ಅಯೋಧ್ಯೆ ರಾಮಮಂದಿರದಲ್ಲಿ ದಿವ್ಯ ಕ್ಷಣ: ಬಾಲ ರಾಮನ ಹಣೆ ಬೆಳಗಿದ ಸೂರ್ಯ ತಿಲಕ..! Video
ಬಾಲ ರಾಮನ ಮೂರ್ತಿಯ ಹಣೆ ಮೇಲೆ ನೇರವಾಗಿ ಸೂರ್ಯ ಕಿರಣಗಳು ತಿಲಕದ ರೂಪದಲ್ಲಿ ಹೊಳೆಯುವ ಕ್ಷಣ ಭಕ್ತರ ಮನಸ್ಸಿನಲ್ಲಿ ದಿವ್ಯ ಅನುಭವವನ್ನು ಮೂಡಿಸಿತು.

ಅಯೋಧ್ಯೆ: ರಾಮನವಮಿ ಹಬ್ಬದ ಪವಿತ್ರ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ‘ಸೂರ್ಯ ತಿಲಕ’ ಆಚರಣೆ ಈ ಬಾರಿ ಮತ್ತಷ್ಟು ವೈಭವದಿಂದ ನೆರವೇರಿತು.
ಬಾಲ ರಾಮನ ಮೂರ್ತಿಯ ಹಣೆ ಮೇಲೆ ನೇರವಾಗಿ ಸೂರ್ಯ ಕಿರಣಗಳು ತಿಲಕದ ರೂಪದಲ್ಲಿ ಹೊಳೆಯುವ ಕ್ಷಣ ಭಕ್ತರ ಮನಸ್ಸಿನಲ್ಲಿ ದಿವ್ಯ ಅನುಭವವನ್ನು ಮೂಡಿಸಿತು.
ಶ್ರೀರಾಮನ ಹಣೆಯ ಮೇಲಿನ ಸೂರ್ಯ ತಿಲಕವು ಸುಮಾರು 4 ನಿಮಿಷಗಳ ಕಾಲ ಇತ್ತು ಮತ್ತು ಅದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಅದ್ಭುತ ದೃಶ್ಯದ ಹಿಂದೆ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನವೂ ಅಡಗಿದೆ. ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿದ ವಿಶೇಷ ಲೆನ್ಸ್‌ಗಳು ಮತ್ತು ಕನ್ನಡಿ ವ್ಯವಸ್ಥೆಗಳ ಮೂಲಕ ಸೂರ್ಯನ ಕಿರಣಗಳನ್ನು ನಿಖರವಾಗಿ ಗರ್ಭಗುಡಿಯೊಳಗೆ ಬರುವಂತೆ ತಂತ್ರವನ್ನು ರೂಪಿಸಲಾಗಿದೆ.
ಈ ವ್ಯವಸ್ಥೆಯು ಸೂರ್ಯನ ಸ್ಥಿತಿಗತಿಗಳನ್ನು ಲೆಕ್ಕಹಾಕಿ, ಸರಿಯಾದ ಸಮಯದಲ್ಲಿ ಕಿರಣಗಳು ರಾಮನ ಮೂರ್ತಿಯ ಹಣೆಯ ಮೇಲೆ ಬೀಳುವಂತೆ ಮಾಡುತ್ತದೆ. ಈ ಬಾರಿ ಸುಮಾರು 3 ರಿಂದ 4 ನಿಮಿಷಗಳವರೆಗೆ ಈ ದಿವ್ಯ ತಿಲಕ ಸ್ಪಷ್ಟವಾಗಿ ಕಾಣಿಸಿಕೊಂಡಿತು.
ಈ ವೇಳೆ ಇಡೀ ಅಯೋಧ್ಯೆ ನಗರವೇ ಹಬ್ಬದ ವಾತಾವರಣದಲ್ಲಿ ಮಿಂದೆದಿತು. ಎಲ್ಲೆಲ್ಲೂ ರಾಮನ ಸ್ಮರಣೆ ಮುಗಿಲು ಮುಟ್ಟಿತ್ತು.
ರಾಮನವಮಿ ಪ್ರಯುಕ್ತ ದೇವಸ್ಥಾನನ್ನು ಆಕರ್ಷಕವಾಗಿ ಅಲಂಕರಿಸಲಾಗಿದ್ದು, ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರು ಆಗಮಿಸಿ ಸೂರ್ಯ ತಿಲಕದ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು.
ಭಕ್ತರ ಹೆಚ್ಚಿದ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಕ್ರಮಗಳನ್ನು ಮತ್ತಷ್ಟು ಕಟ್ಟು ನಿಟ್ಟಾಗಿಸಲಾಗಿದೆ. ಪೊಲೀಸರು, ಸ್ವಯಂಸೇವಕರು ಹಾಗೂ ದೇವಸ್ಥಾನ ಸಿಬ್ಬಂದಿ ಜಂಟಿಯಾಗಿ ಕಾರ್ಯನಿರ್ವಹಿಸಿ, ದರ್ಶನ ವ್ಯವಸ್ಥೆಯನ್ನು ಸುಗಮಗೊಳಿಸಿದರು.
ಜನಸಂದಣಿ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಜಾರಿಗೆ ತಂದು, ಕೆಲವು ಪ್ರದೇಶಗಳಲ್ಲಿ ನೇರ ಪ್ರಸಾರಕ್ಕಾಗಿ ಎಲ್‌ಇಡಿ ಪರದೆಗಳನ್ನೂ ಅಳವಡಿಸಲಾಗಿದೆ.
ಸೂರ್ಯ ತಿಲಕ ಕಾರ್ಯಕ್ರಮವು ರಾಮನ ಸೂರ್ಯವಂಶೀಯ ಪರಂಪರೆಯನ್ನು ಸ್ಮರಿಸುವ ಮಹತ್ವದ ಆಚರಣೆಯಾಗಿದೆ. ಭಕ್ತರ ನಂಬಿಕೆ ಪ್ರಕಾರ, ಈ ಕ್ಷಣವನ್ನು ನೋಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆ ಸಾವಿರಾರು ಭಕ್ತರು ಈ ದಿವ್ಯ ಕ್ಷಣಕ್ಕಾಗಿ ಗಂಟೆಗಳ ಕಾಲ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಾಮನವಮಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಹೋಮಗಳು, ಆರತಿಗಳು ನಡೆಯುತ್ತಿದ್ದು, ಭಕ್ತಿಭಾವ ಗರಿಗೆದರಿದೆ. ಸೂರ್ಯ ತಿಲಕ ಆಚರಣೆಯು ಈ ಎಲ್ಲಾ ಆಚರಣೆಗಳ ಮಧ್ಯೆ ಪ್ರಮುಖ ಆಕರ್ಷಣೆಯಾಗಿದ್ದು, ಇದು ಅಯೋಧ್ಯೆ ರಾಮಮಂದಿರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



