ಯುಪಿ ಸಿಎಂ ತಾಯಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮುಸ್ಲಿಂ ಧರ್ಮಗುರು ವಿರುದ್ಧ ಕೇಸ್ ದಾಖಲು
ಬಿಜೆಪಿ ಜಿಲ್ಲಾಧ್ಯಕ್ಷ ರವಿಕುಮಾರ್ ಮಿಶ್ರಾ ಅವರು ಮೌಲಾನಾ ಅಬ್ದುಲ್ಲಾ ಸಲೀಂ ಚತುರ್ವೇದಿ ಅವರ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಕೊತ್ವಾಲಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಿಹಾರ ಮೂಲದ ಮುಸ್ಲಿಂ ಧರ್ಮಗುರುವೊಬ್ಬರ ವಿರುದ್ಧ ಭಾನುವಾರ ಬಲರಾಂಪುರ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ದೊಡ್ಡ ವಿವಾದ ಭುಗಿಲೆದ್ದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ರವಿಕುಮಾರ್ ಮಿಶ್ರಾ ಅವರು ಮೌಲಾನಾ ಅಬ್ದುಲ್ಲಾ ಸಲೀಂ ಚತುರ್ವೇದಿ ಅವರ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಕೊತ್ವಾಲಿ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ತಾಯಿಯ ಬಗ್ಗೆ ಮೌಲಾನಾ ಅಬ್ದುಲ್ಲಾ ಸಲೀಂ ಚತುರ್ವೇದಿ ಅವರ ಆಕ್ಷೇಪಾರ್ಹ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಅವರು, "ಬಿಹಾರ ಧರ್ಮಗುರು ನೀಡಿರುವ ಹೇಳಿಕೆ ಅತ್ಯಂತ ದುರದೃಷ್ಟಕರ ಮತ್ತು ಆಕ್ಷೇಪಾರ್ಹ ಎಂದಿದ್ದಾರೆ.
ಇದು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುವ ಹೇಳಿಕೆಯಾಗಿದೆ. ಧಾರ್ಮಿಕ ಮುಖಂಡರ ಇಂತಹ ಹೇಳಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಂತಹ ಹೇಳಿಕೆಗಳನ್ನು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಬಿಹಾರ ಸರ್ಕಾರಕ್ಕೆ ಮನವಿ ಮಾಡುತ್ತೇನೆ... ಅವರು ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು..." ಎಂದರು.
ಈ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ರಾಜಧಾನಿ ಲಖನೌ, ಬಲರಾಂಪುರ ಮತ್ತು ಇತರ ಜಿಲ್ಲೆಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಮೌಲಾನಾ ವಿರುದ್ಧ ಘೋಷಣೆಗಳನ್ನು ಕೂಗಿ, ಭಾನುವಾರ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದರು.
ಮೌಲಾನಾ ಅವರನ್ನು ಶೀಘ್ರದಲ್ಲೇ ಬಂಧಿಸದಿದ್ದರೆ, ದೊಡ್ಡ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
"ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಮುಖ್ಯಸ್ಥರು ಮಾತ್ರವಲ್ಲದೆ ಗೋರಖ್‌ಪೀಠ ಮಠದ ಪ್ರಧಾನ ಅರ್ಚಕರೂ ಆಗಿದ್ದಾರೆ. ಅವರ ತಾಯಿಯ ವಿರುದ್ಧ ಮಾಡಿದ ಹೇಳಿಕೆ ಖಂಡನೀಯ ಮತ್ತು ಇಡೀ ರಾಜ್ಯದ ಭಾವನೆಗಳಿಗೆ ನೋವುಂಟು ಮಾಡಿದೆ" ಎಂದು ತುಳಸಿಪುರ ಶಾಸಕ ಕೈಲಾಶ್ ನಾಥ್ ಶುಕ್ಲಾ ಹೇಳಿದ್ದಾರೆ.
"ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಮಾಡಲಾಗುತ್ತಿದೆ. ತನಿಖೆಯ ಸಮಯದಲ್ಲಿ ಹೊರಹೊಮ್ಮುವ ಸಂಗತಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಕೊತ್ವಾಲಿ ನಗರ ಇನ್ಸ್‌ಪೆಕ್ಟರ್-ಇನ್-ಚಾರ್ಜ್ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಏತನ್ಮಧ್ಯೆ, ಮೌಲಾನಾ ಅಬ್ದುಲ್ಲಾ ಸಲೀಂ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ವರದಿಗಳ ಪ್ರಕಾರ, ರಂಜಾನ್ ತಿಂಗಳಲ್ಲಿ ಬಿಹಾರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಈ ಭಾಷಣ ಮಾಡಲಾಗಿದೆ.
ವಿಡಿಯೋದಲ್ಲಿ, ಮೌಲಾನಾ ಅವರು ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶದ ಕಾನೂನುಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



