ದೇಶ

ಭಾರತದ ರಕ್ಷಣಾ ಪಡೆಗಳಿಗೆ ನೂತನ ಸಾರಥಿ: CDS ಆಗಿ ಎನ್‌ಎಸ್ ರಾಜಾ ಸುಬ್ರಮಣಿ ಅಧಿಕಾರ ಸ್ವೀಕಾರ..!

ಸೇನಾ ಸಂಘಟನೆಗಳಲ್ಲಿ ಸುಧಾರಣೆ, ಸಶಸ್ತ್ರ ಪಡೆಗಳ ಪರಿವರ್ತನೆ ಹಾಗೂ ಮೂರು ಸೇನೆಗಳ ನಡುವೆ ಹೆಚ್ಚಿನ ಸಮನ್ವಯತೆ ಸಾಧಿಸುವುದು ತಮ್ಮ ತಕ್ಷಣದ ಆದ್ಯತೆಯಾಗಿದೆ.

ಭಾರತದ ರಕ್ಷಣಾ ಪಡೆಗಳಿಗೆ ನೂತನ ಸಾರಥಿ: CDS ಆಗಿ ಎನ್‌ಎಸ್ ರಾಜಾ ಸುಬ್ರಮಣಿ ಅಧಿಕಾರ ಸ್ವೀಕಾರ..!
General NS Raja Subramani
Published On :

ನವದೆಹಲಿ: ಭಾರತದ ನೂತನ ರಕ್ಷಣಾ ಪಡೆಗಳ ಮುಖ್ಯಸ್ಥ (CDS)ರಾಗಿ ಜನರಲ್ ಎನ್‌ಎಸ್ ರಾಜಾ ಸುಬ್ರಮಣಿ ಭಾನುವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ದೇಶದ ಮೂರು ಸೇನೆಗಳ ಸಮನ್ವಯ, ಏಕೀಕೃತ ಸೇನಾ ಕಮಾಂಡ್ ವ್ಯವಸ್ಥೆ ಹಾಗೂ ರಕ್ಷಣಾ ಪಡೆಗಳ ಆಧುನೀಕರಣಕ್ಕೆ ವೇಗ ನೀಡುವುದು ಅವರ ಪ್ರಮುಖ ಗುರಿಯಾಗಿದೆ.

ನಿವೃತ್ತರಾಗಿರುವ ಜನರಲ್ ಅನಿಲ್ ಚೌಹಾಣ್ ಅವರ ಸ್ಥಾನವನ್ನು ಎನ್‌ಎಸ್ ರಾಜಾ ಸುಬ್ರಮಣಿ ಅವರು ಭರ್ತಿ ಮಾಡಿದ್ದು, ದೇಶದ ಉನ್ನತ ಸೇನಾ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸೇನಾ ಸಂಘಟನೆಗಳಲ್ಲಿ ಸುಧಾರಣೆ, ಸಶಸ್ತ್ರ ಪಡೆಗಳ ಪರಿವರ್ತನೆ ಹಾಗೂ ಮೂರು ಸೇನೆಗಳ ನಡುವೆ ಹೆಚ್ಚಿನ ಸಮನ್ವಯತೆ ಸಾಧಿಸುವುದು ತಮ್ಮ ತಕ್ಷಣದ ಆದ್ಯತೆಯಾಗಿದೆ ಎಂದು ಹೇಳಿದರು.

“ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಸೇನೆಗೆ ಸೇರ್ಪಡೆ ಹಾಗೂ ಅವುಗಳ ಸಮಗ್ರ ಬಳಕೆಗೆ ವೇಗ ನೀಡುತ್ತೇವೆಂದು ತಿಳಿಸಿದ್ದಾರೆ.

ಇದೇ ವೇಳೆ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಅನುಗುಣವಾಗಿ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದ್ದಾರೆ.

ಸಿಡಿಎಸ್ ಆಗಿ ರಾಜಾ ಸುಬ್ರಮಣಿ ಅವರ ಪ್ರಮುಖ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಿಲಿಟರಿ ಥಿಯೇಟರೈಸೇಶನ್ ಯೋಜನೆ ಜಾರಿಗೊಳಿಸುವುದಾಗಿದೆ. ಇದರಡಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಕಾರ್ಯಾಚರಣೆಗಳನ್ನು ಏಕೀಕೃತ ಕಮಾಂಡ್ ವ್ಯವಸ್ಥೆಯಡಿ ತರಲು ಪ್ರಯತ್ನಿಸಲಾಗುತ್ತಿದೆ.

ನಾಲ್ಕು ದಶಕಗಳ ವಿಶಿಷ್ಟ ಸೇನಾ ಸೇವೆ

ಸುಮಾರು 40 ವರ್ಷಗಳ ಸೇನಾ ಸೇವೆಯಲ್ಲಿ ರಾಜಾ ಸುಬ್ರಮಣಿ ವಿವಿಧ ಕಮಾಂಡ್, ಆಡಳಿತ ಹಾಗೂ ತರಬೇತಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು 2024ರಿಂದ 2025ರವರೆಗೆ ಉಪ ಸೇನಾ ಮುಖ್ಯಸ್ಥರಾಗಿ (Vice Chief of Army Staff) ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಕೇಂದ್ರ ಕಮಾಂಡ್‌ನ ಮುಖ್ಯಸ್ಥರಾಗಿದ್ದರು.

1985ರ ಡಿಸೆಂಬರ್‌ನಲ್ಲಿ ಗರ್ವಾಲ್ ರೈಫಲ್ಸ್'ನ 8ನೇ ಬಟಾಲಿಯನ್‌ಗೆ ಸೇರ್ಪಡೆಯಾದ ಅವರು, ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಭಾರತೀಯ ಸೇನಾ ಅಕಾಡೆಮಿ, ಯುಕೆಯ ಜಾಯಿಂಟ್ ಸರ್ವೀಸಸ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜು ಹಾಗೂ ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ಕಜಕಿಸ್ತಾನದಲ್ಲಿ ರಕ್ಷಣಾ ಅಟ್ಯಾಶೆ, ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನ ಮುಖ್ಯ ತರಬೇತುದಾರ ಹಾಗೂ ಉತ್ತರ ಕಮಾಂಡ್‌ನ ಮುಖ್ಯ ಸಿಬ್ಬಂದಿ ಅಧಿಕಾರಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ.

ಅವರ ವಿಶಿಷ್ಟ ಸೇವೆಗೆ ಜನರಲ್ ಸುಬ್ರಮಣಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.