ನಮ್ಮ ದಯೆಯಿಂದ TVK ಸರ್ಕಾರ ಉಳಿದಿದೆ; ಶೀಘ್ರದಲ್ಲೇ ಬೀಳಿಸ್ತೀವಿ: DMK ಅಧ್ಯಕ್ಷ ಸ್ಟಾಲಿನ್!
ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಸೃಷ್ಟಿಸಿದ ರಾಜಕೀಯ ಸಂದರ್ಭಗಳಿಂದಾಗಿ ಆಡಳಿತ ಪಕ್ಷವು ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಟಾಲಿನ್ ಹೇಳಿದರು.

ಚೆನ್ನೈ: ವಿಜಯ್ ನೇತೃತ್ವದ TVK ಸರ್ಕಾರದ ವಿರುದ್ಧ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮ ದಯೆಯಿಂದ TVK ಸರ್ಕಾರ ಉಳಿದಿದ್ದು, ಶೀಘ್ರದಲ್ಲೇ ಬೀಳಿಸ್ತೀವಿ ಅಂತಾ ಪ್ರತಿಜ್ಞೆ ಮಾಡಿದ್ದಾರೆ.
ಅಣ್ಣಾ ಅರಿವಲಯಂನಲ್ಲಿ ಮಾಜಿ AIADMK ಸದಸ್ಯರನ್ನು ಡಿಎಂಕೆ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸ್ಟಾಲಿನ್, ನಮ್ಮ ಕರುಣೆಯಲ್ಲಿರುವ ಸರ್ಕಾರವನ್ನು ಆದಷ್ಟು ಬೇಗ ಕಿತ್ತು ಹಾಕುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದ್ದಾರೆ.
ಮಾಜಿ ಎಐಎಡಿಎಂಕೆ ಸದಸ್ಯರು ರಾಜಕೀಯ ಹುದ್ದೆಯ ನಿರೀಕ್ಷೆಗಳಿಗಿಂತ ಅದರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಪಕ್ಷ ಸೇರಿದ್ದಾರೆ. ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಸೃಷ್ಟಿಸಿದ ರಾಜಕೀಯ ಸಂದರ್ಭಗಳಿಂದಾಗಿ ಆಡಳಿತ ಪಕ್ಷವು ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಟಾಲಿನ್ ಹೇಳಿದರು.
ಡಿಎಂಕೆಗೆ ಸೋಲು-ಗೆಲುವು ಬರುತ್ತೆ. ಹೋಗುತ್ತೆ. ಗೆಲುವಿನಿಂದ ನಾವು ನಿರಾಶೆಗೊಂಡವರಲ್ಲ. ಸೋಲಿನಿಂದ ನಿರಾಶೆಗೊಂಡವರಲ್ಲ.ಈಗ ಗೆಲುವಿನ ಅವಕಾಶ, ಆಡಳಿತದ ಜವಾಬ್ದಾರಿಯನ್ನು ಕಳೆದುಕೊಂಡಿದ್ದರೂ, ನಾವು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ TVK ಸರ್ಕಾರ ನಮ್ಮ ಕರುಣೆಯಿಂದ ನಡೆಯುತ್ತಿದೆ ಎಂಬುದನ್ನು ಮರೆಯಬೇಡಿ ಎಂದರು.
ಸರ್ಕಾರ ರಚಿಸುವ ಉದ್ದೇಶದಿಂದ ಡಿಎಂಕೆ ಚುನಾವಣೆ ಎದುರಿಸಿತು. ಆದರೆ ಫಲಿತಾಂಶದ ನಂತರ ರಾಜಕೀಯ ಚಿತ್ರಣ ಬದಲಾಯಿತು. ನಮ್ಮ ಮೈತ್ರಿಕೂಟದಲ್ಲಿರುವ ಪಕ್ಷಗಳ ಸಹಾಯದಿಂದ ಟಿವಿಕೆ ಸರ್ಕಾರ ಇಂದು ಕಾರ್ಯನಿರ್ವಹಿಸುತ್ತಿದೆ. ಅವರು ಟಿವಿಕೆ ಬೆಂಬಲಿಸಲು ಹೋಗಿ ನನ್ನನ್ನು ಒಂಟಿಯಾಗಿ ಬಿಟ್ಟರು. ಅದು ಅವರ ಆಯ್ಕೆ, ಅವರ ಪ್ರಜಾಪ್ರಭುತ್ವ ಎಂದು ತಾವೇ ಹೇಳಿದ್ದಾಗಿ ತಿಳಿಸಿದರು.
ಚುನಾವಣೆಯ ನಂತರ ರಾಜ್ಯದಲ್ಲಿ ಅಸ್ಥಿರತೆ ಮತ್ತು ಕೇಂದ್ರ ಹಸ್ತಕ್ಷೇಪದ ಸಾಧ್ಯತೆಯನ್ನು ತಪ್ಪಿಸಲು ಬಯಸಿದ್ದೆ. ರಾಷ್ಟ್ರಪತಿ ಆಳ್ವಿಕೆಗೆ ಕಾರಣವಾಗಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಟಿವಿಕೆ ಸರ್ಕಾರ ರಚನೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಎಂದರು.
ನಮ್ಮ ಕರುಣೆಯಲ್ಲಿರುವ ಈ ದಬ್ಬಾಳಿಕೆಯ ಆಡಳಿತವನ್ನು ಕೊನೆಗೊಳಿಸಲು ಕೆಲಸ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡುತ್ತೇವೆ ಎಂದು ಅವರು ಹೇಳಿದರು. 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಟಿವಿಕೆ ನೇತೃತ್ವದ ಸರ್ಕಾರದ ವಿರುದ್ಧ ತಂತ್ರ ಹೆಣೆಯಲು ಡಿಎಂಕೆ ಪ್ರಯತ್ನಿಸುತ್ತಿರುವಂತೆಯೇ ಸ್ಟಾಲಿನ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



