'ಕಾಕ್ರೋಚ್ ಜನತಾ ಪಾರ್ಟಿ' ಖಾತೆ ಬ್ಲಾಕ್: 'BJPಗೆ ಭಯವೇಕೆ'; ಪಿಣರಾಯಿ ವಿಜಯನ್ ಪ್ರಶ್ನೆ
ಉದ್ಯೋಗವಿಲ್ಲದಿಕೆ, ಅಸಮಾನತೆ ಮತ್ತು ಶೋಷಣೆಯಿಂದ ಕೂಡಿದ ವ್ಯವಸ್ಥೆಯ ವಿರುದ್ಧ ಬಲವಾದ ರಾಜಕೀಯ ಪ್ರತಿಕ್ರಿಯೆಯ ಉತ್ಸಾಹವನ್ನು ಇದರಲ್ಲಿ ಕಾಣಬಹುದು.

ತಿರುವಂತಪುರ: ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ತಡೆಹಿಡಿದಿರುವುದು ಕೇಂದ್ರದ ಬಿಜೆಪಿ ಸರ್ಕಾರದ ಅಸಹಿಷ್ಣುತೆ ಮತ್ತು ಯುವ ಚಳವಳಿಯ ಬೆಳವಣಿಗೆಯನ್ನು ನೋಡಿ ಉಂಟಾಗಿರುವ ಭಯವನ್ನು ತೋರಿಸುತ್ತದೆ ಎಂದು ಕೇರಳದ ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್ ಅವರು ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿಪೋಸ್ಟ್ ಮಾಡಿರುವ ಅವರು, “ಬಿಜೆಪಿ ಏಕೆ ಭಯಪಡುತ್ತಿದೆ?” ಎಂದು ಪ್ರಶ್ನಿಸಿದ್ದಾರೆ. ಉದ್ಯೋಗ ಕೊರತೆ, ಅಸಮಾನತೆ ಮತ್ತು ರಾಜಕೀಯ ನಿರಾಸೆಯಿಂದ ಬೇಸತ್ತಿರುವ ಅನೇಕ ಯುವಕರು ಈ ಅಭಿಯಾನದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.
“ಉದ್ಯೋಗವಿಲ್ಲದಿಕೆ, ಅಸಮಾನತೆ ಮತ್ತು ಶೋಷಣೆಯಿಂದ ಕೂಡಿದ ವ್ಯವಸ್ಥೆಯ ವಿರುದ್ಧ ಬಲವಾದ ರಾಜಕೀಯ ಪ್ರತಿಕ್ರಿಯೆಯ ಉತ್ಸಾಹವನ್ನು ಇದರಲ್ಲಿ ಕಾಣಬಹುದು. ಈ ಭಾವನೆ ಇನ್ನಷ್ಟು ವ್ಯಾಪಿಸಬಹುದು ಎಂಬ ಭಯವೇ ಕೇಂದ್ರ ಸರ್ಕಾರವನ್ನು ಪ್ರಜಾಸತ್ತಾತ್ಮಕ ಧ್ವನಿಗಳನ್ನು ಕುಂಠಿತಗೊಳಿಸುವ ಕ್ರಮಗಳಿಗೆ ದೂಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವಿವಾದವನ್ನು ಕೇವಲ ‘ಕಾಕ್‌ರೋಚ್’ ಪದ ಬಳಕೆಯ ಮಟ್ಟದಲ್ಲಿ ಮಾತ್ರ ನೋಡಬಾರದು. ಇದು ಯುವಜನರ ಅಸಮಾಧಾನ ಮತ್ತು ರಾಜಕೀಯ ಭಾವನೆಗಳ ಪ್ರತಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸಂದೇಶಗಳು ಮತ್ತು ಪ್ರತಿಭಟನೆಗಳ ಬಗ್ಗೆ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಯುವಕರ ನೇತೃತ್ವದ ಅಭಿಯಾನವೊಂದನ್ನು ತಡೆಯಲು ಸಂಸ್ಥಾಪಿತ ವ್ಯವಸ್ಥೆಗಳನ್ನು ಬಳಸುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆಯಿರುವ ಎಲ್ಲಾ ಶಕ್ತಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (Cockroach Janata Party - CJP) ಎನ್ನುವುದು ಸಾಮಾಜಿಕ ಮಾಧ್ಯಮಗಳಲ್ಲಿ ದೇಶದ ಯುವಜನರು ನಿರುದ್ಯೋಗ ಮತ್ತು ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಆರಂಭಿಸಿರುವ ಒಂದು ಡಿಜಿಟಲ್ ರಾಜಕೀಯ ಪ್ರತಿಭಟನಾ ಚಳುವಳಿಯಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ಚಳುವಳಿಯ 'X' (ಟ್ವಿಟರ್) ಖಾತೆಯನ್ನು ತಡೆಹಿಡಿಯಲಾಗಿದ್ದು (ಬ್ಲಾಕ್), ಈ ಕ್ರಮದ ಬಳಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಇನ್ನೊಂದೆಡೆ, ಬಿಜಪಿ ಈ ಅಭಿಯಾನವನ್ನು ಸಂಪೂರ್ಣ ವಿಭಿನ್ನ ದೃಷ್ಟಿಕೋಣದಿಂದ ನೋಡುತ್ತಿದೆ. ಇದು ಭಾರತದ ವಿರುದ್ಧ ವಿದೇಶಿ ಸಂಪರ್ಕ ಹೊಂದಿರುವ ‘ಇನ್‌ಫ್ಲುವೆನ್ಸ್ ಆಪರೇಷನ್’ ಆಗಿದ್ದು, ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ.
ಈ ವಿಚಾರ ಈಗ ಕೇರಳದ ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿದ್ದು, ವಿವಿಧ ಪಕ್ಷಗಳ ನಾಯಕರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಹೊಸದಾಗಿ ಆಯ್ಕೆಯಾದ ಶಾಸಕರಾದ ಅಬಿನ್ ವರ್ಕಿ, ಪಿ ಕೆ ನವಾಸ್, ಟಿ ಪಿ ಅಶ್ರಫಾಲಿ ಮತ್ತು ವಿ ಕೆ ಸನೋಜ್ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮೂಲ ಖಾತೆ ನಿರ್ಬಂಧವಾದ ಕೆಲವೇ ಹೊತ್ತಿನಲ್ಲಿ ‘Cockroach is Back’ ಎಂಬ ಹೊಸ ಖಾತೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. “Cockroaches Don’t Die” ಎಂಬ ಟ್ಯಾಗ್‌ಲೈನ್‌ನೊಂದಿಗೆ ಹೊಸ ಖಾತೆ ಸೃಷ್ಟಿಸಿದ್ದು, ಇದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



