LPU ಕ್ಯಾಂಪಸ್‌ನಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ವಾಹನಗಳಿಗೆ ಬೆಂಕಿ, ಪೊಲೀಸರಿಗೆ ಗಾಯ, ತನಿಖೆಗೆ SIT ರಚನೆ!
LPU ಕ್ಯಾಂಪಸ್ ಹೊರಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಜಲಂಧರ್: ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU)ಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಭಾನುವಾರ ಮತ್ತೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಪ್ರಕರಣದ ತನಿಖೆಗಾಗಿ ಸರ್ಕಾರ ಎಸ್ ಐಟ ರಚನೆ ಮಾಡಿದೆ.
ಹೌದು.. LPU ಕ್ಯಾಂಪಸ್ ಹೊರಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ವಿಶೇಷ ತನಿಖಾ ತಂಡ (SIT) ರಚಿಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.
ಪ್ರತಿಭಟನೆಗೆ ಕಾರಣವೇನು?
ಶನಿವಾರ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪಗಳು ವಿದ್ಯಾರ್ಥಿಗಳ ನಡುವೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಪ್ರತಿಭಟನೆ ಆರಂಭವಾಗಿತ್ತು.
ಆರಂಭಿಕ ವರದಿಗಳ ಪ್ರಕಾರ, ಸುಮಾರು 2,000 ವಿದ್ಯಾರ್ಥಿಗಳು ಬಾಲಕಿಯರ ಹಾಸ್ಟೆಲ್ ಸಮೀಪ ಜಮಾಯಿಸಿದ್ದರು. ನಂತರ ವಿದ್ಯಾರ್ಥಿಗಳು ಕ್ಯಾಂಪಸ್‌ನ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ ಜಲಂಧರ್-ಫಗ್ವಾರಾ ಹೆದ್ದಾರಿಯನ್ನು ತಡೆದು, ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದ್ದು, ಇಟ್ಟಿಗೆ, ಹೂವಿನ ಕುಂಡಗಳನ್ನು ಎಸೆಯಲಾಗಿದೆ. ಕೆಲವು ವಸ್ತುಗಳಿಗೆ ಬೆಂಕಿ ಹಚ್ಚಲಾಗಿದೆ. ಬಳಿಕ ಪೊಲೀಸರು ಹೆದ್ದಾರಿಯನ್ನು ತೆರವುಗೊಳಿಸಿದ್ದು, ಸಂಚಾರ ಪುನರಾರಂಭಗೊಂಡಿತು.
ಕ್ಯಾಂಪಸ್‌ನಿಂದ ಹರಿದಾಡಿದ ಕೆಲವು ವಿಡಿಯೋಗಳಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನಕ್ಕಿಟ್ಟಿದ್ದ MiG-23UM ಯುದ್ಧವಿಮಾನ ಹಾಗೂ ಸೇನಾ ಟ್ಯಾಂಕ್ ಮೇಲೆ ಹತ್ತಿರುವ ದೃಶ್ಯಗಳೂ ಕಂಡುಬಂದಿವೆ.
ಅತ್ಯಾಚಾರ ಆರೋಪದ ತನಿಖೆಗೆ SIT
ಜಲಂಧರ್ ರೇಂಜ್ ಡಿಐಜಿ ನವೀನ್ ಸಿಂಗ್ಲಾ ಭಾನುವಾರ, G-3 ಹಾಸ್ಟೆಲ್‌ನ ವಿದ್ಯಾರ್ಥಿನಿಗೆ ಸಂಬಂಧಿಸಿದಂತೆ ನಡೆದಿರಬಹುದು ಎನ್ನಲಾದ ಘಟನೆಯ ಕುರಿತು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಫಗ್ವಾರಾ ಎಸ್‌ಪಿ ಮೇಜರ್ ಸಿಂಗ್, ಡಿಎಸ್‌ಪಿ ಪಾಲ್ವಿಂದರ್ ಸಿಂಗ್, ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ತಂಡದಲ್ಲಿದ್ದಾರೆ. ಡಿಜಿಟಲ್ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನೂ ತನಿಖೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಪ್ರಗತಿ ಕುರಿತು ವಿದ್ಯಾರ್ಥಿ ಪ್ರತಿನಿಧಿಗಳಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಮಾತುಕತೆ ಬಳಿಕ ಮತ್ತೆ ಘರ್ಷಣೆ
ಭಾನುವಾರ ಪೊಲೀಸರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿತ್ತು. ಎಫ್‌ಐಆರ್ ಹಾಗೂ SIT ರಚನೆಯ ವಿವರಗಳನ್ನು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ತಿಳಿಸಿದರು. LPU ಕುಲಪತಿ ಹಾಗೂ ಸಂಸ್ಥಾಪಕಿ ರಶ್ಮಿ ಮಿತ್ತಲ್ ಅವರಿಂದಲೂ ವಿದ್ಯಾರ್ಥಿಗಳು ಭರವಸೆ ಕೋರಿದ್ದರು ಎಂದು ವರದಿಯಾಗಿದೆ.
ಆದರೆ ಮಾತುಕತೆ ಬಳಿಕ ಪರಿಸ್ಥಿತಿ ಮತ್ತೆ ಕೈಮೀರಿತು. ಪ್ರತಿಭಟನಾಕಾರರು ಪೊಲೀಸರತ್ತ ವಸ್ತುಗಳನ್ನು ಎಸೆದಿದ್ದು, ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಲವು ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ ಗಾಯಗೊಂಡ ಪೊಲೀಸ್ ಸಿಬ್ಬಂದಿಯ ನಿಖರ ಸಂಖ್ಯೆ ಹಾಗೂ ಹಾನಿಗೊಳಗಾದ ವಾಹನಗಳ ಸಂಪೂರ್ಣ ವಿವರ ತಕ್ಷಣಕ್ಕೆ ಲಭ್ಯವಾಗಿಲ್ಲ.
ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೂ ಮರುತನಿಖೆ
ಸುಮಾರು ಎರಡು ವಾರಗಳ ಹಿಂದೆ LPU ಕ್ಯಾಂಪಸ್‌ನಲ್ಲಿ ತೆಲಂಗಾಣ ಮೂಲದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನೂ ಮರುತನಿಖೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಈ ಹಿಂದೆ ವಿದ್ಯಾರ್ಥಿಯ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದರು. ಇದೀಗ ವಿದ್ಯಾರ್ಥಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಮತ್ತೊಂದು ತನಿಖೆ ಆರಂಭಿಸಲಾಗಿದೆ ಎಂದು ಡಿಐಜಿ ನವೀನ್ ಸಿಂಗ್ಲಾ ತಿಳಿಸಿದ್ದಾರೆ.
ಅತ್ಯಾಚಾರ-ಆತ್ಮಹತ್ಯೆ ಸಂಬಂಧದ ವದಂತಿ ತಳ್ಳಿಹಾಕಿದ LPU
ಇದೇ ವೇಳೆ, ಅತ್ಯಾಚಾರ ಆರೋಪವನ್ನು ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು LPU ಆಡಳಿತ ತಳ್ಳಿಹಾಕಿದೆ.
ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮೋನಿಕಾ ಗುಲಾಟಿ, ಈ ಕುರಿತ ವದಂತಿಗಳು “ಸುಳ್ಳು, ಆಧಾರರಹಿತ ಮತ್ತು ಕಟ್ಟುಕಥೆ” ಎಂದು ಹೇಳಿದ್ದಾರೆ. ಕೆಲವು “ಸಮಾಜ ವಿರೋಧಿ ಅಂಶಗಳು” ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಆರೋಪಿಸಿರುವ ಅವರು, ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯುವಂತೆ ಮನವಿ ಮಾಡಿದ್ದಾರೆ.
LPUಯಲ್ಲಿ ನಡೆದ ಅಶಾಂತಿಗೆ ಒಂದು ದಿನ ಮುನ್ನ ರಾಜಪುರ ಸಮೀಪದ ಚಿತ್ಕಾರಾ ವಿಶ್ವವಿದ್ಯಾಲಯದಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರತ್ಯೇಕ ಆರೋಪಗಳ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿತ್ತು. ಎರಡೂ ಘಟನೆಗಳ ಕಾರಣಗಳು ಹಾಗೂ ಅವುಗಳ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಪಂಜಾಬ್ ಪೊಲೀಸ್ ವಿಶೇಷ ಡಿಜಿಪಿ ಪರ್ವೀನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



