NEET paper leak: ಯುವಕರ ಭವಿಷ್ಯದ ಜೊತೆ ಆಟ; ತಕ್ಷಣ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ- ರಾಹುಲ್ ಗಾಂಧಿ ಆಗ್ರಹ
ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳ ನಿದ್ದೆಗೆಡಿಸಿರುವ ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಹಗರಣವು ಈಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೂಡಲೇ ಸಚಿವ ಧರ್ಮೇಂದ್ರ ಪ್ರಧಾನ್ ರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ದೇಶಾದ್ಯಂತ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳ ನಿದ್ದೆಗೆಡಿಸಿರುವ ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಹಗರಣವು ಈಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದು, ಇದೇ ವಿಚಾರವಾಗಿ ಶನಿವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತದ ಶಿಕ್ಷಣ ವ್ಯವಸ್ಥೆಯನ್ನು “ಬಿಜೆಪಿ-ಆರ್‌ಎಸ್‌ಎಸ್ ಮೈತ್ರಿ” ಹಾಳು ಮಾಡಿದೆ ಎಂದು ಆರೋಪಿಸಿರುವ ಅವರು NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪ್ರಧಾನಿ Narendra Modi ವೈಯಕ್ತಿಕ ಹೊಣೆ ಹೊತ್ತುಕೊಳ್ಳಬೇಕು ಅಥವಾ ಶಿಕ್ಷಣ ಸಚಿವ Dharmendra Pradhan ಅವರನ್ನು ವಜಾಗೊಳಿಸಬೇಕು ಆಗ್ರಹಿಸಿದರು.
ವೀಡಿಯೊ ಹೇಳಿಕೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ನೇತೃತ್ವದ ಸರ್ಕಾರವು ಭಾರತದ ಮೂಲ ವ್ಯವಸ್ಥೆಯನ್ನೇ ಹಾನಿಗೊಳಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಈ ಹಗರಣದ ಕಲಿಗಳನ್ನು ಜೈಲಿಗಟ್ಟಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
“NEET ಪರೀಕ್ಷೆಗೆ ಎರಡು ದಿನಗಳ ಮೊದಲು ಅದರ ಪ್ರಶ್ನೆಪತ್ರಿಕೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಧರ್ಮೇಂದ್ರ ಪ್ರಧಾನಜಿ ಅವರಿಗೆ ಇದಕ್ಕೆ ಸಂಬಂಧವೇ ಇಲ್ಲ ಎಂದು ಹೇಳುತ್ತಿದ್ದಾರೆ. ಸಂಸತ್ತಿನ ಸಮಿತಿಯು ಶಿಫಾರಸುಗಳನ್ನು ಮಾಡಿತ್ತು, ಆದರೆ ಅದರಲ್ಲಿ ವಿರೋಧ ಪಕ್ಷದ ಸದಸ್ಯರಿದ್ದರು ಎಂಬ ಕಾರಣ ಹೇಳಿ ಅವುಗಳನ್ನು ಕಸದ ಬುಟ್ಟಿಗೆ ಎಸೆದರು.
ಸತ್ಯ ಏನೆಂದರೆ, ನೀವು ಭಾರತದ ಮೂಲವನ್ನೇ ಹಾಳು ಮಾಡಿದ್ದಾರೆ. ಇದು ಆರ್‌ಎಸ್‌ಎಸ್, ಬಿಜೆಪಿ ಮತ್ತು ವಿಶ್ವವಿದ್ಯಾಲಯಗಳು, ಕುಲಪತಿಗಳು ಹಾಗೂ ಪ್ರಾಧ್ಯಾಪಕರಲ್ಲಿ ನೇಮಕಗೊಂಡಿರುವ ಅವರ ಜನರ ಮೈತ್ರಿ; ಹಣ ಮಾಡುವುದೇ ಇದರ ಉದ್ದೇಶ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಮೈತ್ರಿಯೇ ಭಾರತದ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿದೆ. ಒಬ್ಬರು ವಿಶ್ವವಿದ್ಯಾಲಯದ ಕುಲಪತಿಯಾಗಬೇಕಾದರೆ ವಿಷಯದ ಜ್ಞಾನ, ಅನುಭವ ಯಾವುದೂ ಬೇಕಾಗಿಲ್ಲ; ಅವರು ಆರ್‌ಎಸ್‌ಎಸ್‌ನವರಾಗಿದ್ದರೆ ಸಾಕು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ನಿಮ್ಮ ತತ್ವಶಾಸ್ತ್ರ ಆರ್‌ಎಸ್‌ಎಸ್‌ನದ್ದಾಗಿರದಿದ್ದರೆ ನೀವು ಕುಲಪತಿಯಾಗಲು ಸಾಧ್ಯವಿಲ್ಲ,” ಎಂದು ಗಾಂಧಿ ಆರೋಪಿಸಿದರು.
ಇದಕ್ಕಾಗಿಯೇ ಈ ದೇಶದಲ್ಲಿ 80 ಬಾರಿ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಮತ್ತು ಎರಡು ಕೋಟಿ ಯುವಕರ ಭವಿಷ್ಯ ಹಾಳಾಗಿದೆ. 22 ಲಕ್ಷ NEET ಅಭ್ಯರ್ಥಿಗಳಿಗೆ ದ್ರೋಹ ಮಾಡಲಾಗಿದೆ. ಆದರೂ ಮೋದಿ ಜೀ ಒಂದೇ ಒಂದು ಮಾತನ್ನೂ ಆಡಿಲ್ಲ. ಧರ್ಮೇಂದ್ರ ಪ್ರಧಾನರನ್ನು ತಕ್ಷಣ ತೆಗೆದುಹಾಕಿ ಅಥವಾ ವೈಯಕ್ತಿಕ ಹೊಣೆ ಹೊತ್ತುಕೊಳ್ಳಿ. ಮೋದಿ ಜೀ, ಧರ್ಮೇಂದ್ರ ಪ್ರಧಾನರನ್ನು ಈಗಲೇ ವಜಾಗೊಳಿಸಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮರು ಪರೀಕ್ಷೆ
ಮೇ 3ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)-UG, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ರದ್ದುಗೊಂಡಿತ್ತು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಶುಕ್ರವಾರ, NEET-UG ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುವುದು ಎಂದು ಘೋಷಿಸಿದರು. ಇದಲ್ಲದೆ, ಪರೀಕ್ಷೆಗೆ ಸಂಬಂಧಿಸಿದ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಸಂಪೂರ್ಣ ಕಂಪ್ಯೂಟರ್ ಆಧಾರಿತವಾಗಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



