'ಪ್ರಧಾನಿ, ಗೃಹ ಸಚಿವರಿಗೆ ಮತ್ತೆ ವಿದ್ಯಾರ್ಥಿಗಳೇ ಪಾಠ ಕಲಿಸುತ್ತಾರೆ'; ರಾಜ್ಯಸಭೆಯಲ್ಲಿ Mallikarjun Kharge ವಾಗ್ದಾಳಿ
ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಷ್ಟು ಅಮಾಯಕ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ, ಎಷ್ಟು ಮಂದಿ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಎಷ್ಟು ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಎದುರಿಸಿದ್ದಾರೆ ಎಂಬುದನ್ನು ಸರ್ಕಾರ ಅರಿಯಬೇಕು.

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ವಿದ್ಯಾರ್ಥಿ ಪ್ರತಿಭಟನೆಗಳ ವಿಚಾರವಾಗಿ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮೌನ ವಹಿಸಿರುವುದನ್ನು ಟೀಕಿಸಿದ ಅವರು, "ಅವರು ಮಾತನಾಡದಿದ್ದರೆ ವಿದ್ಯಾರ್ಥಿಗಳೇ ಮತ್ತೊಮ್ಮೆ ಅವರಿಗೆ ಪಾಠ ಕಲಿಸುತ್ತಾರೆ" ಎಂದು ಎಚ್ಚರಿಕೆ ನೀಡಿದರು.
ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮಾತನಾಡಿದ ಖರ್ಗೆ, "ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಷ್ಟು ಅಮಾಯಕ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದಾರೆ, ಎಷ್ಟು ಮಂದಿ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಎಷ್ಟು ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಎದುರಿಸಿದ್ದಾರೆ ಎಂಬುದನ್ನು ಸರ್ಕಾರ ಅರಿಯಬೇಕು. ಚರ್ಚೆಗೆ ಬಂದಿರುವ ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ತಡೆ) ತಿದ್ದುಪಡಿ ಮಸೂದೆ-2026ಯಲ್ಲಿ ಕೇವಲ ಅಂಕಿಅಂಶಗಳನ್ನು ಮಾತ್ರ ಬದಲಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ" ಎಂದು ಹೇಳಿದರು.
ಅಂತೆಯೇ ಹೆಚ್ಚಿನ ದಂಡ, ಕಠಿಣ ಶಿಕ್ಷೆ, ವಿಶೇಷ ಕಾರ್ಯಪಡೆ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಂತಹ ಕ್ರಮಗಳನ್ನು ಮಸೂದೆಯಲ್ಲಿ ಸೇರಿಸಿದ್ದರೂ, ಅದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಪರೀಕ್ಷೆಗಳನ್ನು ಹೇಗೆ ನಡೆಸುತ್ತೀರಿ, ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಯಾವ ವ್ಯವಸ್ಥೆ ರೂಪಿಸುತ್ತೀರಿ ಎಂಬುದೇ ಮುಖ್ಯ. ಅದೇ ನಿಜವಾದ ಪರಿಹಾರ' ಎಂದು ಅವರು ಹೇಳಿದರು.
2024ರಲ್ಲೇ ಇಂತಹ ಕಠಿಣ ಕಾನೂನು ತರಬೇಕೆಂದು ಕಾಂಗ್ರೆಸ್ ಒತ್ತಾಯಿಸಿತ್ತು. ಆದರೆ ಆಗ ಸರ್ಕಾರ ಅದನ್ನು ಒಪ್ಪಲಿಲ್ಲ ಎಂದು ಆರೋಪಿಸಿದ ಅವರು, "ಎರಡು ವರ್ಷಗಳ ಬಳಿಕ ಮಾಡುತ್ತಿರುವ ಕೆಲಸವನ್ನು ಆಗಲೇ ಏಕೆ ಮಾಡಲಿಲ್ಲ?" ಎಂದು ಪ್ರಶ್ನಿಸಿದರು.
ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ನಡೆದಿತ್ತೆನ್ನಲಾದ ಪೊಲೀಸ್ ಕ್ರಮದ ಕುರಿತು ಮಾತನಾಡಿದ ಖರ್ಗೆ, "ಪ್ರಧಾನಿ ಮತ್ತು ಗೃಹ ಸಚಿವರು ಮೌನವಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಹೊಣೆಗಾರರು. ಅವರು ಮುಚ್ಚಿದ ಬಾಗಿಲಿನ ಹಿಂದೆ ಅಡಗಿಕೊಳ್ಳಲು ಸಾಧ್ಯವಿಲ್ಲ," ಎಂದು ಆರೋಪಿಸಿದರು.
ರಾಜ್ಯಸಭೆಯಲ್ಲಿ ಗದ್ದಲ
ಖರ್ಗೆ ಭಾಷಣದ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಘೋಷಣೆಗಳ ನಡುವೆ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಇದೇ ವೇಳೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಹೇಳಿಕೆಯನ್ನು ವಿರೋಧಿಸಿದ ಪ್ರತಿಪಕ್ಷ ಸದಸ್ಯರು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



