ದೇಶ

'ಗೆಳತಿಗೆ 370 ರೂ ಬಿರಿಯಾನಿ' ವಿವಾದ: ಕಮಿಡಿಯನ್ Pranit More ಅರ್ಜಿ; ಕೇಂದ್ರ ಸೇರಿ 3 ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೊಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೋಮವಾರ ಈ ಆದೇಶ ನೀಡಿದೆ.

'ಗೆಳತಿಗೆ 370 ರೂ ಬಿರಿಯಾನಿ' ವಿವಾದ: ಕಮಿಡಿಯನ್ Pranit More ಅರ್ಜಿ; ಕೇಂದ್ರ ಸೇರಿ 3 ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ಕಮಿಡಿಯನ್ ಪ್ರಣೀತ್ ಮೋರೆ ಮತ್ತು ಸುಪ್ರೀಂ ಕೋರ್ಟ್
Published On :

ನವದೆಹಲಿ: ಕಮಿಡಿಯನ್ ಪ್ರಣಿತ್ ಮೋರೆ ಅವರ ವಿವಾದಾತ್ಮಕ ‘ರೂ.370 ಬಿರಿಯಾನಿ’ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ವಿವಿಧ ಎಫ್‌ಐಆರ್‌ಗಳನ್ನು ಒಂದೇ ಪ್ರಕರಣವಾಗಿ ವಿಲೀನಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಸೇರಿದಂತೆ ಮಹಾರಾಷ್ಟ್ರ ಹಾಗೂ ಹರಿಯಾಣ ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೊಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೋಮವಾರ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಪ್ರಣಿತ್ ಮೋರೆ ಪರ ವಕೀಲರು, ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಕಕ್ಷಿದಾರರು ವಿವಿಧ ವೇದಿಕೆಗಳಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆಯೂ ಕ್ಷಮೆಯಾಚಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣದ ವಿಚಾರಣೆಯನ್ನು ಎದುರಿಸಲು ತಾವು ಸಿದ್ಧರಾಗಿದ್ದು, ಗುರುಗ್ರಾಮ್‌ನಲ್ಲಿ ದಾಖಲಾಗಿರುವ ಎಫ್‌ಐಆರ್‌ ಅನ್ನು ಮುಂಬೈನಲ್ಲಿ ದಾಖಲಾಗಿರುವ ಎಫ್‌ಐಆರ್‌ನೊಂದಿಗೆ ವಿಲೀನಗೊಳಿಸುವಂತೆ ಮಾತ್ರ ಮನವಿ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಡಿಯೋ ವೈರಲ್ ಆಗಿ ವಿವಾದದ ಗಂಭೀರತೆ ತಿಳಿಯುತ್ತಿದ್ದಂತೆಯೇ, ಎಫ್‌ಐಆರ್ ದಾಖಲಾಗುವ ಮುನ್ನವೇ ಅದನ್ನು ಡಿಲೀಟ್ ಮಾಡಿದ್ದಾಗಿ ಮೋರೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ತಾವು ಆ ಸಮಯದಲ್ಲಿ ಪ್ರಯಾಣದಲ್ಲಿದ್ದು, ತಮ್ಮ ಅನುಮತಿ ಪಡೆಯದೆ ಪಿಆರ್ ತಂಡ ವಿಡಿಯೋವನ್ನು ಪ್ರಕಟಿಸಿತ್ತು ಎಂಬ ವಾದವನ್ನೂ ಮುಂದಿಟ್ಟರು.

ಇಷ್ಟಕ್ಕೂ ಏನಿದು ‘ರೂ.370 ಬಿರಿಯಾನಿ’ ವಿವಾದ?

ಗುರುಗ್ರಾಮ್‌ನಲ್ಲಿ ನಡೆದ ಪ್ರಣಿತ್ ಮೋರೆ ಅವರ ಕಾಮಿಡಿ ಶೋವೊಂದರಲ್ಲಿ ಪ್ರೇಕ್ಷಕರಾಗಿದ್ದ ಹಿಮಾಂಶು ಜಂಗ್ರಾ ಎಂಬವರು ಡೇಟ್‌ಗೆ ತೆರಳಿದ್ದ ಸಂದರ್ಭ ತನ್ನ ಗೆಳತಿಗಾಗಿ ರೂ.370ಕ್ಕೆ ಚಿಕನ್ ಬಿರಿಯಾನಿ ಖರೀದಿಸಿದ್ದ ಬಗ್ಗೆ ಹೇಳಿಕೊಂಡಿದ್ದರು.

ಬಳಿಕ ಆ ಮಹಿಳೆ ತನ್ನನ್ನು ಮನೆಗೆ ಡ್ರಾಪ್ ಮಾಡುವಂತೆ ಕೇಳಿದಾಗ, ಬಿರಿಯಾನಿಗೆ ಖರ್ಚು ಮಾಡಿದ ಹಣಕ್ಕೆ ಪ್ರತಿಯಾಗಿ ಲೈಂಗಿಕ ಅನುಕೂಲವನ್ನು ಕೇಳಿದ್ದಾಗಿ ಜಂಗ್ರಾ ಹೇಳಿದ್ದರು. ಈ ಹೇಳಿಕೆಗೆ ಪ್ರಣಿತ್ ಮೋರೆ ನಕ್ಕಿರುವ ದೃಶ್ಯವೂ ವಿಡಿಯೋದಲ್ಲಿ ಕಂಡುಬಂದಿತ್ತು. ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ವ್ಯಾಪಕ ಆಕ್ರೋಶ

ವಿಡಿಯೋದಲ್ಲಿನ ಹೇಳಿಕೆಯನ್ನು ಮಹಿಳೆಯರ ಬಗ್ಗೆ ಅವಹೇಳನಕಾರಿ ಹಾಗೂ ಸಂವೇದನಾರಹಿತ ಎಂದು ಹಲವರು ಟೀಕಿಸಿದ್ದರು. ಹೇಳಿಕೆಯನ್ನು ವಿರೋಧಿಸದೆ ನಕ್ಕಿದ್ದಕ್ಕಾಗಿ ಪ್ರಣಿತ್ ಮೋರೆ ವಿರುದ್ಧವೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ವಿವಾದ ತೀವ್ರಗೊಂಡ ಬಳಿಕ ಪ್ರಣಿತ್ ಮೋರೆ ಹಾಗೂ ಹಿಮಾಂಶು ಜಂಗ್ರಾ ಇಬ್ಬರೂ ಕ್ಷಮೆಯಾಚಿಸಿದ್ದರು. ಜಂಗ್ರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೂ ನಿಷ್ಕ್ರಿಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಗ್ರಾ ಕೆಲಸ ಮಾಡುತ್ತಿದ್ದ ಗುರುಗ್ರಾಮ್ ಮೂಲದ ಸ್ಟಾರ್ವಿಕ್ ಡಿಸೈನ್ ಸಂಸ್ಥೆ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು. ಸಂಸ್ಥೆಯ ಸಂಸ್ಥಾಪಕ ವಿವೇಕ್ ವಿಶ್ವಕರ್ಮ ಅವರು ಈ ವಿಷಯವನ್ನು ಎಕ್ಸ್‌ನಲ್ಲಿ ಪ್ರಕಟಿಸಿದ್ದ ವಿಡಿಯೋದಲ್ಲಿ ದೃಢಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಪ್ರಕ್ರಿಯೆ ಮುಂದುವರಿದಿದ್ದು, ಎಫ್‌ಐಆರ್‌ಗಳನ್ನು ವಿಲೀನಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ಮುಂದೆ ಸರ್ಕಾರಗಳ ಪ್ರತಿಕ್ರಿಯೆ ಬಂದ ಬಳಿಕ ವಿಚಾರಣೆ ಮುಂದುವರಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.