ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣ: CBI ತನಿಖೆಗೆ ಸುಪ್ರೀಂ ಕೋರ್ಟ್ ಅಸ್ತು; ಸಾಕ್ಷ್ಯ-ಹೇಳಿಕೆಗಳ ಪ್ರಕಟಿಸದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ..!
ತ್ವಿಷಾ ಶರ್ಮಾ ಅವರ ಅನುಮಾನಾಸ್ಪದ ಸಾವು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ನವದೆಹಲಿ: ಮಾಡೆಲ್ ಮತ್ತು ನಟಿ ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ (Suo Motu) ವಿಚಾರಣೆ ನಡೆಸಿದ್ದು, ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ಒಪ್ಪಿಸಲು ಒಪ್ಪಿಗೆ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಈ ಮಹತ್ವದ ಆದೇಶ ನೀಡಿದೆ.
ತ್ವಿಷಾ ಶರ್ಮಾ ಅವರ ಅನುಮಾನಾಸ್ಪದ ಸಾವು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿ ಜೊಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯುವಂತೆ ಖಚಿತಪಡಿಸಲಾಗುವುದು ಎಂದು ಭರವಸೆ ನೀಡಿದ್ದು, ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂಬುದಾಗಿ ತಿಳಿಸಿದೆ.
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಇದನ್ನು ದಾಖಲಿಸಿಕೊಂಡ ಸುಪ್ರೀಂ ಕೋರ್ಟ್, ದೇಶದ ಪ್ರಮುಖ ತನಿಖಾ ಸಂಸ್ಥೆಯಾದ ಸಿಬಿಐ ಮೇಲೆ ವಿಶ್ವಾಸ ಇಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿತು.
ಪ್ರಕರಣದ ತನಿಖೆ ಮುಂದುವರಿದಿರುವ ಸಂದರ್ಭದಲ್ಲಿ ಮಾಧ್ಯಮ ವರದಿಗಾರಿಕೆಗೆ ಸಂಬಂಧಿಸಿ ಕೂಡ ಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿತು.
ಕೆಲವು ನಡೆಗಳು ಬಾಧಿತ ಕುಟುಂಬಕ್ಕೆ ಮತ್ತಷ್ಟು ನೋವುಂಟು ಮಾಡಿವೆ. ಬಾಧಿತ ಕುಟುಂಬದವರ ಹೇಳಿಕೆಗಳನ್ನು ‘ಸೌಂಡ್ ಬೈಟ್’ಗಳಾಗಿ ಪರಿವರ್ತಿಸಿ ಪ್ರಸಾರ ಮಾಡುವುದು ಸರಿಯಲ್ಲ ಎಂದು ನ್ಯಾಯಪೀಠ ಹೇಳಿತು.
ಮಾಧ್ಯಮಗಳು ತನಿಖೆಗೆ ಸಂಬಂಧಿಸಿದ ಸಾಕ್ಷಿದಾರರಾಗುವ ಸಾಧ್ಯತೆ ಇರುವವರ ಹೇಳಿಕೆಗಳನ್ನು ನಿರಂತರವಾಗಿ ಪ್ರಸಾರ ಮಾಡಬಾರದು. ಇದು ತನಿಖೆಯ ದಿಕ್ಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೋರ್ಟ್ ಎಚ್ಚರಿಸಿತು.
ಬಾಧಿತ ಮತ್ತು ಆರೋಪಿತರ ಕುಟುಂಬದವರು ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿಕೆ ನೀಡುವುದಕ್ಕಿಂತ ತನಿಖಾ ಸಂಸ್ಥೆಗಳ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಬೇಕು ಎಂದು ಸೂಚಿಸಿತು.
ಇದೇ ವೇಳೆ ಪ್ರಕರಣದ ವಿಚಾರಣೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ತ್ವರಿತವಾಗಿ ಎರಡನೇ ಮರಣೋತ್ತರ ಪರೀಕ್ಷೆಗೆ ಆದೇಶ ನೀಡಿದ್ದ ಕ್ರಮವನ್ನೂ ಸುಪ್ರೀಂ ಕೋರ್ಟ್ ಶ್ಲಾಘಿಸಿತು.
ಏತನ್ಮಧ್ಯೆ ಆರೋಪಿತರ ಪರ ವಕೀಲರು, ತನಿಖೆ ಕುರಿತಂತೆ ಮಾಜಿ ನ್ಯಾಯಾಧೀಶರು ಮಾಧ್ಯಮಗಳ ಮುಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಮಧ್ಯಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್, ಮಾಧ್ಯಮಗಳ ಹಸ್ತಕ್ಷೇಪದಿಂದ ಪ್ರಕರಣದಲ್ಲಿ ಕೆಲ ಮಹತ್ವದ ಬೆಳವಣಿಗೆಗಳು ಸಂಭವಿಸಿವೆ ಎಂದು ಹೇಳಿದರೂ, ತನಿಖೆ ಕಾನೂನು ಪ್ರಕ್ರಿಯೆಯಂತೆ ಮುಂದುವರಿಯಬೇಕು ಎಂದು ಒತ್ತಿ ಹೇಳಿದರು.
ಈ ಪ್ರಕರಣ ದೇಶಾದ್ಯಂತ ಭಾವನಾತ್ಮಕ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಊಹಾಪೋಹಗಳಿಗೆ ಒಳಗಾಗದೆ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು ಎಂದು ಸುಪ್ರೀಂ ಕೋರ್ಟ್ ಮನವಿ ಮಾಡಿದೆ. ಪ್ರಕರಣದ ಸತ್ಯಾಂಶ ಬಹಿರಂಗವಾಗುವವರೆಗೆ ತನಿಖೆಗೆ ಅವಕಾಶ ನೀಡಬೇಕು ಎಂಬ ಸಂದೇಶವನ್ನೂ ನ್ಯಾಯಪೀಠ ನೀಡಿದೆ.
33 ವರ್ಷದ ಮಾಜಿ 'ಮಿಸ್ ಪುಣೆ' ಹಾಗೂ ನಟಿ ತ್ವಿಷಾ ಶರ್ಮಾ ಅವರು ಮೇ 12, 2026 ರಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮದುವೆಯಾದ ಕೇವಲ 5 ತಿಂಗಳಲ್ಲೇ ಈ ಘಟನೆ ನಡೆದಿದ್ದು, ತ್ವಿಷಾ ಪೋಷಕರು ಇದು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ತ್ವಿಷಾ ಪತಿ, ವಕೀಲ ಸಮರ್ಥ್ ಸಿಂಗ್ ಮತ್ತು ಆತನ ತಾಯಿ ಗಿರಿಬಾಲಾ ಸಿಂಗ್ (ನಿವೃತ್ತ ಜಿಲ್ಲಾ ನ್ಯಾಯಾಧೀಶರು) ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಪತಿ ಸಮರ್ಥ್ ಸಿಂಗ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಆರೋಪಿಗಳ ಕುಟುಂಬವು ಕಾನೂನು ಹಿನ್ನೆಲೆ ಹೊಂದಿರುವುದರಿಂದ ಸ್ಥಳೀಯ ತನಿಖೆಯಲ್ಲಿ ಸಾಂಸ್ಥಿಕ ಪಕ್ಷಪಾತ (Institutional Bias) ಮತ್ತು ಲೋಪದೋಷಗಳು ನಡೆದಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದೆ. ಮಧ್ಯಪ್ರದೇಶ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್ ಸ್ವಾಗತಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




