ಮಧ್ಯಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 12 ಮಂದಿ ಸಾವು, ಹಲವರ ಸ್ಥಿತಿ ಗಂಭೀರ!
ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಈ ದುರಂತದಲ್ಲಿ ಹತ್ತಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸಾಗರ (ಮಧ್ಯಪ್ರದೇಶ): ಕೆಲ ಕುಡುಕರಿಗೆ ಎಣ್ಣೆ ಬೇಕು ಅಷ್ಟೇ.. ಅದು ಅಸಲಿ ಎಣ್ಣೆ ಆದರೂ ಓಕೆ ಇಲ್ಲ ನಕಲಿ ಎಣ್ಣೆ ಆದರೂ ಓಕೆ, ಒಟ್ಟಿನಲ್ಲಿ ಎಣ್ಣೆ ಬೇಕು.! ಹೀಗೆ ಎಣ್ಣೆ ಆರಿಸಿ ರಾತ್ರಿ ಹೊರಟ ಕುಡಕರು ಯಮನಪಾದ ಸೇರಿದ್ದಾರೆ. ಹೌದು, ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ನಡೆದ ಈ ದುರಂತದಲ್ಲಿ ಹತ್ತಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಸಾಗರ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಂದಾ ತೆಹಸಲ್ ವ್ಯಾಪ್ತಿಯ ಬರಾಜ್, ಘೂಘರ್, ನಾವ್‌ರಾಜ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ಘಟನೆ ಸಂಭವಿಸಿದ್ದು, ಶನಿವಾರ ರಾತ್ರಿ ಮದ್ಯ ಸೇವಿಸಿದ್ದ ಗ್ರಾಮಸ್ಥರಿಗೆ ಭಾನುವಾರ ಮುಂಜಾನೆ ವೇಳೆಗೆ ತೀವ್ರ ತಲೆನೋವು, ವಾಂತಿ ಮತ್ತು ಕಣ್ಣು ಮಂಜಾಗುವಿಕೆ ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ 12 ಮಂದಿ ಕೊನೆಯುಸಿರೆಳೆದಿದ್ದಾರೆ.
ಮುಂದುವರೆದು, ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ, ಸಂತ್ರಸ್ತರ ದೇಹದಲ್ಲಿ ಸೈನೋಸಿಸ್ (ದೇಹ ಹಾಗೂ ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು) ಮತ್ತು ಸ್ನಾಯು ಬಿಗಿತದ ಲಕ್ಷಣಗಳು ಕಂಡುಬಂದಿವೆ. ಮದ್ಯದಲ್ಲಿ ಅತ್ಯಂತ ವಿಷಪೂರಿತವಾದ ಮಿಥೈಲ್ ಆಲ್ಕೋಹಾಲ್ ಮಿಶ್ರಣವಾಗಿರುವ ಬಲವಾದ ಶಂಕೆಯನ್ನು ಮುಖ್ಯ ವೈದ್ಯಕೀಯ ಅಧಿಕಾರಿ ವ್ಯಕ್ತಪಡಿಸಿದ್ದಾರೆ. ಇನ್ನು, ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ 6 ಮದ್ಯದ ಅಂಗಡಿಗಳನ್ನು ಸೀಲ್ ಮಾಡಲಾಗಿದೆ.
ಏತನ್ಮಧ್ಯೆ, ಪ್ರಾಥಮಿಕ ತನಿಖೆಯಲ್ಲಿ ಈ ನಕಲಿ ಮದ್ಯದ ಜಾಲವು ಉತ್ತರ ಪ್ರದೇಶದ ಲಲಿತಪುರ ಗಡಿಯಿಂದ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಆರೋಪಿಗಳು ಲಲಿತಪುರದಲ್ಲಿ ನಕಲಿ ಮದ್ಯ ತಯಾರಿಸಿ, ಅಸಲಿ ಬ್ರ್ಯಾಂಡ್‌ಗಳಂತೆ ಕಾಣುವಂತೆ ನಕಲಿ ಲೇಬಲ್‌ಗಳು, ಕ್ಯಾಪ್‌ಗಳು ಹಾಗೂ ನಕಲಿ ಕ್ಯೂಆರ್ ಕೋಡ್‌ಗಳನ್ನು ಬಾಟಲಿಗಳ ಮೇಲೆ ಅಂಟಿಸುತ್ತಿದ್ದರು. ನಂತರ ಕಾರು ಮತ್ತು ಬೈಕ್‌ಗಳ ಮೂಲಕ ಸಾಗರ್ ಜಿಲ್ಲೆಯ ಗಡಿ ಗ್ರಾಮಗಳಿಗೆ ಪೂರೈಸುತ್ತಿದ್ದರು ಎಂದು ತಿಳಿದುಬಂದಿದೆ. ಈ ದಂಧೆಯಲ್ಲಿ ಸ್ಥಳೀಯರ ಕೈವಾಡದ ಬಗ್ಗೆಯೂ ಪೊಲೀಸರು ಜಾಲಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


