ದೇಶ

'ಸಚಿವರ ನಾಯಿಗಳಿಗೂ ಇದಕ್ಕಿಂತ ಉತ್ತಮ ಸೌಲಭ್ಯಗಳು ಸಿಗುತ್ತವೆ': ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು CJP ಸಂಸ್ಥಾಪಕ ದೀಪ್ಕೆ

ಇದು ವಿದ್ಯಾರ್ಥಿಗಳ ಬದುಕಿಗೆ ಸಂಬಂಧಿಸಿದ ವಿಷಯ. ರಾಜಕೀಯ ನಾಯಕರು ವಿದ್ಯಾರ್ಥಿಗಳಿಗಾಗಿ ಏನನ್ನೂ ಮಾಡದಿರುವಾಗ, ಜನರು ಅವರಿಗೆ ಏಕೆ ಮತ ಹಾಕಬೇಕು? ಕೇವಲ ಹೆಲಿಕಾಪ್ಟರ್‌ಗಳಲ್ಲಿ ಓಡಾಡಲಿಕ್ಕಾಗಿಯೇ ಜನರು ಅವರಿಗೆ ಮತ ಹಾಕಬೇಕೇ? ಎಂದರು.

'ಸಚಿವರ ನಾಯಿಗಳಿಗೂ ಇದಕ್ಕಿಂತ ಉತ್ತಮ ಸೌಲಭ್ಯಗಳು ಸಿಗುತ್ತವೆ': ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು CJP ಸಂಸ್ಥಾಪಕ ದೀಪ್ಕೆ
ಅಭಿಜಿತ್ ದೀಪ್ಕೆ
Published On :

ಲಾತೂರ್: ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ ಮತ್ತು ವಿದ್ಯಾರ್ಥಿಗಳಿಗಿಂತ 'ಸಚಿವರ ನಾಯಿಗಳಿಗೇ ಉತ್ತಮ ಸೌಲಭ್ಯಗಳು ಸಿಗುತ್ತವೆ' ಎಂದು ಆರೋಪಿಸಿರುವ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಚಾಲಕ ಅಭಿಜಿತ್ ದೀಪ್ಕೆ, ಮಹಾರಾಷ್ಟ್ರದ ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಅವರು ರಾಜೀನಾಮೆ ನೀಡಬೇಕು ಎಂದು ಗುರುವಾರ ಆಗ್ರಹಿಸಿದ್ದಾರೆ.

ಕಳೆದ ವಾರ 'ಸ್ಕೂಲ್ ಥಿಕ್ ಕರೋ' (ಸರ್ಕಾರಿ ಶಾಲೆಗಳನ್ನು ಸುಧಾರಿಸಿ) ಅಭಿಯಾನವನ್ನು ಆರಂಭಿಸಿದ ದೀಪ್ಕೆ, ಲಾತೂರ್‌ನ ಔಸಾ ತಾಲೂಕಿನ ಉಜನಿ ಗ್ರಾಮದಲ್ಲಿರುವ ಜಿಲ್ಲಾ ಪರಿಷತ್ ಶಾಲೆಗೆ ಭೇಟಿ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಏಕೆಂದರೆ, ಅನೇಕ ಶಾಲೆಗಳಲ್ಲಿ ಇನ್ನೂ ತರಗತಿಗಾಗಿ ಸೂಕ್ತ ಕೊಠಡಿಗಳು, ಬೆಂಚುಗಳು, ಶೌಚಾಲಯಗಳು ಮತ್ತು ಸುರಕ್ಷಿತ ಸಂಪರ್ಕ ರಸ್ತೆಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು 'ಪ್ರಾಣಿಗಳಿಗಿಂತಲೂ ಕಳಪೆಯಾಗಿ' ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

'ಇದು ವಿದ್ಯಾರ್ಥಿಗಳ ಬದುಕಿಗೆ ಸಂಬಂಧಿಸಿದ ವಿಷಯ. ರಾಜಕೀಯ ನಾಯಕರು ವಿದ್ಯಾರ್ಥಿಗಳಿಗಾಗಿ ಏನನ್ನೂ ಮಾಡದಿರುವಾಗ, ಜನರು ಅವರಿಗೆ ಏಕೆ ಮತ ಹಾಕಬೇಕು? ಕೇವಲ ಹೆಲಿಕಾಪ್ಟರ್‌ಗಳಲ್ಲಿ ಓಡಾಡಲಿಕ್ಕಾಗಿಯೇ ಜನರು ಅವರಿಗೆ ಮತ ಹಾಕಬೇಕೇ? ತಮ್ಮ ಮಕ್ಕಳು ಯಾವ ಪರಿಸ್ಥಿತಿಯಲ್ಲಿ ಓದುತ್ತಿದ್ದಾರೆ ಎಂಬುದನ್ನು ಜನರು ಗಮನಿಸಬೇಕು. ಈ ಸಚಿವರ ನಾಯಿಗಳಿಗೂ ಇದಕ್ಕಿಂತ ಉತ್ತಮ ಸೌಲಭ್ಯಗಳು ಸಿಗುತ್ತವೆ' ಎಂದು ಅವರು ಹೇಳಿದರು.

'ತಮ್ಮ ಗ್ರಾಮಕ್ಕೆ ಬರುವ ನಾಯಕರು ಯಾವುದೇ ಪಕ್ಷದವರಾಗಿದ್ದರೂ, ಅವರೆಲ್ಲರೂ ಶಿಕ್ಷಣಕ್ಕಾಗಿ ಕೆಲಸ ಮಾಡಬೇಕೆಂದು ಜನರು ಆಗ್ರಹಿಸಬೇಕು. ಶಿಕ್ಷಣಕ್ಕಾಗಿ ಕೆಲಸ ಮಾಡುವವರೆಗೂ ಮತ ಕೇಳಲು ನಮ್ಮ ಮನೆಬಾಗಿಲಿಗೆ ಬರಬೇಡಿ ಎಂದು ಅವರಿಗೆ ಹೇಳಬೇಕು. ರಾಜಕೀಯಕ್ಕಾಗಿ ನಾವು ಜಾತಿ ಮತ್ತು ಸಮುದಾಯದ ಧ್ವಜಗಳನ್ನು ಹಿಡಿದುಕೊಂಡು ಮನೆಯಿಂದ ಹೊರಬರುತ್ತೇವೆ; ಅದೇ ರೀತಿ, ನಮ್ಮ ಮಕ್ಕಳ ಶಾಲೆಗಳಿಗಾಗಿಯೂ ನಾವು ಹೊರಬರಬೇಕು' ಎಂದರು.

'ಧರ್ಮವು ಅಪಾಯದಲ್ಲಿದೆ ಎಂದು ಇವರು ಪದೇ ಪದೆ ಹೇಳುತ್ತಿರುತ್ತಾರೆ. ಇಷ್ಟು ವರ್ಷಗಳಲ್ಲಿ ಅಂತ್ಯವಾಗದ ಧರ್ಮವು ನಿಮ್ಮ ಅಧಿಕಾರಾವಧಿಯಲ್ಲಿ ಕೊನೆಗೊಳ್ಳುತ್ತದೆಯೇ? ಧರ್ಮವೇನೂ ಎಲ್ಲಿಗೂ ಹೋಗುವುದಿಲ್ಲ, ಆದರೆ ಮೂಲಸೌಕರ್ಯಗಳ ಕೊರತೆಯು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಅಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಚಿವರು ಮತ್ತು ಶಾಸಕರು ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು' ಎಂದು ಆಗ್ರಹಿಸಿದರು.

'ಶಾಲೆಗಳ ಸ್ಥಿತಿಗತಿಯನ್ನು ನೋಡಿದರೆ, ಶಿಕ್ಷಣ ಸಚಿವರು ಆ ಹುದ್ದೆಯಲ್ಲಿ ಮುಂದುವರಿಯಬಾರದು ಎಂದೇ ನನಗೆ ಅನ್ನಿಸುತ್ತದೆ. ಸರ್ಕಾರಿ ಶಾಲೆಗಳನ್ನು ಸುಧಾರಿಸುವ ತುರ್ತು ಅಗತ್ಯವನ್ನು ಸರ್ಕಾರವು ಅರ್ಥಮಾಡಿಕೊಳ್ಳಬೇಕೆಂದರೆ, ಸಚಿವರು ಮತ್ತು ಜನಪ್ರತಿನಿಧಿಗಳು ತಮ್ಮ ಸ್ವಂತ ಮಕ್ಕಳನ್ನು ಈ ಶಾಲೆಗಳಲ್ಲಿಯೇ ಓದಲು ಕಳುಹಿಸಬೇಕು. ಹಲವು ವರ್ಷಗಳಿಂದ ಅಧಿಕಾರದಲ್ಲಿದ್ದರೂ, ಆಡಳಿತಾರೂಢ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವಲ್ಲಿ ವಿಫಲವಾಗಿದೆ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.