ಸರ್ಕಾರಿ ಸರ್ಕ್ಯೂಟ್ ಹೌಸ್ನಲ್ಲಿ 'ನೀಲಿ ಚಿತ್ರನಟಿ' ವಾಸ; ರೂರ್ಕೆಲಾದಲ್ಲಿ ಸಂಚಲನ, ಪೊಲೀಸ್ ತನಿಖೆ
ಕಳೆದ ವರ್ಷ ಡಿಸೆಂಬರ್ನಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡುತ್ತಿದ್ದು, ಸರ್ಕ್ಯೂಟ್ ಹೌಸ್ನಲ್ಲಿ ತನಗೆ ವಿಶೇಷ ಆತಿಥ್ಯ ದೊರೆತಿದೆ ಎಂದು ನಟಿ ಹೇಳಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ರೂರ್ಕೆಲಾ: ಒಡಿಶಾದ ರೂರ್ಕೆಲಾದ ಸರ್ಕಾರಿ ಸರ್ಕ್ಯೂಟ್ ಹೌಸ್ನಲ್ಲಿ ನೀಲಿ ಚಿತ್ರ ತಾರೆ (ವಯಸ್ಕರ ಚಿತ್ರ ನಟಿ) ವಾಸ್ತವ್ಯ ಹೂಡಿದ್ದ ವಿಚಾರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡುತ್ತಿದ್ದು, ಸರ್ಕ್ಯೂಟ್ ಹೌಸ್ನಲ್ಲಿ ತನಗೆ ವಿಶೇಷ ಆತಿಥ್ಯ ದೊರೆತಿದೆ ಎಂದು ನಟಿ ಹೇಳಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.
ಕಳೆದ ತಿಂಗಳಷ್ಟೇ ಇದೇ ಸರ್ಕ್ಯೂಟ್ ಹೌಸ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಶಸ್ತ್ರಾಸ್ತ್ರಗಳೊಂದಿಗೆ ಏಳು ಮಂದಿಯನ್ನು ಬಂಧಿಸಿದ್ದರು.
ನಟಿಯ ವಾಸ್ತವ್ಯಕ್ಕೆ ಕೊಠಡಿ ವ್ಯವಸ್ಥೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರ ಪುತ್ರ ಸೇರಿದಂತೆ ಕನಿಷ್ಠ ಮೂವರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ವೈರಲ್ ವಿಡಿಯೋ
ಸುಮಾರು ಐದು ನಿಮಿಷಗಳ ಈ ವಿಡಿಯೊದಲ್ಲಿ 3 ಲಕ್ಷಕ್ಕೂ ಹೆಚ್ಚು ಇನ್ಸ್ಟಾಗ್ರಾಂ ಹಿಂಬಾಲಕರನ್ನು ಹೊಂದಿರುವ ನಟಿ, ಜಾರ್ಸುಗುಡಾ ವಿಮಾನ ನಿಲ್ದಾಣದಿಂದ ರೂರ್ಕೆಲಾ ಸರ್ಕ್ಯೂಟ್ ಹೌಸ್ವರೆಗೆ ತಮ್ಮ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಾತನಾಡುವ ವೇಳೆ, "ಕಂಪನಿಯ ಮಾಲೀಕ/ಸಿಇಒ ಅವರೇ ತಮ್ಮ ಆಡಿ ಕಾರಿನಲ್ಲಿ ನನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾರೆ" ಎಂದು ಅವರು ಹಿಂದಿಯಲ್ಲಿ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಆದರೆ, ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಪೊಲೀಸರ ತನಿಖೆಯಲ್ಲಿ ರೂರ್ಕೆಲಾದ ಖಾಸಗಿ ಕಂಪನಿಯೊಂದರ ಹಿರಿಯ ಅಧಿಕಾರಿಯ ಬೇಡಿಕೆಯ ಮೇರೆಗೆ ಸ್ಥಳೀಯ ಟ್ರಾವೆಲ್ ಆಪರೇಟರ್ ಒಬ್ಬರು ಐಷಾರಾಮಿ ವಾಹನವನ್ನು ಬಾಡಿಗೆಗೆ ಪಡೆದಿದ್ದು, ನಟಿ ಅದೇ ವಾಹನದಲ್ಲಿ ಪ್ರಯಾಣಿಸಿರುವುದು ತಿಳಿದುಬಂದಿದೆ.
ಅತಿ ದೊಡ್ಡ ಪ್ರಾಜೆಕ್ಟ್ ಎಂದಿದ್ದ ನಟಿ
ತಾವು ಶೂಟಿಂಗ್ ಪ್ರಾಜೆಕ್ಟ್ಗಾಗಿ ರೂರ್ಕೆಲಾಕ್ಕೆ ಬಂದಿದ್ದು, ಅದು ತಮ್ಮ ಜೀವನದ "ಅತಿದೊಡ್ಡ ಪ್ರಾಜೆಕ್ಟ್" ಎಂದು ನಟಿ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಸರ್ಕ್ಯೂಟ್ ಹೌಸ್ ತೋರಿಸುತ್ತಾ ನಟಿ, "ನಾನು ಸರ್ಕ್ಯೂಟ್ ಹೌಸ್ನಲ್ಲಿ ಉಳಿದುಕೊಳ್ಳಲಿದ್ದೇನೆ. ನಾನು ಹಿಂದೆ ಸರ್ಕಾರಿ ಉದ್ಯೋಗದಲ್ಲಿದ್ದೆ. ಆದರೆ ನನಗೆ ಇಂತಹ ಆತಿಥ್ಯ ಸಿಕ್ಕಿರಲಿಲ್ಲ. ಇಲ್ಲಿ ಉನ್ನತ ಅಧಿಕಾರಿಗಳು ಮಾತ್ರ ಉಳಿದುಕೊಳ್ಳುತ್ತಾರೆ. ಹಾಗಾಗಿ ನನ್ನನ್ನು ಆಹ್ವಾನಿಸಿರುವವರು ಸಾಮಾನ್ಯ ವ್ಯಕ್ತಿಗಳಲ್ಲ" ಎಂದು ಹೇಳಿಕೊಂಡಿದ್ದಾರೆ.
ಮುಂದುವರಿದು, "ನಾನು ಎಸ್ಪಿ ಮತ್ತು ಅವರ ಪುತ್ರರನ್ನು ಭೇಟಿ ಮಾಡಲಿದ್ದೇನೆ. ನಾನು ಒಂದು ಪ್ರಾಜೆಕ್ಟ್ಗಾಗಿ ಇಲ್ಲಿಗೆ ಬಂದಿದ್ದೇನೆ. ಅದರ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸುವುದಿಲ್ಲ" ಎಂದು ನಟಿ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ ಎನ್ನಲಾಗಿದೆ.
ತನಿಖೆಗೆ ಆದೇಶ
ನಟಿಯ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಪನ್ಪೋಷ್ ಉಪವಿಭಾಗಾಧಿಕಾರಿ ಕಚೇರಿಯಿಂದ ಪೊಲೀಸರು ಸಮಗ್ರ ವರದಿ ಕೇಳಿದ್ದಾರೆ. ಕೊಠಡಿ ಕಾಯ್ದಿರಿಸುವ ನಿಯಮಗಳು, ಕಳೆದ ಕೆಲವು ತಿಂಗಳ ವಿವರಗಳು, ಸರ್ಕ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಹೂಡಿದವರ ಮಾಹಿತಿ ಸೇರಿದಂತೆ ಸಂಬಂಧಿತ ದಾಖಲೆಗಳನ್ನು ಪೊಲೀಸರು ಕೇಳಿದ್ದಾರೆ.
ಕಳೆದ ವರ್ಷವಷ್ಟೇ ಉದ್ಘಾಟನೆಯಾಗಿದ್ದ ಸರ್ಕ್ಯೂಟ್ ಹೌಸ್
ಅಂದಹಾಗೆ ಹೊಸದಾಗಿ ನಿರ್ಮಿಸಲಾಗಿದ್ದ ರೂರ್ಕೆಲಾ ಸರ್ಕ್ಯೂಟ್ ಹೌಸ್ ಅನ್ನು ಕಳೆದ ವರ್ಷ ನವೆಂಬರ್ನಲ್ಲಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಉದ್ಘಾಟಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




