ದೇಶ

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!

ಭಾರತೀಯ ವಾಯುಪಡೆಯಲ್ಲಿ ಹಲವಾರು ಕಮಾಂಡಿಂಗ್ ಹುದ್ದೆಗಳನ್ನು ಹೊಂದಿದ್ದ ಮಿಶ್ರಾ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು.

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!
ಜಿತೇಂದ್ರ ಮಿಶ್ರಾ
Published On :

ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ನಂತರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ನೇಮಕ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಮತ್ತು ಉನ್ನತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.

ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿಗಳು ಬಂದಿದ್ದು, ಈ ಪೈಕಿ ಕೇವಲ 20 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನ ಸುತ್ತಿಗೆ ಆಯ್ಕೆ ಮಾಡಲಾಗಿದೆ.

ಸಂದರ್ಶನದ ನಂತರ ರಾಮ ಮಂದಿರ ಟ್ರಸ್ಟ್‌ಗೆ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

ಭಾರತೀಯ ವಾಯುಪಡೆಯಲ್ಲಿ ಹಲವಾರು ಕಮಾಂಡಿಂಗ್ ಹುದ್ದೆಗಳನ್ನು ಹೊಂದಿದ್ದ ಮಿಶ್ರಾ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು.

ಟ್ರಸ್ಟ್ ಮೊದಲ ಬಾರಿಗೆ ಒಬ್ಬ ಮಹಿಳೆ ಸೇರಿದಂತೆ ಮೂವರು ಹೊಸ ಟ್ರಸ್ಟಿಗಳನ್ನು ಸಹ ಘೋಷಿಸಿದೆ.

ಮೂವರು ಹೊಸ ಟ್ರಸ್ಟಿಗಳಲ್ಲಿ ದೆಹಲಿ ಮೂಲದ ಮಹೇಶ್ ಭಾಗಚಂದ್ಕ, ಅಯೋಧ್ಯೆಯ ವಕೀಲ ಮದನ್ ಮೋಹನ್ ಪಾಂಡೆ ಮತ್ತು ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿರುವ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಇದ್ದಾರೆ.

ಯಾರು ಈ ಜೀತೇಂದ್ರ ಮಿಶ್ರಾ?

ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯ ನಿವೃತ್ತ ಹಿರಿಯ ಅಧಿಕಾರಿಯಾಗಿದ್ದು, ವಾಯುಪಡೆಯ ಪಶ್ಚಿಮ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸುಮಾರು 38 ವರ್ಷಗಳಿಗೂ ಅಧಿಕ ಅವಧಿಯ ವೃತ್ತಿ ಜೀವನದಲ್ಲಿ ಇವರು ವಾಯುಪಡೆಯಲ್ಲಿ ಹಲವು ಪ್ರಮುಖ ಆಡಳಿತ ಮತ್ತು ಕಮಾಂಡ್ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇವುಗಳಲ್ಲಿ ಫೈಟರ್ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್, ಏರ್‌ಕ್ರಾಫ್ಟ್ & ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್‌ನ (ASTE) ಮುಖ್ಯ ಪರೀಕ್ಷಾ ಪೈಲಟ್ (Chief Test Pilot), ಎರಡು ವಾಯುನೆಲೆಗಳ ಏರ್ ಆಫೀಸರ್ ಕಮಾಂಡಿಂಗ್, ವಾಯುನೆಲೆ ಕಚೇರಿಯ ನಿರ್ದೇಶಕ, ಪ್ರಿನ್ಸಿಪಾಲ್ ಡೈರೆಕ್ಟರ್ (ASR) ಹಾಗೂ ಸಹಾಯಕ ವಾಯುಪಡೆ ಮುಖ್ಯಸ್ಥ (ಯೋಜನೆಗಳು), ASTE ಕಮಾಂಡೆಂಟ್ ಮತ್ತು ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್‌ ಉಪಮುಖ್ಯಸ್ಥ ಮುಂತಾದ ಜವಾಬ್ದಾರಿಗಳನ್ನು ನಿರ್ವಹಸಿದ್ದಾರೆ. ಈ ಪ್ರಸ್ತುತ ಹುದ್ದೆಯನ್ನು ವಹಿಸಿಕೊಳ್ಳುವುದಕ್ಕೂ ಮುನ್ನ ಅವರು ಸಂಯೋಜಿತ ರಕ್ಷಣಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಈ ಹಿರಿಯ ವಾಯುಪಡೆ ಅಧಿಕಾರಿಯು ‘ಅತಿ ವಿಶಿಷ್ಟ ಸೇವಾ ಪದಕ’ ಮತ್ತು ‘ವಿಶಿಷ್ಟ ಸೇವಾ ಪದಕ’ಗಳ ಗೌರವಕ್ಕೆ ಭಾಜನರಾಗಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.