ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ
ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ, ಆದರೆ, ನಾವು 50 ಸಾವಿರ ಆಧುನಿಕ ರೈಲು ಬೋಗಿಗಳನ್ನು ನಿರ್ಮಿಸಿದ್ದೇವೆ.

ವಡೋದರಾ: ದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳ ವೇಗದ ವಿಚಾರವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್‌ನ ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 35,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಬೃಹತ್ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯವರು ಮಾತನಾಡಿದರು.
ನವಿಮುಂಬೈನಲ್ಲಿರುವ ಜವಾಹರಲಾಲ್ ನೆಹರು ಬಂದರನ್ನು ಉತ್ತರ ಪ್ರದೇಶದ ದಾದ್ರಿಗೆ ಸಂಪರ್ಕಿಸುವ ಪಶ್ಚಿಮ ಸಮರ್ಪಿತ ಸರಕು ಸಾಗಣೆ ಮಾರ್ಗದ ಮೂರು ಪ್ರಮುಖ ವಿಭಾಗಗಳನ್ನು ಮೋದಿ ಉದ್ಘಾಟಿಸಿದರು.
ಬಳಿಕ ಸಮಾವೇಶದಲ್ಲಿ 2014ರ ಬಳಿಕ ಎನ್‌ಡಿಎ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿ ಮಾತನಾಡಿದ ಮೋದಿಯವರು, ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ, ಆದರೆ, ನಾವು 50 ಸಾವಿರ ಆಧುನಿಕ ರೈಲು ಬೋಗಿಗಳನ್ನು ನಿರ್ಮಿಸಿದ್ದೇವೆ ಎಂದು ಹೇಳಿದ್ದಾರೆ.
2014ರ ಬಳಿಕ ಭಾರತದಲ್ಲಿ 50,000 ಆಧುನಿಕ ರೈಲು ಬೋಗಿಗಳನ್ನು ನಿರ್ಮಿಸಲಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ 10 ವರ್ಷಗಳಲ್ಲಿ 50,000 ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.
ಸಮರ್ಪಿತ ಸರಕು ಸಾಗಣೆ ಮಾರ್ಗಗಳು ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಭಾರತದ ಜೀವನಾಡಿ. ಆಧುನಿಕ ಸರಕು ಸಾಗಣೆ ಜಾಲದಿಂದ ಭಾರತದ ಪರಿವರ್ತನೆಯ ವೇಗ ಹೆಚ್ಚಾಗಿದೆ.
ಈ ಹಿಂದೆ ಪ್ರಯಾಣಿಕ ರೈಲುಗಳು ಮತ್ತು ಸರಕು ರೈಲುಗಳು ಒಂದೇ ಹಳಿಯಲ್ಲಿ ಸಂಚರಿಸಬೇಕಾಗಿತ್ತು. ಇದರಿಂದ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆ ಎರಡೂ ನಿಧಾನವಾಗುತ್ತಿತ್ತು. ಆದರೆ, ಸಮರ್ಪಿತ ಸರಕು ಸಾಗಣೆ ಮಾರ್ಗ ಈ ಸಮಸ್ಯೆಯನ್ನು ಬದಲಾಯಿಸಿದೆ ಎಂದು ಹೇಳಿದರು.
ಈಗ ನಾರಾಜ್ ಫೂಫಾ’ ಅವರು ಟ್ರಕ್ ಚಾಲಕರಿಗೆ ಏನಾಗುತ್ತದೆ ಎಂದು ಕೂಗುತ್ತಾರೆ. ಫೂಫಾಗೆ ಈಗ ಕೆಲಸ ಸಿಕ್ಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ವ್ಯಂಗ್ಯವಾಡಿದರು.
2014ರ ಬಳಿಕ ನಿಮ್ಮ ಆಶೀರ್ವಾದದಿಂದ ನಾನು ದೆಹಲಿಗೆ ಬಂದಾಗ, ಅಲ್ಲಿಗೆ ತಲುಪಿದ ಕೂಡಲೇ ಈ ಯೋಜನೆಯ ಕಾಮಗಾರಿಗೆ ವೇಗ ನೀಡಲು ಆರಂಭಿಸಿದ್ದೆವು. ಇಂದು ಸಮರ್ಪಿತ ಸರಕು ಸಾಗಣೆ ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದೆ. ಇಂದು ಪೂರ್ವ ಮತ್ತು ಪಶ್ಚಿಮ ಸಮರ್ಪಿತ ಸರಕು ಸಾಗಣೆ ಮಾರ್ಗಗಳು ದೇಶದ ವ್ಯಾಪಾರ ಮತ್ತು ವಾಣಿಜ್ಯದ ಪ್ರಮುಖ ಬೆನ್ನೆಲುಬಾಗಿ ರೂಪುಗೊಳ್ಳುತ್ತಿವೆ.
ಸುಮಾರು 2,800 ಕಿ.ಮೀ ಉದ್ದದ ಸಮರ್ಪಿತ ಸರಕು ಸಾಗಣೆ ಮಾರ್ಗ ಕಳೆದ 12 ವರ್ಷಗಳಲ್ಲಿ ದೇಶದ ಕಾರ್ಯಸಂಸ್ಕೃತಿಯಲ್ಲಿ ಆಗಿರುವ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಸಮರ್ಪಿತ ಸರಕು ಸಾಗಣೆ ಮಾರ್ಗದ ಕಲ್ಪನೆ 2004ರಲ್ಲಿ ಆರಂಭವಾಯಿತು. 2006ರಲ್ಲಿ ಕಾಮಗಾರಿ ಕೈಗೊಳ್ಳಲು ವಿಶೇಷ ಕಂಪನಿ ಸ್ಥಾಪಿಸಲಾಯಿತು. ಆದರೆ. 2014ರವರೆಗೆ ಕಡತಗಳು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಓಡಾಡುತ್ತಲೇ ಇದ್ದವು.
ದುರದೃಷ್ಟವಶಾತ್, ಆ ಕಡತಗಳಿಗೂ ಸಮರ್ಪಿತ ಮಾರ್ಗದ ಭಾಗ್ಯ ಇರಲಿಲ್ಲ. ಕಡತಗಳು ಒಂದೆಡೆ ಸಿಲುಕಿಕೊಂಡು, ಮತ್ತೊಂದೆಡೆ ನೇತಾಡುತ್ತಾ, ದಿಕ್ಕಿಲ್ಲದೆ ಅಲೆದಾಡುತ್ತಿದ್ದವು ಎಂದು ಹಿಂದಿನ ಸರ್ಕಾರವನ್ನು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



