'ಇದು ವೈದ್ಯಕೀಯ ಚಿಕಿತ್ಸೆ ಅಲ್ಲ, ಅಕ್ರಮ ಬಂಧನ': ಆಸ್ಪತ್ರೆಯಿಂದ ಸೋನಂ ವಾಂಗ್ಚುಕ್ ಬಿಡುಗಡೆಗೆ ಪತ್ನಿ ಆಗ್ರಹ; High court ಮೊರೆ
ಸಫ್ದರ್‌ಜಂಗ್ ಆಸ್ಪತ್ರೆ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್‌ನಲ್ಲಿ ವಾಂಗ್ಚುಕ್ ಅವರ ಪೊಟ್ಯಾಸಿಯಂ ಪ್ರಮಾಣದ ನೈಜ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ.

ನವದೆಹಲಿ: ಸಾಮಾಜಿಕ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಯಿಂದ ತಮ್ಮ ಆಯ್ಕೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡುವಂತೆ ಕೋರಿ ಅವರ ಪತ್ನಿ ಗೀತಾಂಜಲಿ ಜೆ. ಅಂಗ್ಮೋ ಅವರು ಭಾನುವಾರ ದೆಹಲಿ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.
ಸಫ್ದರ್‌ಜಂಗ್ ಆಸ್ಪತ್ರೆಯ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದಾಗಿ ತಿಳಿಸಿರುವ ಅವರು, ವಾಂಗ್ಚುಕ್ ಅವರ ಆರೋಗ್ಯ ಮತ್ತಷ್ಟು ಹದಗೆಡುವ ಮುನ್ನ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, "ತಮ್ಮ ಪ್ರೀತಿಪಾತ್ರರಿಗೆ ಎಲ್ಲಿ ಚಿಕಿತ್ಸೆ ನೀಡಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಯಾವುದೇ ಕುಟುಂಬವೂ ವ್ಯವಸ್ಥೆಯ ವಿರುದ್ಧ ಹೋರಾಡುವ ಪರಿಸ್ಥಿತಿ ಬರಬಾರದು" ಎಂದು ಹೇಳಿದ್ದಾರೆ.
ಸಫ್ದರ್‌ಜಂಗ್ ಆಸ್ಪತ್ರೆ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್‌ನಲ್ಲಿ ವಾಂಗ್ಚುಕ್ ಅವರ ಪೊಟ್ಯಾಸಿಯಂ ಪ್ರಮಾಣದ ನೈಜ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿದ್ದಾರೆ.
ನಾವು ಹಲವು ಬಾರಿ ಮನವಿ ಮಾಡಿದರೂ ಆಸ್ಪತ್ರೆ ಅವರನ್ನು ಬಿಡುಗಡೆ ಮಾಡುತ್ತಿಲ್ಲ. ನಮ್ಮ ಆಯ್ಕೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೂಡ ಅವಕಾಶ ನೀಡುತ್ತಿಲ್ಲ. ಆಸ್ಪತ್ರೆಯ ನಮ್ಮ ಮಹಡಿಯಲ್ಲಿ ಸುಮಾರು 30 ಮಂದಿ ಪೊಲೀಸರು ಮತ್ತು ಆಸ್ಪತ್ರೆಯಾದ್ಯಂತ 100ಕ್ಕೂ ಹೆಚ್ಚು ಪೊಲೀಸರು ನಿಯೋಜನೆಯಾಗಿದ್ದಾರೆ. ನಮ್ಮ ಓಡಾಟದ ಮೇಲೂ ತೀವ್ರ ನಿರ್ಬಂಧ ಹೇರಲಾಗಿದೆ. ಇದು ವೈದ್ಯಕೀಯ ಚಿಕಿತ್ಸೆ ಅಲ್ಲ, ಅಕ್ರಮ ಬಂಧನ" ಎಂದು ಆರೋಪಿಸಿದ್ದಾರೆ.
"ಈ ಕಾರಣದಿಂದಲೇ ಸೋನಂ ಅವರ ಆರೋಗ್ಯ ಮತ್ತಷ್ಟು ಹದಗೆಡುವ ಮುನ್ನ ಅವರನ್ನು ಸ್ಥಳಾಂತರಿಸಲು ಅನುಮತಿ ಕೋರಿ ಇಂದು ಹೈಕೋರ್ಟ್‌ನಲ್ಲಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.
ಇದೇ ವೇಳೆ, ಸಫ್ದರ್‌ಜಂಗ್ ಆಸ್ಪತ್ರೆ ಭಾನುವಾರ ಪ್ರಕಟಣೆ ಹೊರಡಿಸಿ, ಸೋನಂ ವಾಂಗ್ಚುಕ್ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ತಜ್ಞ ವೈದ್ಯರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದೆ.
ಸುದೀರ್ಘ ಉಪವಾಸದ ಪರಿಣಾಮವಾಗಿ ಉಂಟಾಗಿರುವ ದೈಹಿಕ ಒತ್ತಡದಿಂದ ಅವರ ರಕ್ತ ಪರೀಕ್ಷೆಯ ಕೆಲವು ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಆದರೆ, ಅಗತ್ಯ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.
ಜೂನ್ 28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರನ್ನು ಶನಿವಾರ ಉಪವಾಸದ 21ನೇ ದಿನ ದೆಹಲಿ ಪೊಲೀಸರು ಬಲವಂತವಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಈ ವಿವಾದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸಾವಿನ ಆರೋಪದ ವಿರುದ್ಧ ಸಿಜೆಪಿ ನೇತೃತ್ವದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರು ಉಪವಾಸ ಆರಂಭಿಸಿದ್ದರು.
ಶನಿವಾರ ಆಸ್ಪತ್ರೆ ದಾಖಲಿಸಿದ ಬಳಿಕ ಗೀತಾಂಜಲಿ ಅಂಗ್ಮೋ, "ನನ್ನ ಅನುಮತಿಯಿಲ್ಲದೆ ಸೋನಂ ಅವರಿಗೆ ಯಾವುದೇ ಚಿಕಿತ್ಸೆ ನೀಡಬಾರದು. ನನ್ನ ಒಪ್ಪಿಗೆ ಇಲ್ಲದೆ ಯಾವುದೇ ಔಷಧಿ ಅಥವಾ ಚಿಕಿತ್ಸೆ ಆರಂಭಿಸಬಾರದು. ಏನಾದರೂ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಎಲ್ಲರೂ ಹೊಣೆಗಾರರು" ಎಂದು ಎಚ್ಚರಿಸಿದ್ದರು.
ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವೇ ಇರಲಿಲ್ಲ. "ಶುಕ್ರವಾರ ಅವರು ಆರೋಗ್ಯವಾಗಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯ ಇರಲಿಲ್ಲ. ನನ್ನ ಅನುಮತಿ ಹಾಗೂ ನನ್ನ ವೈದ್ಯರ ಒಪ್ಪಿಗೆಯಿಲ್ಲದೆ ಯಾವುದೇ ಚಿಕಿತ್ಸೆ ನೀಡುವ ಹಕ್ಕು ಯಾರಿಗೂ ಇಲ್ಲ" ಎಂದು ಹೇಳಿದ್ದಾರೆ.
ಇದೇ ವೇಳೆ, ವೈದ್ಯರು ವಾಂಗ್ಚುಕ್ ಅವರ ರಕ್ತದಲ್ಲಿನ ಪೊಟ್ಯಾಸಿಯಂ ಪ್ರಮಾಣ 4.3ರಿಂದ 2.9ಕ್ಕೆ ಇಳಿದಿದೆ ಎಂದು ಕುಟುಂಬಕ್ಕೆ ತಿಳಿಸಿದ್ದು, ಇದು ಜೀವಕ್ಕೆ ಅಪಾಯಕಾರಿಯಾದ ಸ್ಥಿತಿ ಎಂದು ಹೇಳಿದ್ದಾರೆ. ಆದರೆ, ವೈದ್ಯಕೀಯ ವರದಿಗಳ ಪ್ರತಿಯನ್ನು ಹಲವು ಬಾರಿ ಕೇಳಿದರೂ ಆಸ್ಪತ್ರೆ ನೀಡಿಲ್ಲ ಎಂದು ಅಂಗ್ಮೋ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



