ಸರ್ಕಾರಿ ಹಾಸ್ಟೆಲ್ಗಳಲ್ಲಿ ಚಿಕನ್ ಬಿರಿಯಾನಿ ಜೊತೆ ಗೋಮಾಂಸ? ಸರ್ಕಾರದ ಮುಂದೆ ಆಹಾರದ ಮೆನು ಬದಲಾವಣೆಗೆ ವಿದ್ಯಾರ್ಥಿಗಳ ಬೇಡಿಕೆ!
ಸರ್ಕಾರಿ ಹಾಸ್ಟೆಲ್ಗಳ ಆಹಾರದ ಮೆನುವಿನಲ್ಲಿ ಚಿಕನ್ ಮತ್ತು ಮಟನ್ ಜೊತೆಗೆ ಗೋಮಾಂಸವನ್ನೂ ಸೇರಿಸಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದು, ಈ ವಿಚಾರವು ಈಗ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಚೆನ್ನೈ (ತಮಿಳನಾಡು): ಸರ್ಕಾರಿ ಹಾಸ್ಟೆಲ್ಗಳ ಆಹಾರದ ಮೆನುವಿನಲ್ಲಿ ಚಿಕನ್ ಮತ್ತು ಮಟನ್ ಜೊತೆಗೆ ಗೋಮಾಂಸವನ್ನೂ ಸೇರಿಸಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ವಸತಿನಿಲಯದ ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ, ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವನ್ನಿ ಅರಸು ವಿದ್ಯಾರ್ಥಿಗಳ ಈ ಬೇಡಿಕೆಯನ್ನು ಖಚಿತಪಡಿಸಿದ್ದು, ಈ ವಿಚಾರವು ಈಗ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ತಮಿಳುನಾಡಿನ ಸಾಮಾಜಿಕ ನ್ಯಾಯ ಇಲಾಖೆಯ ಸಚಿವರಾದ ವನ್ನಿ ಅರಸು ಅವರು ಚೆನ್ನೈನ ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ವಸತಿನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಿಂದ ಬಂದಿರುವ ಹಲವು ವಿದ್ಯಾರ್ಥಿಗಳು, ಹಾಸ್ಟೆಲ್ ಮೆನುವಿನಲ್ಲಿ ಚಿಕನ್ ಮತ್ತು ಮಟನ್ ಜೊತೆಗೆ ಗೋಮಾಂಸವನ್ನೂ ಸಹ ಪೂರೈಸುವಂತೆ ಸಚಿವರಿಗೆ ನೇರವಾಗಿ ವಿನಂತಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಗೆ ಕಾರಣವೇನು?
ಮಟನ್ ದುಬಾರಿ: ಪ್ರಸ್ತುತ ಸರ್ಕಾರಿ ಹಾಸ್ಟೆಲ್ಗಳಲ್ಲಿ ಚಿಕನ್ ಮತ್ತು ಮಟನ್ ನೀಡಲಾಗುತ್ತಿದೆ (ಪ್ರತಿ ಸೋಮವಾರ ಚಿಕನ್ ಬಿರಿಯಾನಿ ನೀಡಲು ನಿರ್ಧರಿಸಲಾಗಿದೆ). ಆದರೆ, ಮಟನ್ ಬೆಲೆ ತೀರಾ ದುಬಾರಿಯಾಗಿದೆ.
ಮನೆಯ ಆಹಾರ ಪದ್ಧತಿ: ಗ್ರಾಮೀಣ ಭಾಗದ ಶೋಷಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಗೋಮಾಂಸ ಸೇವನೆ ಮಾಡುತ್ತಾರೆ. ಹಾಗಾಗಿ, ಹಾಸ್ಟೆಲ್ನಲ್ಲೂ ಇದನ್ನು ನೀಡಬೇಕು ಎಂದು ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ.
ಇನ್ನು, ವಿದ್ಯಾರ್ಥಿಗಳ ಬೇಡಿಕೆಯ ಬಗ್ಗೆ ಮಾತನಾಡಿದ ಸಚಿವ ವನ್ನಿ ಅರಸು, "ಕೆಲವು ವಿದ್ಯಾರ್ಥಿಗಳು ಗೋಮಾಂಸ ಸೇರಿಸಲು ವಿನಂತಿಸಿರುವುದು ನಿಜ. ಆದರೆ, ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳೂ ಇವೆ. ಆದ್ದರಿಂದ, ಈ ವಿಷಯದ ಕುರಿತು ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ಮುಂದಿನ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರೊಂದಿಗೆ, ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್ ಗಳಲ್ಲಿ ಪ್ರತಿ ಸೋಮವಾರ ವಿದ್ಯಾರ್ಥಿಗಳಿಗೆ ಚಿಕನ್ ಬಿರಿಯಾನಿ ನೀಡಲಾಗುತ್ತದೆ. ಜೊತೆಗೆ ಪ್ರತಿದಿನ ಬೆಳಗ್ಗೆ ಚಹಾ ವ್ಯವಸ್ಥೆ ಮಾಡಲಾಗುವುದು. ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ 500 ರೂಪಾಯಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ 400 ರೂಪಾಯಿ ಹೆಚ್ಚಿಸಲಾಗಿದೆ. ಇನ್ನು ಎರಡು ವಾರಗಳಲ್ಲಿ ಸರ್ಕಾರಿ ಆದೇಶ ಹೊರಬೀಳಲಿದ್ದು, ರಾಜ್ಯದ ಸುಮಾರು 1,400 ಹಾಸ್ಟೆಲ್ ಗಳಲ್ಲಿ ಈ ಹೊಸ ಆಹಾರ ಪದ್ಧತಿ ಜಾರಿಗೆ ಬರಲಿದೆ ಎಂದರು.

ಮುಂದುವರೆದು, ಸಚಿವರ ಈ ಹೇಳಿಕೆಗೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪುತಿಯಾ ತಮಿಳಗಂ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ. ಕೃಷ್ಣಸಾಮಿ ಅವರು ಸರ್ಕಾರದ ಈ ಆಲೋಚನೆಯನ್ನು ತೀವ್ರವಾಗಿ ಖಂಡಿಸಿ, "ಗೋಮಾಂಸವು ತಮಿಳುನಾಡಿನ ಸಾರ್ವತ್ರಿಕ ಸಂಸ್ಕೃತಿಯ ಭಾಗವಲ್ಲ, ಅದು ಕೇವಲ ಕೆಲವು ಸಮುದಾಯಗಳ ವೈಯಕ್ತಿಕ ಆಯ್ಕೆಯಾಗಿದೆ. ಹಾಸ್ಟೆಲ್ಗಳಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಾಂಶಗಳನ್ನೊಳಗೊಂಡ ಸಮತೋಲಿತ ಪೌಷ್ಟಿಕ ಆಹಾರ ನೀಡಬೇಕೇ ಹೊರತು, ಇಂತಹ ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು" ಎಂದು ಅವರು ಎಚ್ಚರಿಸಿದ್ದಾರೆ. ಒಂದು ವೇಳೆ ಗೋಮಾಂಸ ಸೇರಿಸಿದರೆ ಸಚಿವರು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



