ದೇಶ

ಬಳ್ಳಾರಿ-ಗುಂತಕಲ್ ರೈಲು ಮಾರ್ಗದ 3-4ನೇ ಹಳಿ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ; Video

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಅನುಗುಣವಾಗಿ ರೂಪಿಸಲಾದ ಈ ಯೋಜನೆಯು ಸಮಗ್ರ ಯೋಜನೆ ಹಾಗೂ ವಿವಿಧ ಹಿತಾಸಕ್ತಿದಾರರ ಸಮಾಲೋಚನೆಯ ಮೂಲಕ ಬಹು-ಮಾದರಿ ಸಂಪರ್ಕ (ಮಲ್ಟಿ-ಮೋಡಲ್ ಕನೆಕ್ಟಿವಿಟಿ) ಮತ್ತು ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ಬಳ್ಳಾರಿ-ಗುಂತಕಲ್ ರೈಲು ಮಾರ್ಗದ 3-4ನೇ ಹಳಿ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ; Video
ಅಶ್ವಿನ್ ವೈಷ್ಣವ್
Published On :

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ (CCEA) ಕರ್ನಾಟಕ ಮತ್ತು ಆಂಧ್ರಪ್ರದೇಶ ವ್ಯಾಪ್ತಿಯ ಬಳ್ಳಾರಿ–ಗುಂತಕಲ್ ರೈಲು ಮಾರ್ಗದಲ್ಲಿ ಮೂರನೇ ಮತ್ತು ನಾಲ್ಕನೇ ಹಳಿ ನಿರ್ಮಾಣಕ್ಕೆ ಸುಮಾರು 1,264 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದೆ.

ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಅನುಗುಣವಾಗಿ ರೂಪಿಸಲಾದ ಈ ಯೋಜನೆಯು ಸಮಗ್ರ ಯೋಜನೆ ಹಾಗೂ ವಿವಿಧ ಹಿತಾಸಕ್ತಿದಾರರ ಸಮಾಲೋಚನೆಯ ಮೂಲಕ ಬಹು-ಮಾದರಿ ಸಂಪರ್ಕ (ಮಲ್ಟಿ-ಮೋಡಲ್ ಕನೆಕ್ಟಿವಿಟಿ) ಮತ್ತು ಸರಕು ಸಾಗಣೆ ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಜನರು, ಸರಕು ಮತ್ತು ಸೇವೆಗಳ ಸಂಚಾರಕ್ಕೆ ನಿರಂತರ ಹಾಗೂ ಸುಗಮ ಸಂಪರ್ಕ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂರು ಜಿಲ್ಲೆಗಳನ್ನು ಒಳಗೊಂಡಿರುವ ಈ ಯೋಜನೆಯಡಿ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲಕ್ಕೆ ಸುಮಾರು 46 ಕಿಲೋಮೀಟರ್ ಹೆಚ್ಚುವರಿ ರೈಲು ಹಳಿ ಸೇರ್ಪಡೆಯಾಗಲಿದೆ.

ಈ ಬಹು-ಹಳಿ (Multi tracking) ಯೋಜನೆಯಿಂದ ಸುಮಾರು 99 ಗ್ರಾಮಗಳಿಗೆ, ಒಟ್ಟಾರೆ ಸುಮಾರು 7 ಲಕ್ಷ ಜನಸಂಖ್ಯೆಗೆ ಉತ್ತಮ ರೈಲು ಸಂಪರ್ಕ ದೊರೆಯಲಿದೆ. ಹೆಚ್ಚುವರಿ ಹಳಿ ನಿರ್ಮಾಣದಿಂದ ಬಳ್ಳಾರಿ ಕೋಟೆ ಮತ್ತು ಕುಮಾರಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವೂ ಮತ್ತಷ್ಟು ಸುಧಾರಿಸಲಿದೆ.

ಈ ಮಾರ್ಗವು ಕಬ್ಬಿಣದ ಅದಿರು, ಡೋಲಮೈಟ್, ಸುಣ್ಣದ ಕಲ್ಲು, ಕಬ್ಬಿಣ ಮತ್ತು ಉಕ್ಕು, ಕಲ್ಲಿದ್ದಲು, ರಸಗೊಬ್ಬರ ಹಾಗೂ ಆಹಾರ ಧಾನ್ಯಗಳು ಸೇರಿದಂತೆ ವಿವಿಧ ಸರಕುಗಳ ಸಾಗಣೆಗೆ ಅತ್ಯಂತ ಪ್ರಮುಖವಾಗಿದೆ ಎಂದು ಸಚಿವ ಸಂಪುಟ ಸಮಿತಿ ತಿಳಿಸಿದೆ.

ಈ ಯೋಜನೆಯಿಂದ ವರ್ಷಕ್ಕೆ ಹೆಚ್ಚುವರಿಯಾಗಿ 16.22 ಮಿಲಿಯನ್ ಟನ್ ಸರಕು ಸಾಗಣೆ ಸಾಮರ್ಥ್ಯ ಹೆಚ್ಚುವ ನಿರೀಕ್ಷೆಯಿದೆ.

ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವ್ಯವಸ್ಥೆಯಾದ ಭಾರತೀಯ ರೈಲ್ವೆ, ಈ ಯೋಜನೆಯ ಮೂಲಕ ಹವಾಮಾನ ಗುರಿ ಸಾಧನೆಗೂ ನೆರವಾಗಲಿದೆ. ಇದರಿಂದ 1.32 ಕೋಟಿ ಲೀಟರ್ ತೈಲ ಆಮದು ಉಳಿತಾಯವಾಗಲಿದ್ದು, 6.67 ಕೋಟಿ ಕಿಲೋಗ್ರಾಂ ಕಾರ್ಬನ್ ಡೈಆಕ್ಸೈಡ್ (CO₂) ಹೊರಸೂಸುವಿಕೆ ಕಡಿಮೆಯಾಗಲಿದೆ. ಇದು ಸುಮಾರು 0.27 ಕೋಟಿ (27 ಲಕ್ಷ) ಮರಗಳನ್ನು ನೆಟ್ಟ ಪರಿಣಾಮಕ್ಕೆ ಸಮಾನ ಎಂದು ಅಂದಾಜಿಸಲಾಗಿದೆ.

ಹೆಚ್ಚುವರಿ ರೈಲು ಹಳಿ ನಿರ್ಮಾಣದಿಂದ ಕಾರ್ಯಾಚರಣೆಯ ದಕ್ಷತೆ, ಸೇವೆಯ ವಿಶ್ವಾಸಾರ್ಹತೆ ಹಾಗೂ ಸಂಚಾರ ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಲಿದ್ದು, ರೈಲ್ವೆ ಕಾರ್ಯಾಚರಣೆ ಸುಗಮಗೊಳ್ಳುವ ಜೊತೆಗೆ ಮಾರ್ಗಗಳ ಮೇಲಿನ ದಟ್ಟಣೆಯೂ ಕಡಿಮೆಯಾಗಲಿದೆ.

ಈ ಯೋಜನೆಯು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ಹಾಗೂ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಮೂಲಕ ಜನರನ್ನು ಆತ್ಮನಿರ್ಭರರನ್ನಾಗಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ನವ ಭಾರತ’ ಪರಿಕಲ್ಪನೆಗೆ ಬೆಂಬಲ ನೀಡುತ್ತದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಆಂಧ್ರ ಸಚಿವ ಸಂಪುಟವು ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮೊದಲನೆಯದಾಗಿ, ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ಆರ್ಥಿಕ ಕಾರಿಡಾರ್‌ನಲ್ಲಿರುವ ಬಳ್ಳಾರಿ–ಗುಂತಕಲ್ ರೈಲು ಮಾರ್ಗದಲ್ಲಿ ಮೂರನೇ ಮತ್ತು ನಾಲ್ಕನೇ ಹಳಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

1,264 ಕೋಟಿ ರೂಪಾಯಿ ಹೂಡಿಕೆಯಲ್ಲಿ ಈ ಯೋಜನೆ ಜಾರಿಯಾಗಲಿದೆ. ಹೊಸಪೇಟೆ–ಹುಬ್ಬಳ್ಳಿ ರೈಲು ಮಾರ್ಗದ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಎರಡನೆಯದಾಗಿ, ದೇಶದಲ್ಲಿ ರಾಸಾಯನಿಕ ಕ್ಷೇತ್ರವನ್ನು ಹೊಸ ರೀತಿಯಲ್ಲಿ ಅಭಿವೃದ್ಧಿಪಡಿಸಲು ಹೊಸ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.