ದೇಶ

ಕಾಂಗ್ರೆಸ್‌ನಿಂದ ದೂರ; ಬಿಜೆಪಿ-ಕಾಂಗ್ರೆಸ್ ವಿರೋಧಿ ಮೂರನೇ ಮೈತ್ರಿಕೂಟದತ್ತ ಡಿಎಂಕೆ ಹೆಜ್ಜೆ

ಈ ಬಗ್ಗೆ ತುರ್ತು ಕ್ರಮಗಳಿಲ್ಲದಿದ್ದರೂ, ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಅಸಮಾಧಾನ ಹೊಂದಿರುವ ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ದೂರ; ಬಿಜೆಪಿ-ಕಾಂಗ್ರೆಸ್ ವಿರೋಧಿ ಮೂರನೇ ಮೈತ್ರಿಕೂಟದತ್ತ ಡಿಎಂಕೆ ಹೆಜ್ಜೆ
ಎಂ ಕೆ ಸ್ಟಾಲಿನ್ ಮತ್ತು ರಾಹುಲ್ ಗಾಂಧಿ(ಸಂಗ್ರಹ ಚಿತ್ರ)
Published On :

ಚೆನ್ನೈ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿರುವ ಎಂ ಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ, ಬಿಜೆಪಿ ಹಾಗೂ ಕಾಂಗ್ರೆಸ್ ಎರಡಕ್ಕೂ ಪರ್ಯಾಯವಾಗುವ ರಾಷ್ಟ್ರೀಯ ಮಟ್ಟದ ಮೂರನೇ ಮೈತ್ರಿಕೂಟವನ್ನು ಸಮಾನ ಮನಸ್ಕ ಪ್ರಾದೇಶಿಕ ಪಕ್ಷಗಳೊಂದಿಗೆ ರಚಿಸಲು ಯೋಜಿಸುತ್ತಿದೆ.

ಈ ಬಗ್ಗೆ ತುರ್ತು ಕ್ರಮಗಳಿಲ್ಲದಿದ್ದರೂ, ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಅಸಮಾಧಾನ ಹೊಂದಿರುವ ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳ ಪ್ರಕಾರ, ಈ ಬಾರಿಯ ತಮಿಳು ನಾಡು ವಿಧಾನಸಭೆ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಈ ಯೋಜನೆ ರೂಪುಗೊಂಡಿತ್ತು.

ಚುನಾವಣಾ ಫಲಿತಾಂಶ ಏನೇ ಆಗಿದ್ದರೂ, ನಂತರ ಕಾಂಗ್ರೆಸ್ ಡಿಎಂಕೆ ಮೈತ್ರಿಯಿಂದ ಹೊರಬರುವ ಸಾಧ್ಯತೆಗಳಿದ್ದವು. ಆದ್ದರಿಂದಲೇ ರಾಷ್ಟ್ರೀಯ ಮಟ್ಟದ ಪರ್ಯಾಯವಿದೆ ಎಂಬುದನ್ನು ತೋರಿಸಲು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು 2026ರ ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದೆವು ಎಂದು ಮೂಲವೊಂದು ತಿಳಿಸಿದೆ.

ಡಿಎಂಕೆಯ ಹಿರಿಯ ನಾಯಕರೊಬ್ಬರು, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್, ಬಿಹಾರದ ರಾಷ್ಟ್ರೀಯ ಜನತಾ ದಳ ಹಾಗೂ ಆಮ್ ಆದ್ಮಿ ಪಕ್ಷಗಳೊಂದಿಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈ ಎಲ್ಲಾ ಪಕ್ಷಗಳಿಗೂ ತಮ್ಮ ತಮ್ಮ ರಾಜ್ಯಗಳಲ್ಲಿ ಕಾಂಗ್ರೆಸ್‌ನೊಂದಿಗೆ ಸಂಬಂಧಗಳು ಹದಗೆಟ್ಟಿವೆ. ಅದೇ ವೇಳೆ ಅವು ಬಿಜೆಪಿ ವಿರೋಧಿ ಪಕ್ಷಗಳೂ ಆಗಿವೆ. ಸದ್ಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನಾವು ಪ್ರತ್ಯೇಕವಾಗಿ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇವೆ. ಎಲ್ಲವೂ ಸುಗಮವಾಗಿ ನಡೆದರೆ ಶೀಘ್ರದಲ್ಲೇ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ರೂಪುಗೊಳ್ಳಬಹುದು ಎಂದು ಹೇಳಿದರು.

ಸೋಮವಾರ ಡಿಎಂಕೆ ಕೇಂದ್ರ ಕಚೇರಿ ಅನ್ನಾ ಅರಿವಾಲಯಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರ ಟಿ ಕೆ ಎಸ್ ಎಲಂಗೋವನ್, ಕಾಂಗ್ರೆಸ್ ಇರುವ ಯಾವುದೇ ಮೈತ್ರಿಕೂಟದಲ್ಲಿ ನಾವು ಭಾಗಿಯಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆಪ್ ಈಗಾಗಲೇ ಹೊರಬಂದಿದೆ. ನಾವು ಈಗ INDIA ಮೈತ್ರಿಯಲ್ಲಿ ಇಲ್ಲ. ಶೀಘ್ರದಲ್ಲೇ ಬಿಜೆಪಿ ವಿರೋಧಿ ಹೊಸ ಮೈತ್ರಿಕೂಟ ರೂಪುಗೊಳ್ಳಲಿದೆ ಎಂದು ಹೇಳಿದರು.

ಇದೇ ವೇಳೆ, ದೆಹಲಿಯಲ್ಲಿ ನಡೆದ INDIA ಮೈತ್ರಿಕೂಟದ ಸಭೆಯಲ್ಲಿ ಮೈತ್ರಿಯ ಭಾಗವಾಗಿರುವ ಥೋಲ್ ತಿರುಮಾವಳವನ್ ನೇತೃತ್ವದ ವಿಸಿಕೆ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (Marxist) ಕಾಂಗ್ರೆಸ್‌ನ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ಧೋರಣೆ ಈ ಮೈತ್ರಿಕೂಟದ ಬೆನ್ನೆಲುಬಾಗಿರುವ ಟಿಎಂಸಿ, ಸಿಪಿಎಂ ಮತ್ತು ಡಿಎಂಕೆ ಪಕ್ಷಗಳನ್ನು ದುರ್ಬಲಗೊಳಿಸಿದೆ. ಇದು ಸೂಕ್ತವಲ್ಲ. ಕಾಂಗ್ರೆಸ್ ತನ್ನ ಧೋರಣೆಯನ್ನು ಮರುಪರಿಶೀಲಿಸಿ, ಏಕತೆಯನ್ನು ಬಲಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.

ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇಂಡಿಯಾ ಮೈತ್ರಿ ಆರಂಭವಾಗಿ ಮೂರು ವರ್ಷಗಳಾಗಿವೆ. ಬಿಜೆಪಿ ವಿರುದ್ಧ ಹೋರಾಡಲು ನಾವು ಒಟ್ಟುಗೂಡಿದ್ದೆವು. ಆದರೆ ಕೇರಳದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ನಮ್ಮನ್ನು ಬಿಜೆಪಿಯೊಂದಿಗೆ ಗುಪ್ತ ಮೈತ್ರಿ ಹೊಂದಿದ್ದೇವೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ನ ನಿಲುವು ಇದೇ ಆಗಿದ್ದರೆ ನಮ್ಮ ಮೈತ್ರಿಯ ಉದ್ದೇಶವೇನು ಎಂದು ಪ್ರಶ್ನಿಸಿದರು.

ಬಿಹಾರದಲ್ಲಿ ಕಾಂಗ್ರೆಸ್ ಮೈತ್ರಿಯಲ್ಲಿದ್ದರೂ, ತೇಜಸ್ವಿ ಯಾದವ್ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಎಲ್‌ಡಿಎಫ್ ಪರ ಪ್ರಚಾರ ನಡೆಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಮಣಿಕ್ಕಮ್ ಠಾಕೋರ್, ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದರಿಂದ ಇತರ ಪಕ್ಷಗಳು ದುರ್ಬಲವಾಗುತ್ತವೆ ಎಂದರ್ಥವಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.