'ನೀಟ್ ಪರೀಕ್ಷಾ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳ ಆತಂಕ ನಿಜವಾದದ್ದು; ಲಾಠಿ ಚಾರ್ಜ್ ನೋವು ತಂದಿದೆ': Murli Manohar Joshi
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಕ್ರಮವನ್ನು "ನಿರ್ದಯ" ಎಂದ ಅವರು, ಇಂತಹ ಬಲಪ್ರಯೋಗವು 'ವಿಕಸಿತ ಭಾರತ' ನಿರ್ಮಾಣದ ರಾಷ್ಟ್ರೀಯ ಗುರಿಯಿಂದ ಸಮಾಜದ ದೊಡ್ಡ ವರ್ಗವನ್ನೇ ದೂರ ಮಾಡುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಪರವಾಗಿ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಧ್ವನಿಯೆತ್ತಿದ್ದು, ಪರೀಕ್ಷಾ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳ ಆತಂಕ ಮತ್ತು ಕಳವಳಗಳು "ಸಮಂಜಸ ಹಾಗೂ ನೈಜವಾದವು" ಎಂದು ಹೇಳಿದ್ದಾರೆ.
ಸೋಮವಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಕ್ರಮವನ್ನು "ನಿರ್ದಯ" ಎಂದು ಟೀಕಿಸಿದ ಅವರು, ಇಂತಹ ಬಲಪ್ರಯೋಗವು 'ವಿಕಸಿತ ಭಾರತ' ನಿರ್ಮಾಣದ ರಾಷ್ಟ್ರೀಯ ಗುರಿಯಿಂದ ಸಮಾಜದ ದೊಡ್ಡ ವರ್ಗವನ್ನೇ ದೂರ ಮಾಡುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಮುರಳಿ ಮನೋಹರ್ ಜೋಶಿ, "ದೇಶದ ವಿವಿಧ ಭಾಗಗಳಿಂದ ಬಂದಿರುವ ಯುವ ವಿದ್ಯಾರ್ಥಿಗಳು ಹಲವು ದಿನಗಳಿಂದ ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡುವುದು ಅತ್ಯಂತ ನೋವಿನ ಸಂಗತಿ.
ಪರೀಕ್ಷಾ ವ್ಯವಸ್ಥೆಯ ಕುರಿತು ಅವರ ಆತಂಕ ಮತ್ತು ಕಳವಳಗಳು ನಿಜವಾದವು. ಈ ಸಮಸ್ಯೆಯನ್ನು ಸಹಾನುಭೂತಿ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಮನೋಭಾವದಿಂದಲೇ ನಿಭಾಯಿಸಬೇಕು" ಎಂದು ಹೇಳಿದ್ದಾರೆ.
'ಯುವತಿಯರ ಮೇಲಿನ ದುರ್ವರ್ತನೆ ನೋವು ತಂದಿದೆ'
"ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವತಿಯರೊಂದಿಗೆ ಸಹ ಕ್ರೂರವಾಗಿ ವರ್ತಿಸಿರುವುದು ಅತ್ಯಂತ ದುಃಖಕರ ಸಂಗತಿ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಂತೆಯೇ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ನಡೆಸುವುದು ದೇಶದ ದೊಡ್ಡ ವರ್ಗದ ಜನರನ್ನು 'ವಿಕಸಿತ ಭಾರತ' ಗುರಿಯಿಂದ ದೂರ ಮಾಡಬಹುದು ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
"ಈ ವಿಚಾರವನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಪರಿಗಣಿಸಿ ಬಲಪ್ರಯೋಗದ ಮೂಲಕ ಪರಿಹರಿಸಲು ಪ್ರಯತ್ನಿಸಬಾರದು ಎಂಬುದು ನನ್ನ ಪ್ರಾಮಾಣಿಕ ಆಶಯ" ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ಹೇಳಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿರುವ ನಡುವೆ, ಆಡಳಿತ ಪಕ್ಷದ ಹಿರಿಯ ನಾಯಕರೊಬ್ಬರು ವಿದ್ಯಾರ್ಥಿಗಳ ಆತಂಕವನ್ನು ಸಮರ್ಥಿಸಿ ಹಾಗೂ ಪೊಲೀಸ್ ಕ್ರಮವನ್ನು ಟೀಕಿಸಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



