ಜುಲೈ 20ರ ಪ್ರತಿಭಟನೆ ಕೇವಲ Trailer ಅಷ್ಟೇ, ಸರ್ಕಾರ ಮಣಿಯದಿದ್ದರೆ ಲಕ್ಷಾಂತರ ಮಂದಿ ದೆಹಲಿಗೆ ಲಗ್ಗೆ: CJP ಹೊಸ ಎಚ್ಚರಿಕೆ
ವಿದ್ಯಾರ್ಥಿ ಸಮೂಹವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಗೆ ಹಾಗೂ ಸಮಗ್ರ ಶಿಕ್ಷಣ ಸುಧಾರಣೆಗೆ ಪಟ್ಟು ಹಿಡಿದಿದೆ.

ನವದೆಹಲಿ: ಜುಲೈ 20 ರಂದು ನಡೆದ ಬೃಹತ್ ಪ್ರತಿಭಟನೆ ಕೇವಲ ಟ್ರೈಲರ್ ಅಷ್ಟೇ, ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ದೆಹಲಿಗೆ ಲಗ್ಗೆ ಇಡಲಿದ್ದಾರೆ" ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಎಚ್ಚರಿಕೆ ನೀಡಿದೆ.
ಕಾಕ್ರೋಚ್ ಜನತಾ ಪಾರ್ಟಿ (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಾಂಕಾ ಪ್ರತಿಕ್ರಿಯಿಸಿ, NEET-UG ಪರೀಕ್ಷಾ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಹಮ್ಮಿಕೊಂಡಿದ್ದ "ಸಂಸದ್ ಚಲೋ" ರ‍್ಯಾಲಿ ಮೇಲಿನ ಪೊಲೀಸ್ ಕ್ರಮದ ಕುರಿತು ಆಕ್ರೋಶ ಹೊರಹಾಕಿದ್ದಾರೆ.
ವಿದ್ಯಾರ್ಥಿ ಸಮೂಹವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆಗೆ ಹಾಗೂ ಸಮಗ್ರ ಶಿಕ್ಷಣ ಸುಧಾರಣೆಗೆ ಪಟ್ಟು ಹಿಡಿದಿದೆ. ತನಿಖಾ ಸಂಸ್ಥೆಗಳು ಉಗ್ರ ನಿಗ್ರಹ ಕಾಯ್ದೆ (UAPA) ಅಥವಾ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಪ್ರಕರಣ ದಾಖಲಿಸಿದರೂ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈ 20ರಂದು ನಡೆದ ಪ್ರತಿಭಟನೆ ಕೇವಲ ಟ್ರೈಲರ್ ಮಾತ್ರ. ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಯುವಕರು ದೆಹಲಿಗೆ ಬಂದು ಐತಿಹಾಸಿಕ ಹೋರಾಟ ನಡೆಸಲಿದ್ದಾರೆ. ಇದು ಸ್ವಾತಂತ್ರ್ಯಾನಂತರ ಭಾರತದ ಅತಿದೊಡ್ಡ ಜನಾಂದೋಲನವಾಗಲಿದೆ" ಎಂದು ಹೇಳಿದ್ದಾರೆ.
"ಸರ್ಕಾರ ತನ್ನ ನಿಲುವು ಬದಲಿಸದಿದ್ದರೆ ದೇಶದ ಯುವಜನತೆ ತಕ್ಕ ಉತ್ತರ ನೀಡಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ದೆಹಲಿಯ ಸಂಸತ್ ಭವನ, ರಫಿ ಮಾರ್ಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಮುಂದುವರಿದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.
ಜುಲೈ 20ರಂದು ಸಂಸತ್ ಚಲೋ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಆರು ಎಫ್‌ಐಆರ್‌ಗಳು ದಾಖಲಾಗಿದ್ದು, ಈ ಘಟನೆಗಳ ಹಿಂದೆ ದೊಡ್ಡ ಮಟ್ಟದ ಸಂಚು ಇದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರತಿಭಟನೆಯ ವೇಳೆ ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಯೋಧನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೂ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೊದಲ್ಲಿ, ಪ್ರತಿಭಟನಾಕಾರರ ಗುಂಪೊಂದು ಯೋಧನನ್ನು ಬೆನ್ನಟ್ಟಿ ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಗುರುತಿಸುವ ಕಾರ್ಯ ಆರಂಭಿಸಿದ್ದಾರೆ.
ಇದರ ನಡುವೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಹಲವು ಪ್ರತಿಪಕ್ಷಗಳು ದೇಶದ ವಿವಿಧ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿ ಚಾರ್ಜ್ ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರ ಬಂಧನವನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ.
ಬುಧವಾರ ಬೆಳಗ್ಗೆ 10.30 ಗಂಟೆಗೆ ಸಂಸತ್‌ನ ಮಕರ ದ್ವಾರದ ಎದುರು ಪ್ರತಿಪಕ್ಷ ಸಂಸದರು ಪ್ರತಿಭಟನೆ ನಡೆಸಲಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಲಿದ್ದಾರೆ.
ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸುವಂತೆ ಒತ್ತಾಯಿಸುವ ಜೊತೆಗೆ, ಜುಲೈ 20ರಂದು ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ಕ್ರಮವನ್ನೂ ಪ್ರತಿಭಟಿಸಲಿದ್ದಾರೆ.
ಇನ್ನೊಂದೆಡೆ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರನ್ನು ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಮೆಡಾಂಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಹಾಗೂ ಜೆ.ಪಿ. ನಡ್ಡಾ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




