'8 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದೆ, ನ್ಯಾಯ ವಿಳಂಬಕ್ಕೆ ಕಡಿವಾಣ ಹಾಕಲು, ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ರೂಪಿಸಿ': ಸುಪ್ರೀಂ ಕೋರ್ಟ್
ದೇಶದ ವಿವಿಧ ಹೈಕೋರ್ಟ್‌ಗಳಿಂದ ಕಾಲಕಾಲಕ್ಕೆ ಬಾಕಿ ಪ್ರಕರಣಗಳ ಅಂಕಿ-ಅಂಶಗಳನ್ನು ಸಂಗ್ರಹಿಸುವುದರಿಂದ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನ್ಯಾಯಾಲಯ ಗುರುವಾರ ಹೇಳಿದೆ.

ನವದೆಹಲಿ: ದೇಶದ ಜಿಲ್ಲಾ ನ್ಯಾಯಾಲಯಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಸಿವಿಲ್ ಎಕ್ಸಿಕ್ಯೂಷನ್ ಅರ್ಜಿಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ದೇಶದ ವಿವಿಧ ಹೈಕೋರ್ಟ್‌ಗಳಿಂದ ಕಾಲಕಾಲಕ್ಕೆ ಬಾಕಿ ಪ್ರಕರಣಗಳ ಅಂಕಿ-ಅಂಶಗಳನ್ನು ಸಂಗ್ರಹಿಸುವುದರಿಂದ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನ್ಯಾಯಾಲಯ ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು, ಎಕ್ಸಿಕ್ಯೂಷನ್ ಪ್ರಕ್ರಿಯೆಗಳ ತ್ವರಿತ ವಿಲೇವಾರಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ನಿರ್ದೇಶನಗಳ ಅನುಷ್ಠಾನದ ಕುರಿತು ವಿವಿಧ ಹೈಕೋರ್ಟ್‌ಗಳು ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸಿತು.
2025ರ ಮಾರ್ಚ್ 6ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಿಂದ ಈ ವಿಚಾರ ಬೆಳಕಿಗೆ ಬಂದಿತ್ತು. ನಾಲ್ಕು ದಶಕಗಳಿಂದ ಬಗೆಹರಿಯದೆ ಉಳಿದಿದ್ದ ಆಸ್ತಿ ವಿವಾದವೊಂದನ್ನು ಆ ತೀರ್ಪು ಒಳಗೊಂಡಿತ್ತು.
ಕಾರಣಗಳ ಮಂಡಿಸಿದ ಅಮಿಕಸ್ ಕ್ಯೂರಿ
ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಕರಿಸುತ್ತಿರುವ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಪ್ರಕರಣಗಳ ವಿಳಂಬಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಒಳಗೊಂಡ ವಿವಿಧ ಹೈಕೋರ್ಟ್‌ಗಳ ಪ್ರತಿಕ್ರಿಯೆಗಳ ಸಂಗ್ರಹವನ್ನು ಪೀಠದ ಮುಂದೆ ಮಂಡಿಸಿದರು.
ಬಾಕಿ ಪ್ರಕರಣಗಳ ಭಾರೀ ಪ್ರಮಾಣವನ್ನು ಗಮನಿಸಿದ ನ್ಯಾಯಮೂರ್ತಿ ಪಾರ್ದಿವಾಲಾ, ಕೇವಲ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುವುದಕ್ಕಿಂತ ಎಕ್ಸಿಕ್ಯೂಷನ್ ಅರ್ಜಿಗಳ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ಗಮನಿಸುವ ಪ್ರತ್ಯೇಕ ವ್ಯವಸ್ಥೆ ರೂಪಿಸುವ ಕುರಿತು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಮರ್ಷಿಯಲ್ ಕೋರ್ಟ್‌ಗಳ ನಿಯಮಗಳ ನಿಯಮ 12 ಅನ್ನು ಉಲ್ಲೇಖಿಸಿದ ಅವರು, ಅಂತಹ ನಿಯಮದಡಿ ಸೆಲ್ ಸ್ಥಾಪಿಸುವ ಅವಕಾಶವಿದ್ದು, ಇದೇ ರೀತಿಯ ವ್ಯವಸ್ಥೆಯನ್ನು ಎಕ್ಸಿಕ್ಯೂಷನ್ ಪ್ರಕ್ರಿಯೆಗಳ ಮೇಲ್ವಿಚಾರಣೆಗೂ ಬಳಸಬಹುದು ಎಂದು ಹೇಳಿದರು.
ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ರೂಪಿಸಿ
ಇದುವರೆಗೆ ಒಂದು ಹೈಕೋರ್ಟ್ ಮಾತ್ರ ಇಂತಹ ಸೆಲ್ ಸ್ಥಾಪಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಉಳಿದ ಹೈಕೋರ್ಟ್‌ಗಳು ಇದನ್ನು ಏಕೆ ಪರಿಗಣಿಸುತ್ತಿಲ್ಲ?” ಎಂದು ಪ್ರಶ್ನಿಸಿತು.
“ವಿವಿಧ ಹೈಕೋರ್ಟ್‌ಗಳಿಂದ ಪ್ರಗತಿ ವರದಿ ಕೇಳುತ್ತೇವೆ. ಎಷ್ಟು ಎಕ್ಸಿಕ್ಯೂಷನ್ ಅರ್ಜಿಗಳನ್ನು ನಿರ್ಧರಿಸಲಾಗಿದೆ, ಎಷ್ಟು ವಿಲೇವಾರಿಯಾಗಿವೆ ಎಂಬುದನ್ನು ತಿಳಿದುಕೊಳ್ಳುತ್ತೇವೆ. ಆದರೆ ಪ್ರತಿ ಆರು ತಿಂಗಳಿಗೊಮ್ಮೆ ಕೇವಲ ಈ ಅಂಕಿ-ಅಂಶಗಳನ್ನು ಕೇಳುವುದಷ್ಟೇ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ” ಎಂದು ಪೀಠ ಅಭಿಪ್ರಾಯಪಟ್ಟಿತು.
ಗುರುವಾರದ ವಿಚಾರಣೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳನ್ನು ಸಂಕ್ಷಿಪ್ತವಾಗಿ ಒಳಗೊಂಡ ಟಿಪ್ಪಣಿ ಸಲ್ಲಿಸುವಂತೆ ಅಮಿಕಸ್ ಕ್ಯೂರಿ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿತು. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




