ನೀಟ್ ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಕೆ ವಿವಾದ: RAF ಮದ್ದುಗುಂಡು ದಾಖಲೆ ಸಂರಕ್ಷಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರೊಂದಿಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.

ನವದೆಹಲಿ: ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೆಲೆಟ್ ಗನ್ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಹೌದು.. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಬಳಸಿದ ಮದ್ದುಗುಂಡುಗಳ ದಾಖಲೆಯನ್ನು (Ammunition Log) ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದೇ ವೇಳೆ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆಯ ವಿಚಾರವನ್ನು ಪರಿಶೀಲಿಸಲು ಸಹ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರೊಂದಿಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು.
ಈ ಅರ್ಜಿಯನ್ನು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್, ಜೊತೆಗೆ ಕಾಕ್‌ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ 'ಸಂಸದ್ ಚಲೋ' ಪ್ರತಿಭಟನೆಯಲ್ಲಿ ಪೆಲೆಟ್‌ಗಳಿಂದ ಗಾಯಗೊಂಡಿದ್ದೇವೆ ಎಂದು ಹೇಳಿಕೊಂಡಿರುವ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದರು.
ಪೆಲೆಟ್ ಗನ್ ಬಳಕೆಗೆ ದೇಶವ್ಯಾಪಿ ನಿಷೇಧಕ್ಕೆ ಮನವಿ
ಪ್ರತಿಭಟನೆಗಳನ್ನು ನಿಯಂತ್ರಿಸಲು ಪಂಪ್-ಆಕ್ಷನ್ ಅಥವಾ ಪ್ರಾಜೆಕ್ಟೈಲ್-ಆಕ್ಷನ್ ಗನ್‌ಗಳಿಂದ ಹಾರಿಸುವ ಸಂಪೂರ್ಣ ಅಥವಾ ಭಾಗಶಃ ಲೋಹದ ಪೆಲೆಟ್ ಮದ್ದುಗುಂಡುಗಳ ಬಳಕೆಯನ್ನು ದೇಶಾದ್ಯಂತ ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇಂತಹ ಆಯುಧಗಳ ಬಳಕೆ, ಬಲಪ್ರಯೋಗಕ್ಕೆ ಸಂಬಂಧಿಸಿದ ಸಂವಿಧಾನಾತ್ಮಕ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಸಂಪೂರ್ಣ ನಿಷೇಧದ ಬಗ್ಗೆ ಸುಪ್ರೀಂ ಪ್ರಶ್ನೆ
ವಿಚಾರಣೆ ವೇಳೆ ಪೀಠವು, ಪೆಲೆಟ್ ಗನ್‌ಗಳ ಸಂಪೂರ್ಣ ನಿಷೇಧದ ಬೇಡಿಕೆಯನ್ನು ಪ್ರಶ್ನಿಸಿತು. ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ (BPRD) ಮಾರ್ಗಸೂಚಿಯ ಪ್ರಕಾರ, ಅಸಾಧಾರಣ ಸಂದರ್ಭಗಳಲ್ಲಿ ಪೆಲೆಟ್ ಗನ್ ಬಳಕೆಗೆ ಅವಕಾಶವಿದೆ ಎಂದು ನ್ಯಾಯಪೀಠ ಗಮನಸೆಳೆಯಿತು.
RAF ದಾಖಲೆ ಉಳಿಸಿಕೊಳ್ಳಲು ಸೂಚನೆ
ಅರ್ಜಿದಾರರ ಪರ ಹಿರಿಯ ವಕೀಲೆ ವೃಂದಾ ಗ್ರೋವರ್, ಜುಲೈ 20ರ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆಯನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ, ಆ ದಿನ RAF ಬಳಸಿದ ಮದ್ದುಗುಂಡುಗಳ ದಾಖಲೆಯನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಸೂಚನೆ ನೀಡಿತು.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಆದೇಶ
ಪ್ರತಿಭಟನೆ ವೇಳೆ ಪೆಲೆಟ್ ಗಾಯಗೊಂಡವರಿಗೆ ಸಾಧ್ಯವಾದ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೂ ನಿರ್ದೇಶನ ನೀಡಿದೆ. ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಗಾಯಗೊಂಡವರಿಗೆ ಸೂಕ್ತ ಪರಿಹಾರ ಧನ, ಸಮಗ್ರ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿ ಒದಗಿಸುವಂತೆ ಸಹ ನ್ಯಾಯಾಲಯವನ್ನು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




