'ಸಚಿವರ ರಾಜೀನಾಮೆ ಸಾಕಾಗಲ್ಲ! ಇನ್ನೂ ಎರಡು ಬೇಡಿಕೆಗಳಿವೆ': ಕೇಂದ್ರ ಸರ್ಕಾರಕ್ಕೆ CJP ಮುಖ್ಯಸ್ಥ Abhijeet Dipke
ಶಾಂತಿಯುತ ಸಾರ್ವಜನಿಕ ಒತ್ತಡದ ಮೂಲಕ ಸರ್ಕಾರವನ್ನು ಹೊಣೆಗಾರಿಕೆಗೆ ಒಳಪಡಿಸಬಹುದು ಎಂಬುದನ್ನು ಈ ಚಳವಳಿ ಸಾಬೀತುಪಡಿಸಿದೆ ಎಂದು ಅವರು ಹೇಳಿದರು.

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕವೂ ತಮ್ಮ ಹೋರಾಟ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಧ್ಯಕ್ಷ ಅಭಿಜಿತ್ ದೀಪ್ಕೆ, ಸರ್ಕಾರದ ಮುಂದೆ ಇನ್ನೆರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಹೌದು.. ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಬೆನ್ನಲ್ಲೇ ದೆಹಲಿಯ ಜಂತರ್ ಮಂತರ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು "ವಿದ್ಯಾರ್ಥಿ ಶಕ್ತಿಯ ಗೆಲುವು" ಎಂದು ಬಣ್ಣಿಸಿದರು.
ಶಾಂತಿಯುತ ಸಾರ್ವಜನಿಕ ಒತ್ತಡದ ಮೂಲಕ ಸರ್ಕಾರವನ್ನು ಹೊಣೆಗಾರಿಕೆಗೆ ಒಳಪಡಿಸಬಹುದು ಎಂಬುದನ್ನು ಈ ಚಳವಳಿ ಸಾಬೀತುಪಡಿಸಿದೆ ಎಂದು ಅವರು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಅದರ ಸಂಪೂರ್ಣ ಶ್ರೇಯಸ್ಸನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ತಮ್ಮ ಪಕ್ಷದ ಹೋರಾಟಕ್ಕೆ ನೀಡಿದ್ದಾರೆ.
ತಲೆಬಾಗದಿದ್ದರೆ ಯಾರಿಂದ ಬೇಕಾದರೂ ರಾಜೀನಾಮೆ ಪಡೆಯಬಹುದು
"ನಾವು ಸಾಧಿಸಿದ್ದೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯೇ ನೀವು ಭಯಪಡದಿದ್ದರೆ, ಈ ಸರ್ಕಾರದ ಮುಂದೆ ತಲೆಬಾಗದಿದ್ದರೆ ಯಾರಿಂದ ಬೇಕಾದರೂ ರಾಜೀನಾಮೆ ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಜಿತ್ ದೀಪ್ಕೆ ಹೇಳಿದರು.
ಇನ್ನೂ 2 ಬೇಡಿಕೆಗಳಿವೆ, ಸರ್ಕಾರಕ್ಕೆ ಹೊಸ ಗಡವು
ಇದೇ ವೇಳೆ ನಮಗೆ ಇನ್ನೂ ಎರಡು ಬೇಡಿಕೆಗಳಿವೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸ್ಫೋಟಿಸಿರುವ ದೀಪ್ಕೆ ಈ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಗಡುವು ಕೂಡ ನೀಡಿದ್ದಾರೆ.
'ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾದರೂ, ಅದು ಮಾತ್ರ ಸಾಕಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
"ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ಸಿಗಬಾರದೇ? ಖಂಡಿತ ಸಿಗಬೇಕು. ಅಂತಹ ಪ್ರತಿಯೊಂದು ಕುಟುಂಬಕ್ಕೂ ₹1 ಕೋಟಿ ಪರಿಹಾರ ನೀಡಬೇಕು. ಜೊತೆಗೆ ಜುಲೈ 20ರಂದು ವಿದ್ಯಾರ್ಥಿಗಳ ಮೇಲೆ ಗೂಂಡಾಗಳಂತೆ ವರ್ತಿಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹಿಸಿದರು.
ಅಂತೆಯೇ "ಜುಲೈ 20ರ ನಂತರ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು" ಎಂದು ಒತ್ತಾಯಿಸಿದರು. ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ತಮ್ಮ ಮೊದಲ ಪ್ರಮುಖ ಬೇಡಿಕೆ ಈಡೇರಿದ್ದರೂ, ಉಳಿದ ಎರಡು ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂಬ ಸಂದೇಶವನ್ನು ಸಿಜೆಪಿ ನಾಯಕತ್ವ ನೀಡಿದೆ.
ದೇಶಾದ್ಯಂತ ವಿಸ್ತರಿಸಿದ್ದ ಪ್ರತಿಭಟನೆ
ಅಂದಹಾಗೆ "ಕಾಕ್ರೋಚ್‌ಗಳು" ಎಂದು ಜನಪ್ರಿಯವಾಗಿರುವ ಪ್ರತಿಭಟನಾಕಾರರ ಶಾಂತಿಯುತ ಚಳವಳಿ ಒಂದು ತಿಂಗಳಿಗೂ ಹೆಚ್ಚು ಹಿಂದೆ ಶಿಕ್ಷಣ ಸುಧಾರಣೆಯ ಬೇಡಿಕೆಯೊಂದಿಗೆ ಆರಂಭವಾಗಿತ್ತು. ಬಳಿಕ ಅದು ನಿರುದ್ಯೋಗ, ಸರ್ಕಾರದ ಉತ್ತರದಾಯಿತ್ವ ಮತ್ತು ಆರ್ಥಿಕ ಅವಕಾಶಗಳ ಕುರಿತು ವ್ಯಾಪಕ ಪ್ರತಿಭಟನೆಯಾಗಿ ವಿಸ್ತರಿಸಿತು.
ಆದರೆ ಜುಲೈ 20ರಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಸಂಸತ್ ಭವನದತ್ತ ಮೆರವಣಿಗೆ ನಡೆಸುತ್ತಿದ್ದ ಸಾವಿರಾರು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮುಂದಾದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ವೇಳೆ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



