ಕೋಲ್ಕತಾ ಸರ್ಕಾರಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ; ಸಾಕ್ಷ್ಯ ನಾಶಕ್ಕೆ ವಿಧ್ವಂಸಕ ಕೃತ್ಯ ಎಂದ ಬಿಜೆಪಿ
ವಿಧಾನಸಭಾ ಚುನಾವಣೆಯ ಸಮಯದಲ್ಲಿ ತನ್ನನ್ನು ತಾನು 'ಪುಷ್ಪ' ಎಂದು ಕರೆದುಕೊಂಡಿದ್ದ ಜಹಾಂಗೀರ್ ಖಾನ್ ಅವರನ್ನು ಸೋಮವಾರ ಸುಲಿಗೆ ಮತ್ತು ಇತರ ಆರೋಪಗಳ ಮೇಲೆ ಬಂಧಿಸಲಾಗಿದೆ.

ಕೋಲ್ಕತ್ತಾ: ಕೋಲ್ಕತ್ತಾದ ಒಂಬತ್ತು ಅಂತಸ್ತಿನ ಸರ್ಕಾರಿ ಕಟ್ಟಡದಲ್ಲಿ ಬುಧವಾರ ಬೆಳಗ್ಗೆ ಕಚೇರಿಗಳು ಆರಂಭವಾಗುವ ಮುನ್ನ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು 17 ಅಗ್ನಿಶಾಮಕ ದಳಗಳನ್ನು ನಿಯೋಜಿಸಬೇಕಾಯಿತು. ನಂತರ ಮಧ್ಯಾಹ್ನ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲಾಯಿತು.
ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸಹ ಈ ಕಟ್ಟಡದಲ್ಲಿಯೇ ಇದ್ದು, ಜಿಲ್ಲಾ ಪರಿಷತ್‌ನ ರಸ್ತೆಗಳು ಮತ್ತು ಸಾರಿಗೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಜಹಾಂಗೀರ್ ಖಾನ್ ಅವರ ಕಚೇರಿ ಈ ಕಟ್ಟಡದ ಮೂರನೇ ಮಹಡಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣೆಯ ಸಮಯದಲ್ಲಿ ತನ್ನನ್ನು ತಾನು 'ಪುಷ್ಪ' ಎಂದು ಕರೆದುಕೊಂಡಿದ್ದ ಜಹಾಂಗೀರ್ ಖಾನ್ ಅವರನ್ನು ಸೋಮವಾರ ಸುಲಿಗೆ ಮತ್ತು ಇತರ ಆರೋಪಗಳ ಮೇಲೆ ಬಂಧಿಸಲಾಗಿದೆ.
ಕೋಲ್ಕತ್ತಾದ ಅಲಿಪೋರ್ ಪ್ರದೇಶದ ಕಟ್ಟಡದ ಮೂರನೇ ಮಹಡಿಯಲ್ಲಿ ಇಂದು ಬೆಳಗ್ಗೆ 9.50 ರ ಸುಮಾರಿಗೆ ಮೊದಲು ಬೆಂಕಿ ಕಾಣಿಸಿಕೊಂಡಿತು. ಬೆಂಕಿ ನಂತರ ಕಟ್ಟಡದ ಇತರ ಭಾಗಗಳಿಗೆ ಹರಡಿತು. ಅದನ್ನು ಯಶಸ್ವಿಯಾಗಿ ನಂದಿಸಲಾಗಿದೆ. ಮೇಲಿನ ಮಹಡಿಯಲ್ಲಿ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೆರಡು ಗಂಟೆಗಳ ನಂತರ, ಬೆಂಕಿಯನ್ನು ಬಹುತೇಕ ನಿಯಂತ್ರಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಮಧ್ಯಾಹ್ನದ ವೇಳೆಗೆ, ಮೇಲಿನ ಎರಡು ಮಹಡಿಗಳಲ್ಲಿ ಜ್ವಾಲೆಗಳು ಉರಿಯುತ್ತಿರುವುದು ಕಂಡುಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿತು.
ಆವರಣದ ಸುತ್ತಲೂ ಸ್ಥಳಾವಕಾಶದ ಕೊರತೆಯಿಂದಾಗಿ ಸ್ಕೈ ಲ್ಯಾಡರ್ ಅನ್ನು ಕಟ್ಟಡದ ಹತ್ತಿರ ತರಲು ಸಾಧ್ಯವಾಗದ ಕಾರಣ ಆರಂಭದಲ್ಲಿ ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಪ್ರಯತ್ನಗಳಿಗೆ ಅಡ್ಡಿಯಾಯಿತು ಎಂದು ಅವರು ಹೇಳಿದರು.
ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಧ್ವಂಸಕ ಕೃತ್ಯ ಎಂದ ಬಿಜೆಪಿ
ಇದು ವಿಧ್ವಂಸಕ ಕೃತ್ಯ ಎಂದು ಆರೋಪಿಸಿರುವ ಕೇಂದ್ರ ಸಚಿವ ಸುಕಾಂತ ಮಜುಂದಾರ್, ಸಾಕ್ಷ್ಯ ನಾಶಪಡಿಸುವ ಯತ್ನ ನಡೆದಿರಬಹುದು ಎಂದು ಹೇಳಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ನಾಯಕ ರಾಕೇಶ್ ಸಿಂಗ್ ಕೂಡ, ಅಗ್ನಿ ಅವಘಡದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರ ಸಂಭಾವ್ಯ ಪಾತ್ರ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಾಯಕರ ಆರೋಪಗಳಿಗೆ ತೃಣಮೂಲ ಕಾಂಗ್ರೆಸ್‌ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



