಂದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ನನ್ನ ಮಗನಿಗೆ ಜಾತಿ ಆಧಾರದ ಮೇಲೆ ನಿರಂತರ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದರು. ‘ನಾನು ಮೇಲ್ಜಾತಿಯವನು, ನೀನು ಕೆಳಜಾತಿಯವನು’ ಎಂದು ನಿಂದಿಸಿ ಅವಮಾನಿಸುತ್ತಿದ್ದರು. ಸೆಪ್ಟೆಂಬರ್ 13 ರಂದು ಹಾಸ್ಟೆಲ್‌ನಲ್ಲಿ ಭೇಟಿಯಾದಾಗಲೂ ಸಾಹಿಲ್ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಕಣ್ಣೀರಿಟ್ಟಿದ್ದ” ಎಂದು ಅವರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಐಐಟಿ ಬಾಂಬೆ ಆವರಣದಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯದ ದೂರುಗಳ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ನಿಷ್ಪಕ್ಷಪಾತ ಆಂತರಿಕ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸುವಂತೆ ವಿದ್ಯಾರ್ಥಿ ಸಂಘಟನೆಗಳು (APPSC) ಆಗ್ರಹಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




