ದೇಶ

'ಹಿಂದೂ ಅಂಗಡಿಗಳಿಂದಲೇ ಬಿರಿಯಾನಿ ಖರೀದಿಸಿ': ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ರಾಜಕೀಯ ವಿವಾದ!

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೊಂದಿಗೆ ಗುರುತಿಸಿಕೊಂಡಿರುವ 'ಹಿಂದೂ ಜಾಗರಣ ಮಂಚ್' ಎಂಬ ಸಂಘಟನೆಯು ಸಿಲಿಗುರಿಯಲ್ಲಿ ಈ ಪೋಸ್ಟರ್‌ಗಳನ್ನು ಅಳವಡಿಸಿದೆ.

'ಹಿಂದೂ ಅಂಗಡಿಗಳಿಂದಲೇ ಬಿರಿಯಾನಿ ಖರೀದಿಸಿ': ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ರಾಜಕೀಯ ವಿವಾದ!
ಗೋಡೆಗೆ ಪೋಸ್ಟರ್ ಅಂಟಿಸಿರುವ ಚಿತ್ರ
Published On :

ಕೋಲ್ಕತ್ತ: ದುರ್ಗಾ ಪೂಜೆಗೂ ಮುನ್ನ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದವೊಂದು ಭುಗಿಲೆದ್ದಿದೆ. ಹಿಂದೂ ಮಾಲೀಕತ್ವದ ಅಂಗಡಿಗಳಿಂದಲೇ ಬಿರಿಯಾನಿ ಮತ್ತು ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವಂತೆ ಕರೆ ನೀಡುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದೇ ಈ ವಿವಾದಕ್ಕೆ ಕಾರಣ. ಈ ಪೋಸ್ಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷಗಳು ಪೊಲೀಸರನ್ನು ಒತ್ತಾಯಿಸಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೊಂದಿಗೆ ಗುರುತಿಸಿಕೊಂಡಿರುವ 'ಹಿಂದೂ ಜಾಗರಣ ಮಂಚ್' ಎಂಬ ಸಂಘಟನೆಯು ಸಿಲಿಗುರಿಯಲ್ಲಿ ಈ ಪೋಸ್ಟರ್‌ಗಳನ್ನು ಅಳವಡಿಸಿದೆ. ತಮ್ಮ ಅಭಿಯಾನವನ್ನು ಸಮರ್ಥಿಸಿಕೊಂಡಿರುವ ಸಂಘಟನೆಯು, ಇವು ಕೇವಲ ಮನವಿಯೇ ಹೊರತು ಆದೇಶವಲ್ಲ ಎಂದು ಸ್ಪಷ್ಟಪಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್‌ವೊಂದರಲ್ಲಿ ಬಿರಿಯಾನಿ ತಿನ್ನುವುದರಿಂದ ಯಾರೂ ನಿಮ್ಮನ್ನು ತಡೆಯುತ್ತಿಲ್ಲ. ಖಂಡಿತವಾಗಿಯೂ ಬಿರಿಯಾನಿ ತಿನ್ನಿ, ಆದರೆ ಹಿಂದೂ ಅಂಗಡಿಗಳಿಂದಲೇ ಖರೀದಿಸಿ" ಎಂಬ ಸಂದೇಶವಿದೆ. ಆಹಾರ ಖರೀದಿಯನ್ನು ಧರ್ಮದೊಂದಿಗೆ ಜೋಡಿಸುವ ಈ ಪ್ರಯತ್ನಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ನಾಯಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ತೃಣಮೂಲ ಕಾಂಗ್ರೆಸ್ ವಕ್ತಾರ ಹಾಗೂ ಬೆಲೆಘಾಟಾ ಕ್ಷೇತ್ರದ ಶಾಸಕ ಕುನಾಲ್ ಘೋಷ್ ಈ ಅಭಿಯಾನವನ್ನು ಟೀಕಿಸಿದ್ದಾರೆ. ಆಹಾರದ ರುಚಿಯನ್ನು ಧಾರ್ಮಿಕ ಗುರುತಿನ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿಲ್ಲದ ಕಾರಣ, ಸಿಲಿಗುರಿ ಘಟನೆಯು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ. "ಹಿಂದೂ ಮಾಲೀಕತ್ವದ ಅಂಗಡಿಯ ಬಿರಿಯಾನಿ ಅತ್ಯುತ್ತಮ ರುಚಿಯನ್ನು ಹೊಂದಿರಬಹುದು, ಹಾಗೆಯೇ ಮುಸ್ಲಿಂ ಮಾಲೀಕತ್ವದ ಅಂಗಡಿಯ ಬಿರಿಯಾನಿಯೂ ಅಷ್ಟೇ ರುಚಿಕರವಾಗಿರಬಹುದು. ಆಹಾರವನ್ನು ಅದರ ರುಚಿಯಿಂದ ಗುರುತಿಸಲಾಗುತ್ತದೆ, ಧರ್ಮದಿಂದಲ್ಲ. ಇಂತಹ ಆದೇಶಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಘೋಷ್ ಹೇಳಿದ್ದಾರೆ.

ಸಿಪಿಐ(ಎಂ)ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಅಶೋಕ್ ಭಟ್ಟಾಚಾರ್ಯ , ಈ ಪೋಸ್ಟರ್‌ಗಳನ್ನು ಅಂಟಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. "ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ದೇಶದಲ್ಲಿ ಇಂತಹ ಪೋಸ್ಟರ್‌ಗಳನ್ನು ಅಂಟಿಸುವುದು ಅಪರಾಧ. ಆಡಳಿತವು ಕೇವಲ ಅವುಗಳನ್ನು ತೆರವುಗೊಳಿಸುವುದಲ್ಲದೆ, ಈ ಕೋಮು ಪ್ರಚಾರದ ಹಿಂದಿರುವವರನ್ನು ಬಂಧಿಸಬೇಕು ಎಂದು ಅವರು ಹೇಳಿದ್ದಾರೆ.

ಎಲ್ಲಾ ಧರ್ಮದ ಜನರಿಗೆ ಸಂವಿಧಾನವು ಸಮಾನ ಹಕ್ಕುಗಳನ್ನು ಖಾತರಿಪಡಿಸುತ್ತದೆ ಮತ್ತು ಒಬ್ಬ ವ್ಯಕ್ತಿಯ ಜೀವನೋಪಾಯವನ್ನು ಅವರ ಧರ್ಮದ ಆಧಾರದ ಮೇಲೆ ನಿರ್ಧರಿಸಬಾರದು ಎಂದು ಎಡಪಕ್ಷಗಳು ಪ್ರತಿಪಾದಿಸಿವೆ. ದುರ್ಗಾ ಪೂಜೆಯ ಮುನ್ನಾ ಪಶ್ಚಿಮ ಬಂಗಾಳದಲ್ಲಿ ಈ ವಿವಾದವು ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದೆ; ವಿರೋಧ ಪಕ್ಷದ ನಾಯಕರು ಈ ಅಭಿಯಾನದ ಹಿಂದಿರುವ ಧಾರ್ಮಿಕ ಸಂದೇಶದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.