ರಕ್ಷಾಬಂಧನ ದಿನದಂದೇ ಅಣ್ಣನ ಬಗ್ಗೆ ಕೆಟ್ಟ ಕಾಮೆಂಟ್, ಅತ್ತಿಗೆಯ ಕತ್ತು ಕೊಯ್ದು ನೀರಿನ ಟ್ಯಾಂಕ್‌ಗೆ ಎಸೆದ ತಂಗಿ!
ಮೃತ ಮಹಿಳೆಯನ್ನು ವಂದನಾ ಎಂದು ಗುರುತಿಸಲಾಗಿದೆ. ವಂದನಾ ಅವರು ಆಗಸ್ಟ್ 11ರಂದು ಕುಟುಂಬದ ವಿರೋಧದ ನಡುವೆಯೇ ಉಪೇಂದ್ರ ಎಂಬುವರನ್ನು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು.

ಇಂದೋರ್: ರಕ್ಷಾಬಂಧನದಂದು ತನ್ನ ಸಹೋದರನ ಬಗ್ಗೆ ಅತ್ತಿಗೆ ವ್ಯಂಗ್ಯವಾಗಿ ಮಾತನಾಡಿದ್ದಾಳೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ತಂಗಿಯೊಬ್ಬಳು ಅತ್ತಿಗೆಯನ್ನೇ ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದ್ದು, ತನ್ನ ಅಣ್ಣನ ಕುರಿತು ಕ್ಷುಲ್ಲಕವಾಗಿ ಮಾತನಾಡಿದ್ದಾಳೆ ಎಂಬ ಕಾರಣಕ್ಕೇ ತಂಗಿ ತನ್ನ ಅತ್ತಿಗೆಯನ್ನು ಭೀಕರವಾಗಿ ಕೊಂದು ಹಾಕಿದ್ದಾಳೆ.
ಕೊಲೆ ಬಳಿಕ ಶವವನ್ನು ಮನೆಯ ಹೊರಗಿದ್ದ ನೀರಿನ ಟ್ಯಾಂಕ್‌ಗೆ ಎಸೆದು ಪೊಲೀಸರನ್ನೂ ಕುಟುಂಬದವರನ್ನೂ ದಿಕ್ಕುತಪ್ಪಿಸಲು ಯತ್ನಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪಾರ್ವತಿ ಬಾಯಿ ಕುಶ್ವಾಹ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ವಂದನಾ ಎಂದು ಗುರುತಿಸಲಾಗಿದೆ. ವಂದನಾ ಅವರು ಆಗಸ್ಟ್ 11ರಂದು ಕುಟುಂಬದ ವಿರೋಧದ ನಡುವೆಯೇ ಉಪೇಂದ್ರ ಎಂಬುವರನ್ನು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಕುಟುಂಬಗಳಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದಾಗಿ ದಂಪತಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಪಾರ್ವತಿಯ ಸಹೋದರ ದಮೋಹ್‌ನಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾನೆ ಎನ್ನಲಾಗಿದೆ. ರಕ್ಷಾಬಂಧನದ ದಿನ ವಂದನಾ ಆತನ ಬಗ್ಗೆ ಮಾತನಾಡಿದ್ದರಿಂದ ಪಾರ್ವತಿಗೆ ಕೋಪ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿ ತೀವ್ರಗೊಂಡ ಬಳಿಕ ಆಕ್ರೋಶಗೊಂಡ ಪಾರ್ವತಿ ವಂದನಾಳನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಕೊಲೆ ನಡೆದ ಸಂದರ್ಭದಲ್ಲಿ ಪಾರ್ವತಿಯ ಮಕ್ಕಳು ಶಾಲೆಯಲ್ಲಿದ್ದರು. ಆಕೆಯ ಪತಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಪಾರ್ವತಿ ಚಾಕುವಿನಿಂದ ವಂದನಾಳ ಕುತ್ತಿಗೆಗೆ ಎರಡು ಬಾರಿ ಇರಿದಿದ್ದಾಳೆ. ಬಳಿಕ ಶವವನ್ನು ಮನೆಯ ಹೊರಗೆ ಎಳೆದುಕೊಂಡು ಹೋಗಿ ಅಲ್ಲಿದ್ದ ನೀರಿನ ಟ್ಯಾಂಕ್‌ಗೆ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯದಿಂದ ಶಂಕೆ
ಕೊಲೆ ಬಳಿಕ ಪಾರ್ವತಿ ತನ್ನ ಪತಿಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಳು. ಇತ್ತ ವಂದನಾ ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ CCTV ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.
CCTV ದೃಶ್ಯಗಳ ಆಧಾರದ ಮೇಲೆ ಪೊಲೀಸರು ಪಾರ್ವತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಪಾರ್ವತಿ ಪೊಲೀಸರನ್ನು ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದಳು. ಆದರೆ ವಿಚಾರಣೆ ತೀವ್ರಗೊಂಡಂತೆ ಆಕೆ ಕುಸಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಲು ಬಳಸಿದ ಚಾಕುವಿನ ಮೇಲೆ ಬೆರಳಚ್ಚು ಪತ್ತೆಯಾಗಿದೆ ಹಾಗೂ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ ಬಳಿಕ ಪಾರ್ವತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



