ಇಂಧನ ಸಂಗ್ರಹಣೆ-ಕಾಳಸಂತೆ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ: ಪೆಟ್ರೋಲ್ ಬಂಕ್‌ಗಳಲ್ಲಿ Bulk ಇಂಧನ ಖರೀದಿಗೆ ನಿಷೇಧ..!
ಕೈಗಾರಿಕಾ, ವಾಣಿಜ್ಯ ಹಾಗೂ ಸಾಂಸ್ಥಿಕ ಬಳಕೆದಾರರು ಇನ್ನು ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸಲು ಅವಕಾಶ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ: ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ಸಮತೋಲನದಲ್ಲಿಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕೈಗಾರಿಕಾ, ವಾಣಿಜ್ಯ ಹಾಗೂ ಸಾಂಸ್ಥಿಕ ಬಳಕೆದಾರರು ಇನ್ನು ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸಲು ಅವಕಾಶ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಜೂನ್ 11ರಂದು ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಪೂರೈಕೆಯ ತಾತ್ಕಾಲಿಕ ನಿಯಂತ್ರಣ) ಆದೇಶ 2026’ ಅಧಿಸೂಚನೆಯನ್ನು ಹೊರಡಿಸಿದ್ದು, ಇದರಡಿ ತೈಲ ಮಾರುಕಟ್ಟೆ ಕಂಪನಿಗಳಿಗೆ ಬಲ್ಕ್ ಖರೀದಿಗೆ ನಿರ್ಬಂಧ ಹೇರಲು ಅಧಿಕಾರ ನೀಡಲಾಗಿದೆ.
ಇದ್ದಕ್ಕಿದ್ದಂತೆ ಈ ನಿರ್ಧಾರವೇಕೆ?
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದ ಜಾಗತಿಕ ತೈಲ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಡೀಸೆಲ್ ಬೇಡಿಕೆ ಏರಿಕೆಯಾಗಿದೆ.
ಸಾಮಾನ್ಯ ಗ್ರಾಹಕರಿಗೆ ಹೊರೆ ಕಡಿಮೆ ಮಾಡಲು ಸರ್ಕಾರಿ ತೈಲ ಕಂಪನಿಗಳು ಚಿಲ್ಲರೆ ದರಗಳನ್ನು ನಿಯಂತ್ರಿಸಿದ್ದರೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆದಾರರು ಮಾರುಕಟ್ಟೆ ಆಧಾರಿತ ಬಲ್ಕ್ ದರವನ್ನು ಪಾವತಿಸಬೇಕಾಗಿದೆ. ಈ ದರ ವ್ಯತ್ಯಾಸದ ಕಾರಣ ಹಲವಾರು ಕೈಗಾರಿಕೆಗಳು ಬಲ್ಕ್ ಸರಬರಾಜು ಕೇಂದ್ರಗಳ ಬದಲಿಗೆ ಪೆಟ್ರೋಲ್ ಬಂಕ್‌ಗಳಿಂದಲೇ ಡೀಸೆಲ್ ಖರೀದಿಸಲು ಮುಂದಾಗಿವೆ.
ದರ ವ್ಯತ್ಯಾಸ ಎಷ್ಟಿದೆ?
ಪ್ರಸ್ತುತ ದೆಹಲಿಯಲ್ಲಿ ಚಿಲ್ಲರೆ ಡೀಸೆಲ್ ದರ ಪ್ರತಿ ಲೀಟರ್‌ಗೆ ರೂ.95.20 ಇದ್ದರೆ, ಬಲ್ಕ್ ಡೀಸೆಲ್ ದರ ರೂ.134.50 ಆಗಿದೆ. ಈ ಭಾರೀ ವ್ಯತ್ಯಾಸದಿಂದ ವಾಣಿಜ್ಯ ಬಳಕೆದಾರರು ಪೆಟ್ರೋಲ್ ಬಂಕ್‌ಗಳತ್ತ ಮುಖ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಹೊಸ ನಿಯಮಗಳಲ್ಲೇನಿದೆ?
ಕೈಗಾರಿಕಾ, ವಾಣಿಜ್ಯ ಮತ್ತು ಸಾಂಸ್ಥಿಕ ಬಳಕೆದಾರರು ಇನ್ನು ಮುಂದೆ ಪೆಟ್ರೋಲ್ ಬಂಕ್‌ಗಳಿಂದ ಬಲ್ಕ್ ಪ್ರಮಾಣದಲ್ಲಿ ಇಂಧನ ಖರೀದಿಸುವಂತಿಲ್ಲ.
ಅವರು ತಮ್ಮದೇ ಗ್ರಾಹಕ ಪಂಪ್‌ಗಳು ಅಥವಾ ಅಧಿಕೃತ ಬಲ್ಕ್ ಸರಬರಾಜು ಕೇಂದ್ರಗಳಿಂದ ಇಂಧನ ಪಡೆಯಬೇಕು.
ಡೀಸೆಲ್ ಖರೀದಿಗೆ ಪ್ರತಿ ವಾಹನ ಅಥವಾ ಗ್ರಾಹಕರಿಗೆ ದಿನಕ್ಕೆ 200 ಲೀಟರ್ ಮಿತಿ ವಿಧಿಸಲಾಗಿದೆ.
ವಾಹನದ ಟ್ಯಾಂಕ್ ಅಥವಾ PESO ಅನುಮೋದಿತ ಕಂಟೇನರ್‌ಗಳ ಮೂಲಕ ಮಾತ್ರ ಡೀಸೆಲ್ ಖರೀದಿಸಲು ಅವಕಾಶ ಇರುತ್ತದೆ.
ಖರೀದಿಸಿದ ಡೀಸೆಲ್ ಅನ್ನು ಮರು ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಹೊಸ ನಿಯಮ 90 ದಿನಗಳವರೆಗೆ ಜಾರಿ
ಈ ನಿರ್ಬಂಧಗಳು ಆರಂಭಿಕವಾಗಿ 90 ದಿನಗಳವರೆಗೆ ಜಾರಿಯಲ್ಲಿರಲಿದ್ದು, ಅಗತ್ಯವಿದ್ದರೆ ಹೊಸ ಅಧಿಸೂಚನೆಯ ಮೂಲಕ ಅವುಗಳನ್ನು ವಿಸ್ತರಿಸಬಹುದು ಎಂದು ಸರ್ಕಾರ ತಿಳಿಸಿದೆ.
ರಾಜ್ಯಗಳಿಗೆ ಸೂಚನೆ
ಇದೇ ವೇಳೆ ಇಂಧನ ಸಂಗ್ರಹಣೆ (ಹೋರ್ಡಿಂಗ್), ಕಾಳಸಂತೆ, ಅನಧಿಕೃತ ಖರೀದಿ ಹಾಗೂ ಇಂಧನ ತಿರುವು (ಡೈವರ್ಷನ್) ತಡೆಯಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಕೇಂದ್ರದ ಪ್ರಕಾರ, ಈ ಕ್ರಮಗಳಿಂದ ಸಾಮಾನ್ಯ ಗ್ರಾಹಕರಿಗೆ ಇಂಧನ ಕೊರತೆ ಉಂಟಾಗದಂತೆ ತಡೆಯಲು, ಕಾಳಸಂತೆ ನಿಯಂತ್ರಿಸಲು ಹಾಗೂ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಪೂರೈಕೆಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಸಹಾಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



