ದೇಶದಲ್ಲಿ ಈಗ 'Gen Z Raj'; ಚುನಾವಣೆಗೆ ಸ್ಪರ್ಧಿಸುವ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಇಳಿಸಬೇಕು: ಸಿಎಂ ರೇವಂತ್ ರೆಡ್ಡಿ!
'ಜೆನ್ ಝಡ್' (Gen Z - ಇಂದಿನ ಯುವ ಪೀಳಿಗೆ)ಗೆ ಕಾನೂನುಗಳನ್ನು ರೂಪಿಸುವ ಅವಕಾಶ ಸಿಗಬೇಕು ಎಂದು ಸಿಎಂ ರೇವಂತ್ ರೆಡ್ಡಿ ಪ್ರತಿಪಾದಿಸಿದರು.

ಹೈದರಾಬಾದ್: ಯುವಜನರಿಗೆ ಸಂಸತ್ತಿನ ಬಾಗಿಲು ತೆರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮನವಿ ಮಾಡಿದ್ದಾರೆ. ಅಲ್ಲದೇ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸಿನ ಮಿತಿಯನ್ನು ಪ್ರಸ್ತುತ ಇರುವ 25 ವರ್ಷಗಳಿಂದ 21 ವರ್ಷಗಳಿಗೆ ಇಳಿಸುವ ಪ್ರಸ್ತಾವನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲಿಸಲು ಸೋಮವಾರ ದೆಹಲಿಗೆ ತೆರಳಲಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರೇವಂತ್ ರೆಡ್ಡಿ, 'ಜೆನ್ ಝಡ್' (Gen Z - ಇಂದಿನ ಯುವ ಪೀಳಿಗೆ)ಗೆ ಕಾನೂನುಗಳನ್ನು ರೂಪಿಸುವ ಅವಕಾಶ ಸಿಗಬೇಕು ಎಂದು ಪ್ರತಿಪಾದಿಸಿದರು. ಈ ಪ್ರಸ್ತಾವನೆಯನ್ನು ಮಂಡಿಸಲು ತಾವು ರಾಹುಲ್ ಗಾಂಧಿ ಮತ್ತು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುವುದಾಗಿ ಅವರು ತಿಳಿಸಿದರು.
ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಯುವಜನರು ನಡೆಸಿದ ಪ್ರತಿಭಟನೆಯ ನಂತರ ಈ ಪ್ರಸ್ತಾವನೆ ಬಂದಿದೆ. 'ಇಂಡಿಯಾ' (INDIA) ಮೈತ್ರಿಕೂಟದ ನಾಯಕರ ಮುಂದೆ ನನ್ನ ಪ್ರಸ್ತಾವನೆಯನ್ನು ಮಂಡಿಸುತ್ತೇನೆ. ಅವರು ಖಾಸಗಿ ಸದಸ್ಯರ ಮಸೂದೆಯನ್ನು (Private Member's Bill) ಮಂಡಿಸುತ್ತಾರೆಯೇ ಎಂಬುದನ್ನು ನೋಡೋಣ ಎಂದು ರೇವಂತ್ ರೆಡ್ಡಿ ಹೇಳಿದರು.
ಆಗಸ್ಟ್‌ನ ಮೊದಲ ವಾರದಲ್ಲಿ ನಡೆಯಲಿರುವ ರಾಜ್ಯ ಶಾಸಕಾಂಗದ ಜಂಟಿ ಅಧಿವೇಶನದಲ್ಲಿ ಈ ಕುರಿತು ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಪುನರುಚ್ಚರಿಸಿದರು. ಅಲ್ಲದೆ, ಆಗಸ್ಟ್ ತಿಂಗಳು ದೇಶಕ್ಕೆ ಒಂದು 'ಅದ್ಭುತ ತಿಂಗಳು' ಆಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯಸ್ಸಿನ ಮಿತಿಯನ್ನು ಕಡಿಮೆ ಮಾಡುವ ತಮ್ಮ ಪ್ರಸ್ತಾವನೆಯನ್ನು ಕ್ಷೇತ್ರ ಮರುವಿಂಗಡಣಾ ಮಸೂದೆ (Delimitation Bill), ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಳ ಮತ್ತು ಮಹಿಳಾ ಮೀಸಲಾತಿ ಮಸೂದೆಯೊಂದಿಗೆ ಪರಿಗಣನೆಗೆ ತೆಗೆದುಕೊಳ್ಳುವಂತೆ ರೇವಂತ್ ರೆಡ್ಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. "ಈ ನಾಲ್ಕು ವಿಷಯಗಳ ಬಗ್ಗೆಯೂ ಸಂಸತ್ತಿನಲ್ಲಿ ಒಟ್ಟಿಗೇ ಚರ್ಚಿಸೋಣ," ಎಂದು ರೇವಂತ್ ರೆಡ್ಡಿ ಪ್ರಧಾನಿಯವರಿಗೆ ಸಲಹೆ ನೀಡಿದರು.
ದೇಶದಲ್ಲಿ ಪ್ರಸ್ತುತ "Gen G Raj" ದೇಶದಲ್ಲಿ ಪ್ರಸ್ತುತ "Gen G Raj"(ಯುವಜನತೆಯ ಯುಗ) ಪ್ರಭಾವವಿದೆ ಎಂದು ಹೇಳಿದ ಮುಖ್ಯಮಂತ್ರಿಗಳು, ದೇಶದ ಭವಿಷ್ಯವಾಗಿರುವ ಯುವಜನತೆಯನ್ನು ರಾಜಕೀಯ ಮುಖ್ಯವಾಹಿನಿಗೆ ತರುವ ಅಗತ್ಯವನ್ನು ಒತ್ತಿ ಹೇಳಿದರು. ರಾಜೀವ್ ಗಾಂಧಿ ಅವರ ಅಧಿಕಾರಾವಧಿಯಲ್ಲಿ ಮತದಾನದ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಲಾಗಿದ್ದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
"ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಮಾಡಿದರೆ, ಅವರ ಹೆಸರು ಮತ್ತು ಕೆಲಸಗಳು ಚಿರಸ್ಮರಣೀಯವಾಗುತ್ತವೆ. ಆದರೆ ಪ್ರಧಾನಿ ಮೋದಿ ಅವರು ಯುವಜನತೆಯ ಧ್ವನಿಯನ್ನು ಆಲಿಸುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಆರೋಪಿಸಿದರು. "ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮಕ್ಕಾಗಿ ರೇಡಿಯೊವನ್ನು ಬಳಸುತ್ತಾರೆ. ರೇಡಿಯೊದಂತೆಯೇ, ಮೋದಿ ಮಾತನಾಡುತ್ತಾರೆ ಆದರೆ ಇತರರ ಮಾತನ್ನು ಕೇಳುವುದಿಲ್ಲ," ಎಂದು ರೇವಂತ್ ರೆಡ್ಡಿ ವ್ಯಂಗ್ಯವಾಡಿದರು.
'ಜೈ ಜವಾನ್, ಜೈ ಕಿಸಾನ್ ಮತ್ತು ಜೈ ಯುವ' ಘೋಷವಾಕ್ಯ: ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸಿನ ಮಿತಿಯನ್ನು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಅಗತ್ಯವಿದ್ದರೆ ಪ್ರಧಾನಿಯವರು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ವಹಿಸಬಹುದು ಮತ್ತು ಸಂಬಂಧಪಟ್ಟ ಪಾಲುದಾರರೊಂದಿಗೆ ಚರ್ಚೆ ನಡೆಸಬಹುದು ಎಂದು ಅವರು ಸಲಹೆ ನೀಡಿದರು. "ಈಗಿನ ಘೋಷವಾಕ್ಯ 'ಜೈ ಜವಾನ್, ಜೈ ಕಿಸಾನ್ ಮತ್ತು ಜೈ ಯುವ' ಎಂಬುದಾಗಿದೆ," ಎಂದು ರೇವಂತ್ ರೆಡ್ಡಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




