ದೇಶ

ಮೀನುಗಾರಿಕೆಯಲ್ಲಿ ಯಶಸ್ವಿ: ಕನ್ನಡಿಗನ ಯಶೋಗಾಥೆಗೆ 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಪ್ರಶಂಸೆ! Video

ಬೆಳಗಾವಿ ತಾಲ್ಲೂಕಿನ ಬೋಡಕ್ಯಾನಟ್ಟಿ ಗ್ರಾಮದ ರಾಜು ಶಿವಲಿಂಗ ಸಾತಪ್ಪ ಹುದ್ದಾರ ಮೀನು ಸಾಕಾಣಿಕೆಯಲ್ಲಿ ಗಣನೀಯ ಯಶಸ್ಸು ಸಾಧಿಸಿದ್ದಾರೆ. ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಮೀನುಗಾರಿಕೆಯಲ್ಲಿ ಯಶಸ್ವಿ: ಕನ್ನಡಿಗನ ಯಶೋಗಾಥೆಗೆ 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಪ್ರಶಂಸೆ! Video
ಶಿವಲಿಂಗ ಸಾತಪ್ಪ ಹುದ್ದಾರ, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ
Published On :

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆಕಾಶವಾಣಿಯ ತಮ್ಮ ಮನಕಿ ಬಾತ್ ಕಾರ್ಯಕ್ರಮದಲ್ಲಿ ಮೀನುಗಾರಿಕೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರೊಬ್ಬರ ಸಾಧನೆಯನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೃಷಿಯಲ್ಲಿನ ಆವಿಷ್ಕಾರವು ಆದಾಯವನ್ನು ಹೇಗೆ ಹೆಚ್ಚಿಸಬಹುದು ಮತ್ತು ಗ್ರಾಮೀಣ ಯುವಕರನ್ನು ಪ್ರೇರೇಪಿಸುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದಿದ್ದಾರೆ.

ಬೆಳಗಾವಿ ತಾಲ್ಲೂಕಿನ ಬೋಡಕ್ಯಾನಟ್ಟಿ ಗ್ರಾಮದ ರಾಜು ಶಿವಲಿಂಗ ಸಾತಪ್ಪ ಹುದ್ದಾರ ಮೀನು ಸಾಕಾಣಿಕೆಯಲ್ಲಿ ಗಣನೀಯ ಯಶಸ್ಸು ಸಾಧಿಸಿದ್ದಾರೆ. ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಬಿಎ ಮುಗಿಸಿರುವ ರಾಜು, ಆರ್ಮಿ ಸೇರಲು ಪ್ರಯತ್ನಿಸಿದ್ದರು. ಆದರೆ, ಅದು‌ ಸಾಧ್ಯವಾಗಲಿಲ್ಲ. ಆಮೇಲೆ ಸ್ವಂತ ಉದ್ಯಮ ಆರಂಭಿಸುವ ನಿಟ್ಟಿನಲ್ಲಿ ಹೈನುಗಾರಿಕೆ ಮಾಡಬೇಕು ಎಂದು ಯೋಚಿಸಿದರು. ಬಳಿಕ ಕೃಷಿ ಹೊಂಡದಲ್ಲಿ ಬಯೋಪ್ಲಾಕ್ ತಂತ್ರಜ್ಞಾನವನ್ನು ಬಳಸಿ ಕುಚ್ಚು(ಮರಲ್) ಮೀನು ಸಾಕಾಣಿಕೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮೀನುಗಾರಿಕೆ ಆರಂಭಕ್ಕೂ ಮುನ್ನಾ ವಿವಿಧ ಕಡೆಗಳಲ್ಲಿ ತೆರಳಿ ತರಬೇತಿ ಪಡೆದಿದ್ದಾರೆ.

ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ರಾಜು ಹುದ್ದಾರ, 2023-24ರಲ್ಲಿ ನಮ್ಮ ತಂದೆಗೆ ಸೇರಿದ 4 ಎಕರೆ ಜಮೀನು ಪೈಕಿ 1 ಎಕರೆಯಲ್ಲಿ ಮೀನುಗಾರಿಕೆ ಮಾಡಲು ನಿರ್ಧರಿಸಿದೆ. ಆಧುನಿಕ ಕೃಷಿ ಹೊಂಡ ನಿರ್ಮಿಸಿ, ಆಂಧ್ರಪ್ರದೇಶದ ವಿಜಯವಾಡದಿಂದ ಮೀನು ಮರಿ ತಂದು, ಅತ್ಯಂತ ವ್ಯವಸ್ಥಿತವಾಗಿ ಮೀನು ಕೃಷಿ ಮಾಡಿದೆ. 1 ವರ್ಷ ಮೀನು ಸಾಕಾಣಿಕೆ ಬಗ್ಗೆ ತಿಳಿದುಕೊಳ್ಳಲು ಓಡಾಡಿದ್ದೇನೆ. ತುಮಕೂರು, ಮಂಡ್ಯ, ವಿಜಯಪುರ ಮತ್ತು‌ ಆಂಧ್ರಪ್ರದೇಶದ ಹೈದರಾಬಾದ್, ವಿಜಯವಾಡ ಸೇರಿ ಮತ್ತಿತರ ಕಡೆ ಹೋಗಿ ಸಂಪೂರ್ಣ ಮಾಹಿತಿ ಮತ್ತು ತರಬೇತಿ ಪಡೆದುಕೊಂಡೆ ಎಂದು ವಿವರಿಸಿದರು.

ಕೃಷಿ ಹೊಂಡ ನಿರ್ಮಾಣ, ಮೀನು ಮರಿಗಳ ಖರೀದಿ, ಆಹಾರ, ಔಷಧಿ ಸೇರಿ ಮೀನುಗಳ ಸಾಕಾಣಿಕೆ ನಾನು ಖರ್ಚು ಮಾಡಿದ್ದು ಬರೊಬ್ಬರಿ 31 ಲಕ್ಷ ರೂ. ಅಷ್ಟೂ ಹಣವನ್ನು ಸಮಾಜ ಸೇವಕ ಶಿವಾನಂದ ನೀಲಣ್ಣವರ ನನಗೆ ನೀಡಿ, ನೀನು ಖಂಡಿತ ಇದರಲ್ಲಿ ಸಕ್ಸಸ್ ಆಗುತ್ತಿಯಾ ಅಂತಾ ಧೈರ್ಯ ತುಂಬಿದರು. ಮರಿಗಳ ಸಾಕಾಣಿಕೆ ಶುರು ಮಾಡಿದ 8 ತಿಂಗಳಲ್ಲಿ ಮೊದಲ‌ ಬ್ಯಾಚ್ ಮೀನು ಮಾರಾಟಕ್ಕೆ ಸಿದ್ಧವಾಯ್ತು. ಇದರಿಂದ 25 ಲಕ್ಷ ರೂ. ಆದಾಯ ಬಂದಿತು. ಎರಡನೇ ಬ್ಯಾಚ್ ನಲ್ಲಿ 22 ಲಕ್ಷ ರೂ. ಆದಾಯ ಕೈ ಸೇರಿದೆ. ಈಗ ಮೂರನೇ ಬ್ಯಾಚ್ ನಲ್ಲಿ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದೇನೆ ಎಂದು ತಿಳಿಸಿದರು.

ಮೀನುಗಾರಿಕೆಯಲ್ಲಿ ಒಮ್ಮೆ ಹಣ ಹೂಡಿ, ಹೊಂಡ, ಪೈಪ್ ಲೈನ್ ವ್ಯವಸ್ಥೆ ಸೇರಿ ಎಲ್ಲವನ್ನು ಸೆಟಪ್ ಮಾಡಿದರೆ ಮುಗಿತು. ಆಮೇಲೆ ಮರಿಗಳ ಖರೀದಿ, ಆಹಾರ, ಔಷಧೋಪಚಾರಕ್ಕಷ್ಟೇ ಖರ್ಚು. ಇದಕ್ಕೆ ಕೆಲಸವೂ ಕಮ್ಮಿ. ಮೀನುಗಳಿಗೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಆಹಾರ ನೀಡುವುದು. ಹೈದರಾಬಾದ್ ವ್ಯಾಪಾರಿಗಳು ನಮ್ಮಲ್ಲಿಗೆ ಬಂದು ದುಡ್ಡು ಕೊಟ್ಟು ಮೀನುಗಳನ್ನು ಖರೀದಿಸುತ್ತಾರೆ. ಅದರಲ್ಲೂ ಮರಲ್ ಮೀನುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ ಎನ್ನುತ್ತಾರೆ ರಾಜು ಹುದ್ದಾರ.

ಮುರ್ರೆಲ್ ಮೀನುಗಳಿಗೆ ಉತ್ತರ ಭಾರತದ ಮಾರುಕಟ್ಟೆಗಳಲ್ಲಿ ಭಾರಿ ಬೇಡಿಕೆ ಇದೆ. ಗಾತ್ರದ ಆಧಾರದ ಮೇಲೆ ಪ್ರತಿ ಕಿಲೋಗ್ರಾಂಗೆ 250 ರಿಂದ 320 ರೂ. ಬೆಲೆಯಿದೆ. ಆಕ್ಸಿಜನ್ ಮಟ್ಟವನ್ನು ಕಾಯ್ದುಕೊಳ್ಳಲು ಏರೇಟರ್‌ಗಳು, ರಕ್ಷಣೆಗಾಗಿ ಪಕ್ಷಿ ಬಲೆಗಳು, ನೀರು ಪೂರೈಕೆಗಾಗಿ ಹತ್ತಿರದ ಜಲಾಶಯಕ್ಕೆ ಸಂಪರ್ಕ ಹೊಂದಿದ ಪೈಪ್‌ಲೈನ್ ವ್ಯವಸ್ಥೆ ಮಾಡಿದ್ದು, ಭದ್ರತೆಗಾಗಿ ಸಿಸಿಟಿವಿ ಕಣ್ಗಾವಲು ಅಳವಡಿಸಿದ್ದಾರೆ.

ರಾಜು ತಂದೆ ಶಿವಲಿಂಗಪ್ಪ ಹುದ್ದಾರ ಮಾತನಾಡಿ, ಮೀನುಗಾರಿಕೆಯಿಂದ ಕುಟುಂಬದ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ನಾವು ಈಗ ಆರ್ಥಿಕವಾಗಿ ಸ್ಥಿರವಾಗಿದ್ದು, ಹೊಸ ಮನೆಯನ್ನು ನಿರ್ಮಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ರಾಜು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ, ಸುಸ್ಥಿರ ಮತ್ತು ಲಾಭದಾಯಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಈ ಭಾಗದ ಇತರ ರೈತರಿಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.