ದೇಶ

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಭಾರತದ ಸಮುದ್ರ ತೀರದ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಗೆ ಮೂರನೇ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಐಎನ್‌ಎಸ್ ಮಂಗ್ರೋಲ್ ಸೇರ್ಪಡೆಗೊಳಿಸಲಾಗಿದೆ.

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video
ಐಎನ್ಎಸ್ ಮಂಗ್ರೋಲ್ ನೌಕಾಪಡೆಗೆ ಸೇರ್ಪಡೆ
Published On :

ಮುಂಬೈ: ಭಾರತದ ಸಮುದ್ರದ ಗಡಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ದೊರೆತಿದ್ದು, 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೋಮವಾರ ಸೇರ್ಪಡೆಯಾಗಿದೆ.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ಸ್ವದೇಶಿ ಯುದ್ಧನೌಕೆಯನ್ನು ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ಪಶ್ಚಿಮ ನೌಕಾ ಕಮಾಂಡ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.

ಕರಾವಳಿ ಮತ್ತು ಕಡಿಮೆ ಆಳದ ಸಮುದ್ರ ಪ್ರದೇಶಗಳಲ್ಲಿ ಶತ್ರುಗಳ ಜಲಾಂತರ್ಗಾಮಿ ಬೆದರಿಕೆಗಳನ್ನು ಪತ್ತೆಹಚ್ಚಿ ಎದುರಿಸುವ ನೌಕಾಪಡೆಯ ಸಾಮರ್ಥ್ಯವನ್ನು ಈ ಯುದ್ಧನೌಕೆ ಹೆಚ್ಚಿಸಲಿದೆ.

ಶೇ.80ಕ್ಕೂ ಹೆಚ್ಚು ಸ್ವದೇಶಿ ತಂತ್ರಜ್ಞಾನ

ಐಎನ್‌ಎಸ್ ಮಂಗ್ರೋಲ್‌ನ ವಿಶೇಷತೆ ಎಂದರೆ ಇದರಲ್ಲಿ ಶೇ.80ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಭಾರತದ ಎಂಜಿನಿಯರಿಂಗ್ ಸಾಮರ್ಥ್ಯ, ತಾಂತ್ರಿಕ ಪ್ರಗತಿ ಮತ್ತು ಸ್ವಾವಲಂಬನೆಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಹೇಳಿದರು.

ಭಾರತೀಯ ನೌಕಾಪಡೆಯ ಬಲವರ್ಧನೆಯ ಕುರಿತು ಮಾತನಾಡಿದ ಅವರು, 2026ರಲ್ಲಿ ಈವರೆಗೆ 10 ಹಡಗುಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಶೀಘ್ರದಲ್ಲೇ ಇನ್ನೂ ಎಂಟು ಹಡಗುಗಳನ್ನು ಸೇರ್ಪಡೆಗೊಳಿಸುವ ನಿರೀಕ್ಷೆಯಿದೆ.

2034ರ ವೇಳೆಗೆ ನೌಕಾಪಡೆಯ ಶೇ.60ರಷ್ಟು ವೇದಿಕೆಗಳ ಸರಾಸರಿ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಲಿದೆ. ಆಧುನಿಕ ಯುದ್ಧನೌಕೆಗಳ ಸೇರ್ಪಡೆಯ ಮೂಲಕ ನೌಕಾಪಡೆಯ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಇದಾಗಿದೆ ಎಂದರು.

ಅತ್ಯಾಧುನಿಕ ಸೋನಾರ್, ಟಾರ್ಪಿಡೊ ವ್ಯವಸ್ಥೆ

ಕರಾವಳಿ ಹಾಗೂ ಕಡಿಮೆ ಆಳದ ಸಮುದ್ರ ಪ್ರದೇಶಗಳಲ್ಲಿ ಜಲಾಂತರ್ಗಾಮಿ ನೌಕೆಗಳಿಂದ ಎದುರಾಗುವ ಬೆದರಿಕೆಗಳನ್ನು ಪತ್ತೆಹಚ್ಚಲು ಮತ್ತು ಎದುರಿಸಲು ಐಎನ್‌ಎಸ್ ಮಂಗ್ರೋಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಯುದ್ಧನೌಕೆಯಲ್ಲಿ ಹಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಂವೇದಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಇವುಗಳ ಪೈಕಿ

  • ಅಭಯ್ ಹಲ್-ಮೌಂಟೆಡ್ ಸೋನಾರ್: ನೀರಿನೊಳಗಿನ ಚಲನವಲನಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ.

  • ಲಘು ತೂಕದ ಟಾರ್ಪಿಡೊಗಳು: ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಗುರಿಯಾಗಿಸಲು ಬಳಸಲಾಗುತ್ತದೆ.

  • ಸ್ವದೇಶಿ ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್: ನೀರಿನೊಳಗಿನ ಬೆದರಿಕೆಗಳನ್ನು ಎದುರಿಸಲು ನೆರವಾಗುತ್ತದೆ.

  • ಮರೀಚ್ ಅಡ್ವಾನ್ಸ್ಡ್ ಟಾರ್ಪಿಡೊ ಡಿಕಾಯ್ ವ್ಯವಸ್ಥೆ: ಟಾರ್ಪಿಡೊ ದಾಳಿಯಿಂದ ಯುದ್ಧನೌಕೆಯನ್ನು ರಕ್ಷಿಸಲು ನೆರವಾಗುತ್ತದೆ.

ಈ ವ್ಯವಸ್ಥೆಗಳು ಸಮುದ್ರದಾಳದ ಬೆದರಿಕೆಗಳನ್ನು ಪತ್ತೆಹಚ್ಚುವ, ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಮತ್ತು ನೌಕೆಯ ರಕ್ಷಣೆಯನ್ನು ಬಲಪಡಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿವೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.

ಗುಜರಾತ್‌ನ ಕರಾವಳಿ ಪಟ್ಟಣದ ಹೆಸರು

ಗುಜರಾತ್‌ನ ಜುನಾಗಢ ಜಿಲ್ಲೆಯ ಮಂಗ್ರೋಲ್ ಕರಾವಳಿ ಪಟ್ಟಣದ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ. ಮಂಗ್ರೋಲ್ ಪ್ರಮುಖ ಮೀನುಗಾರಿಕಾ ಬಂದರು ಕೂಡ ಆಗಿದೆ.

ಇದೇ ಹೆಸರಿನ ಹಿಂದಿನ ಐಎನ್‌ಎಸ್ ಮಂಗ್ರೋಲ್ ಭಾರತೀಯ ನೌಕಾಪಡೆಯಲ್ಲಿ ಮೈನ್‌ಸ್ವೀಪರ್‌ (ಸಮುದ್ರದಲ್ಲಿನ ನೆಲಬಾಂಬ್‌ಗಳನ್ನು ಪತ್ತೆಹಚ್ಚಿ ತೆರವುಗೊಳಿಸುವ ನೌಕೆ) ಆಗಿ ಸೇವೆ ಸಲ್ಲಿಸಿತ್ತು.

ಆ ಹಳೆಯ ನೌಕೆ 2004ರ ಏಪ್ರಿಲ್ 7ರಂದು ತನ್ನ ಸೇವೆಯನ್ನು ಅಂತ್ಯಗೊಳಿಸಿತ್ತು. ಇದೀಗ ಹೊಸ ತಲೆಮಾರಿನ ಯುದ್ಧನೌಕೆಯು ಆ ಹೆಸರಿನ ಪರಂಪರೆಯನ್ನು ಮುಂದುವರಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.