ಮೋದಿ ಕುರಿತು ಮೆಚ್ಚುಗೆ: 'ರಾಜಕೀಯ ಅಂಕ ಗಳಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ'- ಪವನ್ ಖೇರಾಗೆ ಶಶಿ ತರೂರ್ ತಿರುಗೇಟು
"ಭಾರತೀಯರ ಜೀವದ ಬಗ್ಗೆ ಇರುವ ಕಾಳಜಿ ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು," ಎಂದು ಮಾಜಿ ಕೇಂದ್ರ ಸಚಿವ ತರೂರ್ ಒತ್ತಿಹೇಳಿದರು.

ನವದೆಹಲಿ: ಪ್ರಧಾನಿ ಮೋದಿ ವಿದೇಶಾಂಗ ನೀತಿ ಕುರಿತು ಕಾಂಗ್ರೆಸ್ ಪಕ್ಷದ ನಾಯಕರೇ ಇದೀಗ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ತಮ್ಮ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ಮಾಡಿದ್ದ ಟೀಕೆಗಳಿಗೆ ಶಶಿ ತರೂರ್ ಕೂಡ ಖಡಕ್ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ಹೇಳದೇ ಇದ್ದ ಮಾತನ್ನೂ ತರೂರ್ ಕೇಳಬಲ್ಲರು ಎಂಬ ಪವನ್ ಖೇರಾ ಅವರ ಮಾತಿಗೆ ತಿರುಗೇಟು ನೀಡಿರುವ ಶಶಿತರೂರ್, 'ಭಾರತೀಯ ನಾಗರಿಕ ನಾವಿಕರ ರಕ್ಷಣೆಗೆ ಸಂಬಂಧಿಸಿದ ಹೇಳಿಕೆಯನ್ನು ಪಕ್ಷಪಾತದ ರಾಜಕೀಯ ವಿವಾದವನ್ನಾಗಿ ಮಾಡಿರುವುದು ಆಶ್ಚರ್ಯಕರ' ಎಂದು ಪ್ರತಿಕ್ರಿಯಿಸಿದರು.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿರುವ ಶಶಿತರೂರ್, 'ಮೂವರು ಭಾರತೀಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ನನ್ನ ಹೇಳಿಕೆಗಳು ನಮ್ಮ ನಾಗರಿಕರ ಸುರಕ್ಷತೆ ಹಾಗೂ ನಾಗರಿಕ ನಾವಿಕರು ಎಂದಿಗೂ ಯುದ್ಧದ ಗುರಿಯಾಗಬಾರದು ಎಂಬ ತತ್ವಕ್ಕೆ ಸಂಬಂಧಿಸಿದ್ದಾಗಿತ್ತು.
ಕೆಲವರು ಈ ವಿಷಯವನ್ನು ಪರಿಹರಿಸುವ ಬದಲು ರಾಜಕೀಯ ಅಂಕ ಗಳಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದರೆ, ಅದು ಅವರ ಬಗ್ಗೆ ಹೆಚ್ಚು ಹೇಳುತ್ತದೆ; ನನ್ನ ಬಗ್ಗೆ ಅಲ್ಲ," ಎಂದು ಅವರು ಹೇಳಿದ್ದಾರೆ.
ಅಂತೆಯೇ "ಭಾರತೀಯರ ಜೀವದ ಬಗ್ಗೆ ಇರುವ ಕಾಳಜಿ ನಮ್ಮನ್ನು ಒಗ್ಗೂಡಿಸಬೇಕು, ವಿಭಜಿಸಬಾರದು," ಎಂದು ಮಾಜಿ ಕೇಂದ್ರ ಸಚಿವ ತರೂರ್ ಒತ್ತಿಹೇಳಿದರು.
ಹೇಳದ ಮಾತೂ ಕೇಳುತ್ತದೆ ಖೇರಾ ಹೇಳಿಕೆಗೆ ತಿರುಗೇಟು ನೀಡಿರುವ ತರೂರ್, "ಮೋದಿ ಜಿ-7 ಸಭೆಯಲ್ಲಿ ಹೇಳದ ಮಾತುಗಳನ್ನು ನಾನು ಕೇಳಿದ್ದೇನೆ ಎಂದು ನಂಬುವವರಿಗೆ ಹೇಳಬೇಕೆಂದರೆ, ನಾನು ವ್ಯಾಪಕವಾಗಿ ಪ್ರಕಟವಾದ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದೇನೆ. ವರದಿ ಕೇಳಲು ಇಚ್ಛೆಯಿದ್ದರೆ, ಇಲ್ಲಿದೆ ಒಂದು ವರದಿ" ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಅವರು ಒಂದು ಮಾಧ್ಯಮ ವರದಿಯ ಯೂಟ್ಯೂಬ್ ಲಿಂಕ್ ಹಂಚಿಕೊಂಡು, "ನಾನು ವ್ಯಾಪಕವಾಗಿ ಓದುತ್ತೇನೆ ಮತ್ತು ಓದಿದ್ದನ್ನು ನೆನಪಿಟ್ಟುಕೊಳ್ಳುತ್ತೇನೆ. ನನ್ನ ಜೀವನದಲ್ಲಿ ನಾನು ಎಂದಿಗೂ ಯಾವುದೇ ವಿಚಾರ ಅಥವಾ ಹೇಳಿಕೆಯನ್ನು ತಪ್ಪಾಗಿ ನಿರೂಪಿಸಿದ್ದೇನೆ ಅಥವಾ ತಿರುಚಿದ್ದೇನೆ ಎಂಬ ಆರೋಪ ಎದುರಿಸಿಲ್ಲ.
ಪ್ರಧಾನಿ ಮೋದಿ ಟ್ರಂಪ್ ಅವರ ಪಕ್ಕದಲ್ಲೇ ಕುಳಿತಿದ್ದಾಗ ಮಾಡಿದ್ದರೆಂದು ಮುದ್ರಿತ ಮಾಧ್ಯಮಗಳಲ್ಲಿ ಪ್ರಕಟವಾದ ಹೇಳಿಕೆಗಳ ಸಾರಾಂಶವನ್ನು ನಾನು ನೀಡಿದ್ದೇನೆ. ಅದರ ಬಗ್ಗೆ ನಾನು ದೃಢವಾಗಿ ನಿಂತಿದ್ದೇನೆ" ಎಂದು ಹೇಳಿದ್ದಾರೆ.
ತರೂರ್ ನಿಲುವು ರಾಹುಲ್ ಗಾಂಧಿ ನಿಲುವಿಗೆ ವಿರುದ್ಧ
ಈ ಮಧ್ಯೆ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಮೋದಿ ಸರ್ಕಾರವು ನಾವಿಕರ ವಿಚಾರದಲ್ಲಿ ಅನುಸರಿಸಿದ ನಿಲುವಿನ ಬಗ್ಗೆ ತರೂರ್ ವ್ಯಕ್ತಪಡಿಸಿದ ಅಭಿಪ್ರಾಯವು ರಾಹುಲ್ ಗಾಂಧಿಯ ನಿಲುವಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
"ಇದು ಕಾಂಗ್ರೆಸ್‌ಗೆ ಮುಜುಗರದ ಸಂಗತಿ. ನಿನ್ನೆ ರಾಹುಲ್ ಗಾಂಧಿಯ ಜನ್ಮದಿನವಾಗಿತ್ತು, ಆದರೆ ಅವರಿಗೆ ಯಾವುದೇ ಉಡುಗೊರೆ ಸಿಕ್ಕಿಲ್ಲ. ಡಾ. ಶಶಿ ತರೂರ್ ಅವರು ರಾಹುಲ್ ಗಾಂಧಿಯ ನಿಲುವನ್ನೇ ಖಂಡಿಸಿ, ಪ್ರಧಾನಿ ಮೋದಿ ಟ್ರಂಪ್ ಅವರ ಮುಂದೆ ಭಾರತದ ನಿಲುವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ ಎಂದು ಹೇಳಿದ್ದಾರೆ" ಎಂದು ಪೂನವಾಲಾ ವಿಡಿಯೊ ಹೇಳಿಕೆಯಲ್ಲಿ ಹೇಳಿದರು.
ಇದರ ಜೊತೆಗೆ, ಮೋದಿ ಅವರ ದೃಷ್ಟಿಕೋನ, ಮಾತಿನ ಶೈಲಿ, ಚುರುಕುತನ ಹಾಗೂ ವಾಗ್ಮಿತೆಯನ್ನು ತರೂರ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ ಮತ್ತು ಮೋದಿ ಭಾರತೀಯರ ಜೀವನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ಪೂನವಾಲಾ ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುತ್ತಿರುವುದನ್ನೂ ಅವರು ಟೀಕಿಸಿ, ಪಕ್ಷದೊಳಗಿನ ಕೆಲವು ನಾಯಕರು ಆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



