'ಸೂಪರ್ ಪವರ್ ಭಾರತ' ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರಬೇಕು: UNSC ಖಾಯಂ ಸ್ಥಾನಕ್ಕೆ ಯುರೋಪ್‌ನ V4 ಬೆಂಬಲ
UNSC Permanent Seat: ಭಾರತ ಸೂಪರ್ ಪವರ್ ಆಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರಲೇಬೇಕು: UNSC ಖಾಯಂ ಸದಸ್ಯತ್ವಕ್ಕೆ ಸಾಥ್ ನೀಡಿದ ಯುರೋಪ್‌ನ ಪ್ರಬಲ V4 ಒಕ್ಕೂಟದ ರಾಷ್ಟ್ರಗಳು! ಆ ಕುರಿತ ವರದಿ ಇಲ್ಲಿದೆ:

ನ್ಯೂಯಾರ್ಕ್ (ಅಮೆರಿಕ): ಜಾಗತಿಕ ರಾಜತಾಂತ್ರಿಕ ರಂಗದಲ್ಲಿ ಭಾರತಕ್ಕೆ ಮತ್ತೊಂದು ದೊಡ್ಡ ಜಯ ಸಂದಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಖಾಯಂ ಸದಸ್ಯತ್ವ ನೀಡಬೇಕು ಎಂಬ ದಶಕಗಳ ಬೇಡಿಕೆಗೆ ಯುರೋಪ್‌ನ ಅತ್ಯಂತ ಪ್ರಭಾವಶಾಲಿ ಒಕ್ಕೂಟಗಳಲ್ಲಿ ಒಂದಾದ 'ವಿಸೆಗ್ರಾಡ್ ಗ್ರೂಪ್' (Visegrad Group - V4) ಒಟ್ಟಾಗಿ ಅಧಿಕೃತ ಬೆಂಬಲ ಸೂಚಿಸಿದೆ. ಆ ಕುರಿತ ವರದಿ ಇಲ್ಲಿದೆ:
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 81ನೇ ಅಧಿವೇಶನದ ಸಂದರ್ಭದಲ್ಲಿ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಯುರೋಪ್‌ನ ಮೈತ್ರಿಕೂಟವಾದ 'ವಿಸೆಗ್ರಾಡ್ ಗ್ರೂಪ್' (V4) ನಾಯಕರೊಂದಿಗೆ ನಡೆಸಿದ ಚಾರಿತ್ರಿಕ ಮೊದಲ ಸಭೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ವೇಳೆ ಸಭೆಯ ನೇತೃತ್ವ ವಹಿಸಿದ್ದ ಸ್ಲೋವಾಕಿಯಾದ ವಿದೇಶಾಂಗ ಸಚಿವ ಜುರಾಜ್ ಬ್ಲಾನಾರ್ ಅವರು, "ಗ್ಲೋಬಲ್ ಸೌತ್‌ನ ಭಾಗವಾಗಿರುವ ಮತ್ತು ಇಂಡೋ-ಪೆಸಿಫಿಕ್ ವಲಯದಲ್ಲಿ ಉದಯೋನ್ಮುಖ ಸೂಪರ್ ಪವರ್ ಆಗಿರುವ ಭಾರತವು ಯುಎನ್ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರಲೇಬೇಕು" ಎಂದು ಘೋಷಿಸಿದ್ದಾರೆ.
ಮುಂದುವರೆದು, ಈ ಐತಿಹಾಸಿಕ ಸಭೆಯಲ್ಲಿ ಭಾರತ ಹಾಗೂ ಈ ನಾಲ್ಕು ದೇಶಗಳ ನಡುವೆ ಕೇವಲ ಯುಎನ್‌ಎಸ್‌ಸಿ ಸ್ಥಾನ ಅಷ್ಟೇ ಅಲ್ಲದೆ ರಾಜಕೀಯ, ಆರ್ಥಿಕ, ತಾಂತ್ರಿಕ, ರಕ್ಷಣಾ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ವಾರ್ಷಿಕ ಸಭೆಗಳನ್ನು ನಡೆಸುವ ಮೂಲಕ ಸಹಕಾರವನ್ನು ಮತ್ತಷ್ಟು ಬಲಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ, ಭಾರತ ಹಾಗೂ ಮೈತ್ರಿಕೂಟದೊಂದಿಗೆ ಪ್ರತಿವರ್ಷ ವಿದೇಶಾಂಗ ಸಚಿವರ ಮಟ್ಟದ ಸಭೆ, ವಾರ್ಷಿಕ ಬಿಸಿನೆಸ್ ಫೋರಂ ಸ್ಥಾಪನೆ ಮತ್ತು ತಾಂತ್ರಿಕ ವಿನಿಮಯದ ಜೊತೆಗೆ ರಕ್ಷಣಾ ವಲಯದಲ್ಲಿ ಜಂಟಿ ಸಹಕಾರ ಹಾಗೂ ಜನರ ನಡುವಿನ ಸಂಪರ್ಕ ವೃದ್ಧಿಗೆ ಒಪ್ಪಿಗೆ ನೀಡಲಾಗಿದೆ.
ಹಾಗಾದ್ರೆ, ಏನಿದು V4?
ಮಧ್ಯ ಯುರೋಪ್ ಭಾಗದ ಪ್ರಭಾವಶಾಲಿ ಒಕ್ಕೂಟವಾದ ವಿಸೆಗ್ರಾಡ್ ಗ್ರೂಪ್ (V4) ನಲ್ಲಿ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ, ಜೆಕ್ ಗಣರಾಜ್ಯಗಳನ್ನು ಒಳಗೊಂಡಿದೆ. ಸೋವಿಯತ್ ಒಕ್ಕೂಟದ ಪ್ರಭಾವದಿಂದ ಹೊರಬಂದ ನಂತರ, ಈ ದೇಶಗಳು ಒಟ್ಟಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಯುರೋಪಿಯನ್ ಒಕ್ಕೂಟ ಹಾಗೂ ನಾಟೋ ಸೇರಲು ಪರಸ್ಪರ ಸಹಾಯ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದವು. ಅದರಂತೆ, ಇಂದು ಇವೆಲ್ಲವೂ EU ಮತ್ತು NATO ನ ಸಕ್ರಿಯ ಸದಸ್ಯ ರಾಷ್ಟ್ರಗಳಾಗಿವೆ.
ಒಟ್ಟಾರೆಯಾಗಿ, 1945 ರಲ್ಲಿ ರಚನೆಯಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇಂದಿನ 21ನೇ ಶತಮಾನದ ಜಾಗತಿಕ ವಾಸ್ತವಕ್ಕೆ ತಕ್ಕಂತೆ ಬದಲಾಗಬೇಕು, ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಮತ್ತು ಬಲಿಷ್ಠ ಆರ್ಥಿಕತೆ ಹೊಂದಿರುವ ಭಾರತಕ್ಕೆ ಖಾಯಂ ಸ್ಥಾನ ಸಿಗಬೇಕು ಎಂಬ ನವದೆಹಲಿಯ ನಿರಂತರ ಹಕ್ಕೊತ್ತಾಯಕ್ಕೆ ಈಗ ಜಾಗತಿಕವಾಗಿ ವ್ಯಾಪಕ ಮನ್ನಣೆ ಸಿಗುತ್ತಿದೆ. ಏತನ್ಮಧ್ಯೆ, ಈಗಾಗಲೇ ವಿಶ್ವದ ಪ್ರಮುಖ ಸೂಪರ್ ಪವರ್ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಸಹ ಭಾರತದ ಖಾಯಂ ಸದಸ್ಯತ್ವದ ಬೇಡಿಕೆಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



