NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಆಕ್ರೋಶ: ಜಂತರ್ ಮಂತರ್‌ನಲ್ಲಿ ಮುಂದುವರೆದ Cockroach Janta Party ಪ್ರತಿಭಟನೆ; 'ನ್ಯಾಯ ಸಿಗುವವರೆಗೂ ಹಿಂದೆ ಸರಿಯಲ್ಲ'- ದೀಪ್ಕೆ ಘೋಷಣೆ
ಶನಿವಾರ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರತಿಭಟನೆಗೆ ಅನುಮತಿ ನೀಡಲಾಗಿತ್ತು. ಆದರೆ, ಪ್ರತಿಭಟನಾಕಾರರು ಸ್ಥಳವನ್ನು ತೆರವುಗೊಳಿಸಲು ನಿರಾಕರಿಸಿ ರಾತ್ರಿಯಿಡೀ ಧರಣಿ ಮುಂದುವರಿಸಿದರು.

ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಆರಂಭವಾಗಿರುವ ಪ್ರತಿಭಟನೆ ಎರಡನೇ ದಿನವೂ ಮುಂದುವರಿದಿದೆ.
ಕಾಕ್‌ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ನಡೆಯುತ್ತಿರುವ ಈ ಧರಣಿ ಭಾನುವಾರವೂ ಮುಂದುವರಿದಿದ್ದು, ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದ್ದಾರೆ.
ಶನಿವಾರ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರತಿಭಟನೆಗೆ ಅನುಮತಿ ನೀಡಲಾಗಿತ್ತು. ಆದರೆ, ಪ್ರತಿಭಟನಾಕಾರರು ಸ್ಥಳವನ್ನು ತೆರವುಗೊಳಿಸಲು ನಿರಾಕರಿಸಿ ರಾತ್ರಿಯಿಡೀ ಧರಣಿ ಮುಂದುವರಿಸಿದರು. ದೆಹಲಿ ಪೊಲೀಸರು ಅನುಮತಿ ಅವಧಿ ಮುಗಿದಿದೆ ಎಂದು ತಿಳಿಸಿ ಸ್ಥಳ ಖಾಲಿ ಮಾಡುವಂತೆ ಸೂಚಿಸಿದರೂ, ಅಭಿಜಿತ್ ದೀಪ್ಕೆ ಹಾಗೂ ಅವರ ಬೆಂಬಲಿಗರು ಅಲ್ಲಿಯೇ ಉಳಿದು ಪ್ರತಿಭಟನೆ ಮುಂದುವರಿಸಿದರು.
"ನಾವು ಹೋರಾಟ ಮುಂದುವರಿಸಿದ್ದೇವೆ. ಆದರೆ, ಜನರ ಬೆಂಬಲವಿಲ್ಲದೆ ಈ ಚಳವಳಿ ಯಶಸ್ವಿಯಾಗುವುದಿಲ್ಲ. ನೀಟ್ ಮರುಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಬಳಿಕ ಜಂತರ್ ಮಂತರ್‌ಗೆ ಬಂದು ನಮ್ಮೊಂದಿಗೆ ಸೇರಬೇಕು" ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರತಿಭಟನೆಯ ವೇಳೆ ಪೊಲೀಸರು ಜನರನ್ನು ಸ್ಥಳಕ್ಕೆ ಬರದಂತೆ ತಡೆಯಬಾರದು ಎಂದು ಮನವಿ ಮಾಡಿದರು.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ಬರೆದಿರುವ ಅವರು, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ನ್ಯಾಯ ದೊರಕಬೇಕು ಎಂಬುದೇ ತಮ್ಮ ಬೇಡಿಕೆ ಎಂದು ಹೇಳಿದ್ದಾರೆ.
ಇದರ ನಡುವೆ ಪ್ರತಿಭಟನಾ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಶನಿವಾರ ಮಧ್ಯಾಹ್ನ ಆರಂಭವಾದ ಪ್ರತಿಭಟನೆಯಲ್ಲಿ ನೂರಾರು ಯುವಕರು ಭಾಗವಹಿಸಿದ್ದರು. ದೀಪ್ಕೆ ಕರೆ ನೀಡಿದ್ದ "ತಾಲಿ-ಚಮಚ" ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರು ತಟ್ಟೆ ಮತ್ತು ಚಮಚಗಳನ್ನು ಬಾರಿಸಿ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಹಾಗೂ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕಾಕ್‌ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ "ಬಂಧನವಾದರೆ ಮೊದಲಿಗೆ ನಾನು ಬಂಧನಕ್ಕೆ ಒಳಗಾಗುತ್ತೇನೆ" ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹೋರಾಟಗಾರ ಸೋನಮ್ ವಾಂಗ್ಚುಕ್, ಜೂನ್ 27ರೊಳಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ತಾವು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದರು.
ಜಂತರ್ ಮಂತರ್‌ನಲ್ಲಿ ನಡೆದಿರುವ ಈ ಪ್ರತಿಭಟನೆಗೆ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸಿಸಿಟಿವಿ ನಿಗಾ, ಬ್ಯಾರಿಕೇಡ್‌ಗಳು ಹಾಗೂ ಬಾಡಿ ಕ್ಯಾಮೆರಾಗಳನ್ನು ಧರಿಸಿದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಸಿಜೆಪಿ ಆಯೋಜಿಸಿರುವ ಇದು ಎರಡನೇ ಪ್ರಮುಖ ಪ್ರತಿಭಟನೆಯಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುವ ಪ್ರಯತ್ನಗಳು ಮುಂದುವರಿದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



