ಭಾರತೀಯ ರೈಲ್ವೇ ಇತಿಹಾಸ: LHB ಬೋಗಿಗಳ ಮೊದಲ ಕ್ರ್ಯಾಶ್ ಟೆಸ್ಟ್ ಯಶಸ್ವಿ, ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಮಹತ್ವದ ಹೆಜ್ಜೆ, Video
ಈ ನಿಯಂತ್ರಿತ ಪರೀಕ್ಷೆಯನ್ನು ಜೂನ್ 24, 2026ರಂದು ಲಖನೌದಲ್ಲಿರುವ RDSOನ ವಿಶೇಷ ಕ್ರ್ಯಾಶ್ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಯಿತು.

ನವದೆಹಲಿ: ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಭಾರತೀಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, LHB ಬೋಗಿಗಳ ಮೊದಲ ಕ್ರ್ಯಾಶ್ ಟೆಸ್ಟ್ ಯಶಸ್ವಿ ಅಭೂತ ಪೂರ್ವ ಯಶಸ್ವಿಯಾಗಿದೆ.
ರೈಲು ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆಯ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO), ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸಹಯೋಗದಲ್ಲಿ ಎಲ್‌ಎಚ್‌ಬಿ (Linke Hofmann Busch - LHB) ಬೋಗಿಗಳ ಮೊದಲ ಪೂರ್ಣ ಪ್ರಮಾಣದ ಕ್ರ್ಯಾಶ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ಈ ನಿಯಂತ್ರಿತ ಪರೀಕ್ಷೆಯನ್ನು ಜೂನ್ 24, 2026ರಂದು ಲಖನೌದಲ್ಲಿರುವ RDSOನ ವಿಶೇಷ ಕ್ರ್ಯಾಶ್ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಯಿತು. ನಿಂತಿದ್ದ ವ್ಯಾಗನ್‌ಗೆ ಎಲ್‌ಎಚ್‌ಬಿ ಬೋಗಿಗಳನ್ನು ಡಿಕ್ಕಿ ಹೊಡೆಸಲಾಯಿತು. ಅಂತಾರಾಷ್ಟ್ರೀಯ EN 15227 ಕ್ರ್ಯಾಶ್ ಸುರಕ್ಷತಾ ಮಾನದಂಡಕ್ಕೆ ಅನುಗುಣವಾಗಿ, ಈ ಡಿಕ್ಕಿ ಸುಮಾರು 43-44 ಕಿ.ಮೀ. ವೇಗದಲ್ಲಿ ಸಂಭವಿಸುವಂತೆ ಪರೀಕ್ಷೆ ನಡೆಸಲಾಯಿತು.
ಕಂಪ್ಯೂಟರ್ ಸಿಮ್ಯುಲೇಷನ್ ಅಥವಾ ಪ್ರಯೋಗಾಲಯದ ಪರೀಕ್ಷೆಗಳಿಗಿಂತ ಭಿನ್ನವಾಗಿ, ಇದು ನೈಜ ಪರಿಸ್ಥಿತಿಯಲ್ಲಿ ನಡೆಸಿದ ಪೂರ್ಣ ಪ್ರಮಾಣದ ಭೌತಿಕ ಕ್ರ್ಯಾಶ್ ಪರೀಕ್ಷೆಯಾಗಿತ್ತು. ವಿಶೇಷವಾಗಿ ನಿರ್ಮಿಸಲಾದ ಇಳಿಜಾರು (ರ್ಯಾಂಪ್) ಮೂಲಕ ಎರಡು ಎಲ್‌ಎಚ್‌ಬಿ ಬೋಗಿಗಳನ್ನು ಒಂದು LSLRD (ಲಗೇಜ್, ಗಾರ್ಡ್ ಮತ್ತು ದಿವ್ಯಾಂಗಜನರ ಬೋಗಿ) ಹಾಗೂ ಇನ್ನೊಂದು LWSPP (LHB Wheel Slide Protection Passenger Coach)—ಸ್ವತಂತ್ರವಾಗಿ ಚಲಿಸುವಂತೆ ಮಾಡಿ, ನಂತರ ಸ್ಥಿರವಾಗಿ ನಿಂತಿದ್ದ ಬ್ಯಾಲೆಸ್ಟ್ ವ್ಯಾಗನ್‌ಗೆ ಡಿಕ್ಕಿ ಹೊಡೆಯುವಂತೆ ಮಾಡಲಾಯಿತು.
ಕ್ರ್ಯಾಶ್ ಪರೀಕ್ಷೆಯಲ್ಲಿ ಬೋಗಿಗಳು ಹಾಗೂ ಪರೀಕ್ಷಾ ಕೇಂದ್ರದಲ್ಲಿ ನೂರಾರು ಸಂವೇದಕಗಳು (Sensors) ಮತ್ತು ಹೈ-ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಇವುಗಳ ಮೂಲಕ ಡಿಕ್ಕಿಯ ಸಮಯದಲ್ಲಿ ಬೋಗಿಯ ರಚನೆಯಲ್ಲಿ ಉಂಟಾದ ಬದಲಾವಣೆ, ಆಘಾತದ ಬಲ ಹಾಗೂ ಬೋಗಿಗಳ ವರ್ತನೆಯನ್ನು ಕ್ಷಣಕ್ಷಣಕ್ಕೂ ದಾಖಲಿಸಲಾಯಿತು.
ಈ ಮಾಹಿತಿಯು ಇಂಜಿನಿಯರ್‌ಗಳಿಗೆ ಕಂಪ್ಯೂಟರ್ ಸಿಮ್ಯುಲೇಷನ್ ಮಾದರಿಗಳನ್ನು ಪರಿಶೀಲಿಸಲು, ಕ್ರ್ಯಾಶ್-ಸುರಕ್ಷಿತ ವಿನ್ಯಾಸಗಳನ್ನು ಇನ್ನಷ್ಟು ಸುಧಾರಿಸಲು ಹಾಗೂ ಭವಿಷ್ಯದ ರೈಲು ಬೋಗಿಗಳ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಸುರಕ್ಷತೆಗೆ ARAI ತಾಂತ್ರಿಕ ನೆರವು
ವಾಹನಗಳ ಕ್ರ್ಯಾಶ್ ಪರೀಕ್ಷೆ ಹಾಗೂ ಹೋಮೋಲೋಗೇಶನ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ARAI ಈ ರೈಲ್ವೆ ಸುರಕ್ಷತಾ ಯೋಜನೆಯಲ್ಲಿ ತನ್ನ ತಾಂತ್ರಿಕ ಅನುಭವವನ್ನು ಬಳಸಿಕೊಂಡಿದೆ. ವಿಶೇಷವಾಗಿ ಭಾರತ್ NCAP ವಾಹನ ಕ್ರ್ಯಾಶ್ ಪರೀಕ್ಷೆಗಳ ಮೂಲಕ ಪಡೆದ ಅನುಭವವನ್ನು ರೈಲ್ವೆ ಸುರಕ್ಷತಾ ಅಧ್ಯಯನಕ್ಕೂ ಅನ್ವಯಿಸಲಾಗಿದೆ. ಈ ಮಹತ್ವದ ಯೋಜನೆಯಲ್ಲಿ RDSOಗೆ ಸಹಕಾರ ನೀಡಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿರುವ ARAI, ವೈಜ್ಞಾನಿಕ ಪರೀಕ್ಷೆ ಮತ್ತು ತಾಂತ್ರಿಕ ದೃಢೀಕರಣದ ಮೂಲಕ ಭಾರತೀಯ ರೈಲ್ವೆಯ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದೆ.
ಈ ಪರೀಕ್ಷೆ ಏಕೆ ಮಹತ್ವದ್ದು?
ಹಳೆಯ ICF ಬೋಗಿಗಳ ಹೋಲಿಕೆಯಲ್ಲಿ LHB ಬೋಗಿಗಳು ಈಗಾಗಲೇ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತಿದೆ. ಇದಕ್ಕೆ ಅವುಗಳ ಆಂಟಿ-ಕ್ಲೈಂಬಿಂಗ್ ವಿನ್ಯಾಸ, ಬಲಿಷ್ಠ ರಚನೆ ಹಾಗೂ ಅಪಘಾತದ ಸಂದರ್ಭದಲ್ಲಿ ಹಾನಿಯನ್ನು ಕಡಿಮೆ ಮಾಡುವ ಸಾಮರ್ಥ್ಯ ಪ್ರಮುಖ ಕಾರಣವಾಗಿದೆ.
ಆದರೆ, ನೈಜ ಪರಿಸ್ಥಿತಿಯಲ್ಲಿ ನಡೆಸುವ ಕ್ರ್ಯಾಶ್ ಪರೀಕ್ಷೆಗಳು ಕಂಪ್ಯೂಟರ್ ಸಿಮ್ಯುಲೇಷನ್‌ಗಳಿಗಿಂತ ಹೆಚ್ಚಿನ ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುತ್ತವೆ. ಈ ಪರೀಕ್ಷೆಯಿಂದ ಲಭ್ಯವಾಗುವ ಮಾಹಿತಿಯ ಆಧಾರದ ಮೇಲೆ ಭಾರತೀಯ ರೈಲ್ವೆ ಬೋಗಿಗಳ ರಚನೆಯನ್ನು ಇನ್ನಷ್ಟು ಸುಧಾರಿಸಲು, ಡಿಕ್ಕಿಯ ಶಕ್ತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಮುಂದಿನ ತಲೆಮಾರಿನ ಬೋಗಿಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ.
ದೇಶಾದ್ಯಂತ ಹೈಸ್ಪೀಡ್ ಹಾಗೂ ಸೆಮಿ-ಹೈಸ್ಪೀಡ್ ರೈಲು ಸೇವೆಗಳನ್ನು ವಿಸ್ತರಿಸುತ್ತಿರುವ ಭಾರತೀಯ ರೈಲ್ವೆಗೆ, ಇಂತಹ ಪೂರ್ಣ ಪ್ರಮಾಣದ ಕ್ರ್ಯಾಶ್ ಪರೀಕ್ಷೆಗಳು ಮುಂದಿನ ದಿನಗಳಲ್ಲಿ ಲಕ್ಷಾಂತರ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಪ್ರಮುಖ ಕ್ರಮಗಳಾಗಿ ಪರಿಣಮಿಸಲಿವೆ ಎಂದು ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



