ಜಮ್ಮು-ಕಾಶ್ಮೀರದ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ: ಕಮಾಂಡಿಂಗ್ ಆಫೀಸರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ FIR!
ಸೈನಿಕರಿಂದ ಹಲ್ಲೆಗೊಳಗಾದವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಭಗತ್ ಮತ್ತು ಅಥೋಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಮೃತ್ ಕಟೋಚ್ ಸೇರಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿದ ಆರೋಪದ ಮೇಲೆ ಕಮಾಂಡಿಂಗ್ ಆಫೀಸರ್ ಮತ್ತು ಮೇಜರ್ ಸೇರಿದಂತೆ ನಲವತ್ತು ಸೇನಾ ಸಿಬ್ಬಂದಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಿಶ್ತ್ವಾರ್ನ ಅಥೋಲಿ ಪೊಲೀಸ್ ಠಾಣೆಗೆ ನುಗ್ಗಿ, ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 17 ರಾಷ್ಟ್ರೀಯ ರೈಫಲ್ಸ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಎನ್ ಅರುಣ್ ಗಾಂಧಿ, ಮೇಜರ್ ವಿಕಾಸ್ ಶರ್ಮಾ, ನೈಬ್ ಸುಬೇದಾರ್ ಶಂಕರ್ ಗುರ್ಖೆ ಮತ್ತು ಇತರ 30 ರಿಂದ 40 ಮಂದಿ ಸೇನಾ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶಂಕಿತರ ಮೇಲೆ ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿ ನಾಶದ ಆರೋಪಗಳಿವೆ. ಸೇನೆಯು ತನಿಖೆಗೆ ಸಹಕರಿಸುವುದಾಗಿ ಹೇಳಿದೆ.
ಸೈನಿಕರಿಂದ ಹಲ್ಲೆಗೊಳಗಾದವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಭಗತ್ ಮತ್ತು ಅಥೋಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಮೃತ್ ಕಟೋಚ್ ಸೇರಿದ್ದಾರೆ.
ಪದ್ದಾರ್ನ ಬ್ಲಾಕ್ ಡೆವಲಪ್ಮೆಂಟ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಕಿಶ್ತ್ವಾರ್ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಪಡೆಗಳು ಪೊಲೀಸ್ ಠಾಣೆಗೆ ನುಗ್ಗಿ ದಾಳಿ ನಡೆಸಿವೆ ಎಂದು ಎಸ್ಎಚ್ಒ ಸಲ್ಲಿಸಿದ ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ಪೊಲೀಸ್ ಠಾಣೆಯೊಳಗೆ ನಡೆಯುತ್ತಿರುವ ಹಿಂಸಾತ್ಮಕ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಮತ್ತೆ ಠಾಣೆಗೆ ಮರಳಿದ್ದಾಗಿ SHO ಹೇಳಿದರು.
'ಕಿಶ್ತ್ವಾರ್ನ ಅಥೋಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಷಯವು ಸೂಕ್ತ ಸಾಂಸ್ಥಿಕ ಕಾರ್ಯವಿಧಾನಗಳ ಮೂಲಕ ಪರಿಶೀಲನೆಯಲ್ಲಿದೆ. ಭಾರತೀಯ ಸೇನೆಯು ಕಾನೂನು ಪ್ರಕ್ರಿಯೆಯಲ್ಲಿ ಸಂಪೂರ್ಣ ಸಹಕಾರ ನೀಡುತ್ತದೆ. ಜಂಟಿ ತನಿಖೆಯ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಹಂತದಲ್ಲಿ ತನಿಖೆಗಳು ಪ್ರಗತಿಯಲ್ಲಿರುವಾಗ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಅಕಾಲಿಕವಾಗಿರುತ್ತದೆ' ಎಂದು ರಕ್ಷಣಾ ವಕ್ತಾರರು ಎನ್ಡಿಟಿವಿಗೆ ತಿಳಿಸಿದ್ದಾರೆ.
'ಪೊಲೀಸ್ ಠಾಣೆಯ ಆವರಣವನ್ನು ಪ್ರವೇಶಿಸಿದ ತಕ್ಷಣ, ಮೇಜರ್ ವಿಕಾಸ್ ಶರ್ಮಾ ನೇತೃತ್ವದಲ್ಲಿ ಸೇನಾ ಸಿಬ್ಬಂದಿ, ಆಕ್ರಮಣಕಾರಿಯಾಗಿ ಸಂತ್ರಸ್ತರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ಈ ಗಲಾಟೆಯ ಸಮಯದಲ್ಲಿ, ಅವರು ಸಮವಸ್ತ್ರವನ್ನು ಹರಿದು ಹಾಕಿದರು ಮತ್ತು ಅಥೋಲಿ ಎಸ್ಡಿಪಿಒ ಶ್ರೀ ವಿಜಯ್ ಕುಮಾರ್ ಭಗತ್ ಅವರ ಮೇಲೂ ಹಲ್ಲೆ ನಡೆಸಿದರು' ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಎಫ್ಐಆರ್ನಲ್ಲಿ ಪೊಲೀಸರು ದಾಳಿಯನ್ನು ಪೂರ್ವ ಯೋಜಿತವಾಗಿ ನಡೆಸಲಾಗಿದ್ದು, ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಸೇನಾ ಸಿಬ್ಬಂದಿ ಮುಖ್ಯ ದ್ವಾರ ಮತ್ತು ಗಡಿ ಗೋಡೆಗಳನ್ನು ಹತ್ತಿ ಪೊಲೀಸ್ ಠಾಣೆಯೊಳಗೆ ಬಲವಂತವಾಗಿ ಪ್ರವೇಶಿಸಿದಾಗ ಅವರ ಬಳಿ ಲಾಠಿ, ಕಬ್ಬಿಣದ ಸರಳುಗಳು ಮತ್ತು ಸೇವಾ ಶಸ್ತ್ರಾಸ್ತ್ರಗಳಿದ್ದವು ಎಂದು ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ಕಿಶ್ತ್ವಾರ್ನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ARTO) ಸೇನೆಯ ವಾಹನವನ್ನು ವಶಪಡಿಸಿಕೊಂಡ ನಂತರ ಪಡೆಗಳು ಪೊಲೀಸ್ ಠಾಣೆಗೆ ನುಗ್ಗಿದವು.
ದಾಳಿಯ ಸಮಯದಲ್ಲಿ, ಪೊಲೀಸ್ ಠಾಣೆ ಆವರಣದಲ್ಲಿದ್ದ ARTO ಕಿಶ್ತ್ವಾರ್ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳ (PSO) ಮೇಲೂ ಸೇನೆಯು ಹಲ್ಲೆ ನಡೆಸಿದೆ ಎಂದು FIR ನಲ್ಲಿ ತಿಳಿಸಿದೆ.
'ದಾಳಿಕೋರರು ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಗೆ ವ್ಯಾಪಕ ಹಾನಿಯನ್ನುಂಟುಮಾಡಿದ್ದಾರೆ. ARTO ಅವರ ಅಧಿಕೃತ ವಾಹನ, ಅಥೋಲಿ ಪೊಲೀಸ್ ಠಾಣೆ SHO ವಾಹನ, SDPO ಅಥೋಲಿ ಮತ್ತು ಪೊಲೀಸ್ ಠಾಣೆಯ ಮುಖ್ಯ ದ್ವಾರವನ್ನು ಧ್ವಂಸಗೊಳಿಸಿದ್ದಾರೆ' ಎಂದು FIR ನಲ್ಲಿ ಹೇಳಲಾಗಿದೆ.
ದಾಳಿಯನ್ನು ಪೂರ್ವ ಯೋಜಿತವಾಗಿ ನಡೆಸಲಾಗಿತ್ತು ಮತ್ತು ಸೇನಾ ಸಿಬ್ಬಂದಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಕೊಲ್ಲಲು ಬಯಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



