ಪ್ರಿಯಕರನ ಜೊತೆ ಓಡಿಹೋದ ಪತ್ನಿ; ಪತ್ತೆಹಚ್ಚಿ ಮಾಜಿ ಪ್ರೇಮಿಯೊಂದಿಗೇ ಮದುವೆ ಮಾಡಿಸಿದ ಜವಾನ!
ಮಹಿಳೆ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆಕೆಯ ಸ್ಥಳವನ್ನು ಪತ್ತೆಹಚ್ಚಿ ಮಾಜಿ ಪ್ರಿಯಕರನ ಜೊತೆ ಆಕೆಯನ್ನು ಪತ್ತೆ ಮಾಡಿದ್ದಾರೆ.

ಲಖನೌ: ಪತ್ನಿ ತನ್ನ ಮಾಜಿ ಪ್ರಿಯಕರನ ಜೊತೆ ಮನೆ ಬಿಟ್ಟು ಹೋಗಿದ್ದಕ್ಕೆ ಕೋಪಗೊಂಡು ಆಕೆಯನ್ನು ಬಲವಂತವಾಗಿ ವಾಪಸ್ ಕರೆತರುವ ಬದಲು, ಆಕೆಯ ಇಚ್ಛೆಯನ್ನು ಗೌರವಿಸಿ ಮಾಜಿ ಪ್ರಿಯಕರನ ಜೊತೆಗೇ ಮದುವೆ ಮಾಡಿಸಿದ ಅಪರೂಪದ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.
ಲಖನೌನ ಮಾಲಿಹಾಬಾದ್ ಪ್ರದೇಶದ ಮಹಿಳೆಯೊಬ್ಬರು ಸುಮಾರು ಒಂದು ವರ್ಷದ ಹಿಂದೆ PRD ಜವಾನನನ್ನು ಮದುವೆಯಾಗಿದ್ದರು. ಆದರೆ ನಾಲ್ಕು ದಿನಗಳ ಹಿಂದೆ ಪತಿ ಮನೆಯಿಂದ ಹೊರಹೋದ ಆಕೆ ತನ್ನ ಮಾಜಿ ಪ್ರಿಯಕರನ ಜೊತೆ ಹರ್ದೋಯಿಗೆ ತೆರಳಿದ್ದರು ಎನ್ನಲಾಗಿದೆ.
ಮಹಿಳೆ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆಕೆಯ ಸ್ಥಳವನ್ನು ಪತ್ತೆಹಚ್ಚಿ ಮಾಜಿ ಪ್ರಿಯಕರನ ಜೊತೆ ಆಕೆಯನ್ನು ಪತ್ತೆ ಮಾಡಿದ್ದಾರೆ. ಬಳಿಕ ಇಬ್ಬರನ್ನೂ ವಾಪಸ್ ಕರೆತಂದು, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮಾತುಕತೆ ನಡೆಸಲಾಯಿತು.
ಈ ವೇಳೆ ಮಹಿಳೆ ತಾನು ಪತಿಯೊಂದಿಗೆ ಮುಂದುವರಿಯಲು ಬಯಸುವುದಿಲ್ಲ. ತನ್ನ ಮಾಜಿ ಪ್ರಿಯಕರನ ಜೊತೆ ಜೀವನ ನಡೆಸಲು ಇಚ್ಛಿಸುವುದಾಗಿ ಪೊಲೀಸರಿಗೂ ಕುಟುಂಬಸ್ಥರಿಗೂ ತಿಳಿಸಿದ್ದಾಳೆ ಎನ್ನಲಾಗಿದೆ.
ಶಾಲಾ ಸಮಯದ ಲವ್
ಮಹಿಳೆ ಹಾಗೂ ಆಕೆಯ ಮಾಜಿ ಪ್ರಿಯಕರ ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಮದುವೆಗೂ ಮುನ್ನವೇ ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಆದರೆ ಕುಟುಂಬಸ್ಥರ ಒತ್ತಡದ ಹಿನ್ನೆಲೆಯಲ್ಲಿ ಮಹಿಳೆ PRD ಜವಾನನನ್ನು ಮದುವೆಯಾಗಿದ್ದಳು. ಮದುವೆಯಾದ ಬಳಿಕವೂ ಮಾಜಿ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.
ಪತ್ನಿ ತನ್ನೊಂದಿಗೆ ಇರಲು ಇಚ್ಛಿಸುತ್ತಿಲ್ಲ ಎಂಬುದು ತಿಳಿದ ಬಳಿಕ ಪತಿ ಆಕೆಯನ್ನು ಬಲವಂತವಾಗಿ ತನ್ನೊಂದಿಗೆ ಉಳಿಸಿಕೊಳ್ಳಲು ನಿರಾಕರಿಸಿದ್ದಾರೆ. ಬದಲಾಗಿ, ಆಕೆಯ ನಿರ್ಧಾರವನ್ನು ಗೌರವಿಸಲು ಮುಂದಾಗಿದ್ದಾರೆ.
ಲವರ್ ಜೊತೆ ಮದುವೆ ಮಾಡಿಸಿ ಪತಿ
ಅದರಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮಹಿಳೆ ಹಾಗೂ ಆಕೆಯ ಮಾಜಿ ಪ್ರಿಯಕರನಿಗೆ ಸ್ಥಳೀಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಲಾಯಿತು. ಇಬ್ಬರೂ ಪರಸ್ಪರ ಹಾರ ಬದಲಿಸಿಕೊಂಡು, ಅಗ್ನಿಸಾಕ್ಷಿಯಾಗಿ ಏಳು ಸುತ್ತುಗಳನ್ನು ಹಾಕಿದರು.
ಮದುವೆಯ ಬಳಿಕ PRD ಜವಾನನೇ ತನ್ನ ಪತ್ನಿಯನ್ನು ಮಾಜಿ ಪ್ರಿಯಕರನೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಇಬ್ಬರೂ ಮಾಲಿಹಾಬಾದ್ ಪ್ರದೇಶದ ನಿವಾಸಿಗಳಾಗಿದ್ದು, ಈ ಘಟನೆ ಇದೀಗ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪತ್ನಿಯ ನಿರ್ಧಾರವನ್ನು ಗೌರವಿಸಿ, ಆಕೆಯನ್ನು ಮಾಜಿ ಪ್ರಿಯಕರನೊಂದಿಗೆ ಕಳುಹಿಸಿಕೊಟ್ಟ ಪತಿಯ ನಡೆ ಕೂಡ ಜನರ ಗಮನ ಸೆಳೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



