ದೇಶ

ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗದ ಕಾರು ಡಿಕ್ಕಿ; 3 ವರ್ಷದ ಮಗು ಸೇರಿ ಮೂವರ ಸಾವು

ಮೃತರನ್ನು ಚಾವಕ್ಕಾಡ್‌ನ ಎಡಕ್ಕಳಿಯೂರು ನಿವಾಸಿಗಳಾದ ಮುನೀರ್ (35), ಅವರ ಪತ್ನಿ ಸಫ್ನಾ (25) ಹಾಗೂ ಅವರ ಪುತ್ರ ಯಾಮಿಲ್ ಐಬಕ್ (3) ಎಂದು ಗುರುತಿಸಲಾಗಿದೆ.

ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗದ ಕಾರು ಡಿಕ್ಕಿ; 3 ವರ್ಷದ ಮಗು ಸೇರಿ ಮೂವರ ಸಾವು
ಕೇರಳದಲ್ಲಿ ಭೀಕರ ಅಪಘಾತ
Published On :

ತ್ರಿಶೂರ್: ಫೋನ್ ಕರೆ ಸ್ವೀಕರಿಸಲು ರಸ್ತೆ ಬದಿ ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, 3 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.

ಮೃತರನ್ನು ಚಾವಕ್ಕಾಡ್‌ನ ಎಡಕ್ಕಳಿಯೂರು ನಿವಾಸಿಗಳಾದ ಮುನೀರ್ (35), ಅವರ ಪತ್ನಿ ಸಫ್ನಾ (25) ಹಾಗೂ ಅವರ ಪುತ್ರ ಯಾಮಿಲ್ ಐಬಕ್ (3) ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ಶನಿವಾರ ಮಧ್ಯರಾತ್ರಿ ಮುನ್ನ ಗುರುವಾಯೂರು-ಕುನ್ನಂಕುಳಂ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬವು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುತ್ತಿತ್ತು. ಈ ವೇಳೆ ಫೋನ್ ಕರೆ ಸ್ವೀಕರಿಸಲು ಅವರು ರಸ್ತೆ ಬದಿಯಲ್ಲಿ ತಮ್ಮ ಬೈಕ್ ನಿಲ್ಲಿಸಿದ್ದರು.

ಅದೇ ಸಂದರ್ಭದಲ್ಲಿ ಅತಿವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಳಿಯಲ್ಲಿ ಹಾರಿಬಿದ್ದ ಕುಟುಂಬ

ಡಿಕ್ಕಿಯ ರಭಸಕ್ಕೆ ಮೂವರೂ ಸುಮಾರು 50 ಮೀಟರ್ ದೂರಕ್ಕೆ ಎಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಮೃತಪಟ್ಟಿದ್ದಾರೆ.

ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕ ಕುನ್ನಂಕುಳಂನ ಬಾರ್‌ನಿಂದ ಹಿಂದಿರುಗುತ್ತಿದ್ದ ಎನ್ನಲಾಗಿದ್ದು, ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಕಾರು ಚಾಲಕನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ, ಇದಕ್ಕೂ ಒಂದು ದಿನ ಮುನ್ನ ತ್ರಿಶೂರ್‌ನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿತ್ತು.

ತಮಿಳುನಾಡಿನ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.