ಸೋಮವಾರದಿಂದಲೇ ತಂಬಾಕು ಖರೀದಿ: HDK ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭರವಸೆ
ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲ ಮನವಿಗಳನ್ನು ಸಚಿವರು ಆಲಿಸಿದರಲ್ಲದೆ, ಅವುಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ನವದೆಹಲಿ: ಕರ್ನಾಟಕ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಇಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರ ಜೊತೆಗೆ ಮಾತುಕತೆ ನಡೆಸಿದರು.
ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲ ಮನವಿಗಳನ್ನು ಸಚಿವರು ಆಲಿಸಿದರಲ್ಲದೆ, ಅವುಗಳನ್ನು ಕೂಡಲೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಸೋಮವಾರದಿಂದಲೇ ತಂಬಾಕು ಖರೀದಿ, ವಿದೇಶ ಮಾರುಕಟ್ಟೆಗಳಿಗೆ ರಫ್ತು, ಹೊಸ ವಿದೇಶಿ ಮಾರುಕಟ್ಟೆಗಳ ಅನ್ವೇಷಣೆ ಸೇರಿದಂತೆ ಬೆಳೆಗಾರ ಬೇಡಿಕೆಗಳಿಗೆ ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದರು.
ಅಲ್ಲದೆ, ಈ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಶಮನಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಚಿವ ಗೋಯಲ್ ಅವರು ತಮ್ಮ ಸಚಿವಾಲಯದ ಉನ್ನತ ಅಧಿಕಾರಿಗಳು ಹಾಗೂ ತಂಬಾಕು ಖರೀದಿಸುವ ಉದ್ಯಮದ ಪ್ರಮುಖರ ಜತೆ ಮಾತನಾಡಿ ಬೆಳೆಗಾರರ ನೆರವಿಗೆ ಬರುವಂತೆ ಸೂಚಿಸಿದರು ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಚಿವರಾದ ಸಾ.ರಾ. ಮಹೇಶ್, ಮೈಸೂರು -ಕೊಡಗು ಸಂಸದರಾದ ಯದುವೀರ್ ಚಾಮರಾಜೇಂದ್ರ ಕೃಷ್ಣದತ್ತ ಒಡೆಯರ್, ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕರಾದ ಎ. ಮಂಜು, ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್ ಅವರು ಹಾಗೂ ವಾಣಿಜ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.
ಸೋಮವಾರದಿಂದ ತಂಬಾಕು ಖರೀದಿಗೆ ಸೂಚನೆ: ಸಾ.ರಾ. ಮಹೇಶ್
ಸಭೆ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್ ಅವರು; ಸೋಮವಾರದಿಂದ ತಂಬಾಕು ಖರೀದಿಗೆ ಸಚಿವ ಪಿಯೂಷ್ ಗೋಯಲ್ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಅಲ್ಲದೆ, 190 ದೇಶಗಳ ರಾಯಭಾರಿಗಳಿಗೆ ಪತ್ರ ಬರೆದು ಮುಕ್ತ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಗೆ ಕೋರಿಕೆ ಸಲ್ಲಿಸಲಾಗುವುದು. ಅಲ್ಲದೆ, ಈವರೆಗೆ ರಪ್ತು ಮಾಡದಿರುವ ದೇಶಗಳಿಗೂ ತಂಬಾಕು ರಪ್ತು ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಸಚಿವರು ಭರವಸೆ ನೀಡಿದ್ದಾರೆ ಎಂದರು. ಹಾಗೆಯೇ, ತಂಬಾಕಿಗೆ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇವೆ ಎಂದು ಸಾ.ರಾ. ಮಹೇಶ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಖರೀದಿ ನಿಲ್ಲಿಸಿರುವ ಪರಿಣಾಮದಿಂದ ತಂಬಾಕು ಬೆಲೆಯಲ್ಲಿ ಕುಸಿತ ಆಗಿದೆ. ₹320 ಯಿಂದ ₹250 ವರೆಗೂ ಕುಸಿತ ಕಂಡಿದೆ. ಈ ಹಿನ್ನಲೆ ಗೋಯಲ್ ಅವರನ್ನು ಭೇಟಿಯಾಗಿ ಬೆಲೆ ಹೆಚ್ಚಿಸುವ ಮತ್ತು ಪರಿಹಾರ ನೀಡುವ ಬಗ್ಗೆ ಮನವಿ ಮಾಡಲಾಗಿದೆ. ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ನೀಡಲು ಕೇಳಿದ್ದೇವೆ. ಅಲ್ಲದೆ, ತಂಬಾಕು ಮಂಡಳಿಯಲ್ಲಿ ಉತ್ತಮ ಮೂಲಸೌಕರ್ಯಗಳು ಅಗತ್ಯವಾಗಿದ್ದು, ಅದರ ಬಗ್ಗೆಯೂ ಕೇಂದ್ರ ಸಚಿವರ ಗಮನ ಸೆಳೆಯಲಾಗಿದೆ ಎಂದು ಸಾ.ರಾ. ಮಹೇಶ್ ಅವರು ಹೇಳಿದರು.
ಶಾಸಕ ಎ. ಮಂಜು ಅವರು ಮಾತನಾಡಿ; ಕರ್ನಾಟಕದಲ್ಲಿ 100 ದಶಲಕ್ಷ ಟನ್ ತಂಬಾಕು ಬೆಳೆಯಲು ತಂಬಾಕು ಮಂಡಳಿ ಅವಕಾಶ ನೀಡಿದೆ. ಈ ವರ್ಷ 80 ದಶಲಕ್ಷ ಟನ್ ತಂಬಾಕು ಬೆಳೆಯಲಾಗಿದೆ. ನಾವು ಬೆಳೆದ ಸೊಪ್ಪನ್ನು ಸರ್ಕಾರ ನಿರ್ಧಾರ ಮಾಡಿದ ಬೆಲೆಯಲ್ಲಿ ಖರೀದಿ ಮಾಡಬೇಕಿದೆ. ಈ ಹಿಂದೆ ಖರೀದಿ ಭರವಸೆ ನೀಡಿದ ಕಂಪನಿಗಳು ಖರೀದಿ ಮಾಡಿಲ್ಲ. ಈಗ ಬೆಳೆದ ಸೊಪ್ಪನ್ನು ಕೂಡಲೇ ಖರೀದಿ ಮಾಡಬೇಕು. ಕೇಂದ್ರ ಸರ್ಕಾರ ಇದರಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


