'ಜಂತರ್ ಮಂತರ್'ಗೆ ಅಕ್ರಮವಾಗಿ ಪ್ರವೇಶ: CJPಯ ದಾಸ್, ರಂಕಾಗೆ 5 ದಿನ ನ್ಯಾಯಾಂಗ ಬಂಧನ; ತಿಹಾರ್ ಜೈಲಿಗೆ ಸ್ಥಳಾಂತರ; Video
ಪ್ರತಿಭಟನೆಗೆ ನಿಗದಿಪಡಿಸಿದ್ದ ಸ್ಥಳಗಳ ಪಟ್ಟಿಯಿಂದ ಇತ್ತೀಚೆಗೆ ಕೈಬಿಡಲಾಗಿದ್ದ ಜಂತರ್ ಮಂತರ್ನ ಪ್ರತಿಭಟನಾ ಸ್ಥಳಕ್ಕೆ ಬ್ಯಾರಿಕೇಡ್ಗಳನ್ನು ದಾಟಿ ಪ್ರವೇಶಿಸಿದ ಆರೋಪದ ಮೇಲೆ ನಿನ್ನೆ ಮಂಗಳವಾರ ಮುಂಜಾನೆ ಈ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.

ಜಂತರ್ ಮಂತರ್ಗೆ ಅತಿಕ್ರಮಣ ಪ್ರವೇಶಿಸಿದ ಹಾಗೂ ಶಾಂತಿ ಕಾಪಾಡುವ ಬಾಂಡ್ನ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಇಂದು ಬುಧವಾರ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಿಹಾರ್ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ಸೌರವ್ ದಾಸ್, ಆಶುತೋಷ್ ರಂಕಾ, ಅಜಿಂಕ್ಯ ಶಿಂಧೆ ಸೇರಿದಂತೆ ಸಿಜೆಪಿಯ 11 ಮಂದಿ ಸದಸ್ಯರು ನಿನ್ನೆ ಮಂಗಳವಾರ ಬೆಳಗ್ಗೆ ಖಾಸಗಿ ಆವರಣದ ಮೂಲಕ ಅತಿಕ್ರಮಣ ಮಾಡಿ ಜಂತರ್ ಮಂತರ್ ಪ್ರವೇಶಿಸಿದ್ದರು.
ನಿನ್ನೆ ಮುಂಜಾನೆ ಮೂವರು ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು. ಬ್ಯಾರಿಕೇಡ್ಗಳನ್ನು ಉಲ್ಲಂಘಿಸಿ, ಇತ್ತೀಚೆಗೆ ಪ್ರತಿಭಟನೆ ನಡೆಸಲು ನಿಗದಿಪಡಿಸಿದ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದ್ದ ಜಂತರ್ ಮಂತರ್ಗೆ ಪ್ರವೇಶಿಸಿದ ಆರೋಪ ಅವರ ಮೇಲಿದೆ. ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರು.
ದೆಹಲಿ ಉಪ ಪೊಲೀಸ್ ಆಯುಕ್ತ ಸಚಿನ್ ಶರ್ಮಾ, ಸಿಜೆಪಿಯ ಎಲ್ಲ 14 ಸದಸ್ಯರನ್ನು ವಶಕ್ಕೆ ಪಡೆದು ಅವರ ವಿರುದ್ಧ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅತಿಕ್ರಮಣ, ನಿಷೇಧಾಜ್ಞೆ ಉಲ್ಲಂಘನೆ, ಶಾಂತಿ ಕಾಪಾಡುವ ಬಾಂಡ್ನ ಷರತ್ತುಗಳ ಉಲ್ಲಂಘನೆ ಹಾಗೂ ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪಗಳು ಪ್ರಕರಣಗಳಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ.
ಒಂದು ಪ್ರಕರಣವನ್ನು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳಾದ 223A, 332 ಮತ್ತು 61(2)ರ ಅಡಿಯಲ್ಲಿ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣವನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ಗಳಾದ 221, 115(2), 132, 121(1) ಮತ್ತು 3(5)ರ ಅಡಿಯಲ್ಲಿ ದಾಖಲಿಸಲಾಗಿದೆ.
ಸೌರವ್ ದಾಸ್, ಆಶುತೋಷ್ ರಂಕಾ, ಅಜಿಂಕ್ಯ ಶಿಂಧೆ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ಹಾಜರುಪಡಿಸಲಾಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ಗಳಾದ 126/170ರ ಅಡಿಯಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಕಾನೂನನ್ನು ಪದೇಪದೆ ಉಲ್ಲಂಘಿಸಿರುವುದು ಮತ್ತು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಮತ್ತೆ ಇಂತಹ ಕೃತ್ಯಗಳಲ್ಲಿ ತೊಡಗುವ ಹಾಗೂ ಇತರರನ್ನು ಪ್ರಚೋದಿಸುವ ಸಾಧ್ಯತೆ ಇರುವ ಗಂಭೀರ ಆತಂಕದ ಹಿನ್ನೆಲೆಯಲ್ಲಿ ದಾಸ್ ಮತ್ತು ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಎಸ್ಇಎಂ ನ್ಯಾಯಾಲಯ ಆದೇಶಿಸಿದೆ ಎಂದು ಸಚಿನ್ ಶರ್ಮಾ ಹೇಳಿದ್ದಾರೆ.
ಅಜಿಂಕ್ಯ ಶಿಂಧೆ ಅವರು ವೈಯಕ್ತಿಕ ಬಾಂಡ್ ಮತ್ತು 5,000 ರೂಪಾಯಿ ಮೌಲ್ಯದ ಜಾಮೀನುದಾರರ ಭದ್ರತೆಯೊಂದಿಗೆ ಆರು ತಿಂಗಳ ಕಾಲ ಶಾಂತಿ ಹಾಗೂ ಉತ್ತಮ ನಡವಳಿಕೆಯನ್ನು ಕಾಪಾಡಿಕೊಳ್ಳುವಂತೆ ಷರತ್ತುಬದ್ಧ ಬದ್ಧತೆಗೆ ಒಳಗಾಗಿದ್ದಾರೆ.
ಕಳೆದ ಶನಿವಾರ ನಡೆದ ಹಿಂದಿನ ಪ್ರತಿಭಟನೆಯ ಸಂದರ್ಭದಲ್ಲಿ ವಶಕ್ಕೆ ಪಡೆಯಲ್ಪಟ್ಟಿದ್ದ ರಂಕಾ ಮತ್ತು ದಾಸ್, ಒಂದು ವರ್ಷದವರೆಗೆ ಶಾಂತಿ ಕಾಪಾಡುವ ಬಾಂಡ್ಗೆ ಸಹಿ ಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, ಭಿನ್ನಮತವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಸೌರವ್ ದಾಸ್, ಆಶುತೋಷ್ ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ತಪ್ಪೇ ಎಂದು ಕೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




