Operation Sindoor ಗೆ 1 ವರ್ಷ: 'ಭಾರತ ಯಾವುದನ್ನೂ ಮರೆಯಲ್ಲ-ಯಾರನ್ನೂ ಕ್ಷಮಿಸಲ್ಲ'; ಶತ್ರುರಾಷ್ಟ್ರಕ್ಕೆ ಕಠಿಣ ಸಂದೇಶ ರವಾನಿಸಿದ ಭಾರತೀಯ ಸೇನೆ; Video
India Forgives Nothing” ಎಂಬ ಸಾಲುಗಳೊಂದಿಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ದೇಶದ ಭದ್ರತೆ ಮತ್ತು ಉಗ್ರವಾದದ ವಿರುದ್ಧ ಭಾರತದ ನಿಲುವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.

ನವದೆಹಲಿ: ‘ಆಪರೇಷನ್ ಸಿಂಧೂರ್’ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶತ್ರು ರಾಷ್ಟ್ರಕ್ಕೆ ಭಾರತೀಯ ಸೇನೆ ಕಠಿಣ ಸಂದೇಶವನ್ನು ರವಾನಿಸಿದೆ.
ಕಠಿಣ ಸಂದೇಶವಿರುವ ವಿಶೇಷ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. “India Forgives Nothing” ಎಂಬ ಸಾಲುಗಳೊಂದಿಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ದೇಶದ ಭದ್ರತೆ ಮತ್ತು ಉಗ್ರವಾದದ ವಿರುದ್ಧ ಭಾರತದ ನಿಲುವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.
ವಿಡಿಯೋದಲ್ಲಿ, "ಭಾರತ ಯಾವುದನ್ನೂ ಮರೆಯುವುದಿಲ್ಲ, ಭಾರತ ಯಾರನ್ನೂ ಕ್ಷಮಿಸುವುದಿಲ್ಲ" (India Forgets Nothing. India Forgives Nothing) ಎಂಬ ಬಲವಾದ ಸಂದೇಶವನ್ನು ನೀಡಿದೆ.
ಇದಲ್ಲದೆ, ವಿಡಿಯೋದಲ್ಲಿ ಸೇನೆ ಕಾರ್ಯಾಚರಣೆಯ ಕೆಲವು ದೃಶ್ಯಗಳು, ಯೋಧರ ಸಿದ್ಧತೆ, ಯುದ್ಧ ವಿಮಾನಗಳ ಹಾರಾಟ ಹಾಗೂ ದಾಳಿಯ ಕ್ಷಣಗಳನ್ನು ಸಿನಿಮಾ ಶೈಲಿಯಲ್ಲಿ ತೋರಿಸಲಾಗಿದೆ.
ಹಿನ್ನಲೆಯಲ್ಲಿ ಕೇಳಿಬರುವ “India Forgives Nothing” ಎಂಬ ಘೋಷಣೆ ದೇಶದ ಭದ್ರತೆಯ ವಿಚಾರದಲ್ಲಿ ಭಾರತ ಯಾವುದೇ ರೀತಿಯಲ್ಲೂ ರಾಜಿಯಾಗಲು ಸಿದ್ಧವಿಲ್ಲ ಎಂಬ ಸಂದೇಶವನ್ನು ಬಲವಾಗಿ ರವಾನಿಸಲಾಗಿದೆ.
ಈ ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಅನೇಕರು ಭಾರತೀಯ ವಾಯುಪಡೆಯ ಸಾಹಸ ಮತ್ತು ಯೋಧರ ತ್ಯಾಗವನ್ನು ಕೊಂಡಾಡಿದ್ದಾರೆ. ಕೆಲವರು ಇದನ್ನು “ಭಾರತದ ಹೊಸ ಸೈನಿಕ ಧೋರಣೆಯ ಸಂಕೇತ” ಎಂದು ಬಣ್ಣಿಸಿದ್ದಾರೆ.
ರಕ್ಷಣಾ ತಜ್ಞರ ಅಭಿಪ್ರಾಯದಂತೆ, ‘ಆಪರೇಷನ್ ಸಿಂಧೂರ್’ ಕೇವಲ ಪ್ರತಿದಾಳಿ ಮಾತ್ರವಾಗಿರಲಿಲ್ಲ; ಅದು ಉಗ್ರವಾದವನ್ನು ಎದುರಿಸುವ ಭಾರತದ ಹೊಸ ತಂತ್ರ ಮತ್ತು ದೃಢಸಂಕಲ್ಪದ ಘೋಷಣೆಯಾಗಿತ್ತು.
ಒಂದು ವರ್ಷ ಕಳೆದರೂ ಈ ಕಾರ್ಯಾಚರಣೆಯ ನೆನಪು ದೇಶದ ಜನರಲ್ಲಿ ರಾಷ್ಟ್ರಭಕ್ತಿ ಮತ್ತು ಸೇನೆಯ ಮೇಲಿನ ಗೌರವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಮೇ 7, 2026 ರಂದು ಆಪರೇಷನ್ ಸಿಂದೂರ್ ನಡೆದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಾಯುಸೇನೆ ಮತ್ತು ಭೂಸೇನೆ ಈ ವಿಡಿಯೋಗಳನ್ನು ಹಂಚಿಕೊಂಡಿವೆ.
2025 ರ ಮೇ 7 ರಂದು ಮುಂಜಾನೆ 1:05 ಕ್ಕೆ ಶತ್ರು ರಾಷ್ಟ್ರದ ವಿರುದ್ಧ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭವಾದ ಅದೇ ಸಮಯಕ್ಕೆ ಸೇನೆ ವೀಡಿಯೋ ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ.
ಏನಿದು ಆಪರೇಷನ್ ಸಿಂದೂರ್?
ಏಪ್ರಿಲ್ 22, 2025 ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ಅಟ್ಟಹಾಸಕ್ಕೆ ಪ್ರತಿಕ್ರಿಯೆಯಾಗಿ ಭಾರತ ಈ ಕಾರ್ಯಾಚರಣೆ ನಡೆಸಿತ್ತು.
ಮೇ 7, 2025 ರಂದು ಭಾರತೀಯ ವಾಯುಸೇನೆಯು ರಫೇಲ್ ಯುದ್ಧ ವಿಮಾನಗಳು, ಸ್ಕಾಲ್ಪ್ (SCALP) ಕ್ಷಿಪಣಿಗಳು ಮತ್ತು ಹ್ಯಾಮರ್ ಬಾಂಬ್‌ಗಳನ್ನು ಬಳಸಿ ಪಾಕಿಸ್ತಾನದಲ್ಲಿರುವ ಜೈಶ್-ಇ-ಮೊಹಮ್ಮದ್ (JeM) ಮತ್ತು ಲಷ್ಕರ್-ಇ-ತೊಯ್ಬಾ (LeT) ಉಗ್ರ ಸಂಘಟನೆಗಳ 9 ನೆಲೆಗಳ ಮೇಲೆ ದಾಳಿ ಮಾಡಿತ್ತು.
ಈ ದಾಳಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು. ಅಲ್ಲದೆ, ಭಾರತದ ಎಸ್-400 (S-400) ಕ್ಷಿಪಣಿ ವ್ಯವಸ್ಥೆಯು ಶತ್ರು ದೇಶದ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಕಾರ್ಯಾಚರಣೆಯು ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನಿಲುವನ್ನು ಜಗತ್ತಿಗೆ ಸಾರಿದೆ.

Operation Sindoor ನಿಲ್ಲಿಸಿದ್ದು ನಮ್ಮ ಸ್ವಂತ ನಿರ್ಧಾರ, ದೀರ್ಘ ಯುದ್ದಕ್ಕೂ ಸಿದ್ಧರಿದ್ದೆವು: ರಾಜನಾಥ್ ಸಿಂಗ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


