ದೇಶ

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಡಿ.ಕೆ ಶಿವಕುಮಾರ್ ಸಂತಾಪ

ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮ ಅವರು ಗುಣಮುಖರಾಗಿ ವಾಪಸ್ಸು ಬರುತ್ತಾರೆ ಎಂದುಕೊಂಡಿದ್ದೆ ಎಂದು ಸಿಎಂ ಡಿಕೆ ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಡಿ.ಕೆ ಶಿವಕುಮಾರ್ ಸಂತಾಪ
Published On :

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ವಯೋಸಹಜ ಖಾಯಿಲೆಯಿಂದ ಶನಿವಾರ ಸಂಜೆ ಖಾಸಗಿ ಅಸ್ಪತ್ರೆಯಲ್ಲಿ ನಿಧನರಾದರು. ಪದ್ಮನಾಭನಗರದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ಚೆನ್ನಮ್ಮ ಅವರ ನಿಧನಕ್ಕೆ ಸಿದ್ದರಾಮಯ್ಯ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂಗಳು ಹಾಗೂ ಸಿಎಂ ಡಿಕೆ ಶಿವಕುಮಾರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಸ್ಪತ್ರೆಗೆ ಹೋಗಿ ಮೃತದೇಹದ ಅಂತಿಮ ದರ್ಶನವನ್ನು ಪಡೆದರು.

ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಮ್ಮ ಅವರು ಗುಣಮುಖರಾಗಿ ವಾಪಸ್ಸು ಬರುತ್ತಾರೆ ಎಂದುಕೊಂಡಿದ್ದೆ ಎಂದು ಸಿಎಂ ಡಿಕೆ ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದು, ಅವರ ನಿಧನ ಅತೀವ ದುಃಖವನ್ನುಂಟು ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

'ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್‌.ಡಿ ದೇವೇಗೌಡರ ಧರ್ಮಪತ್ನಿ, ಮಾತೃ ಸ್ವರೂಪಿ ಶ್ರೀಮತಿ ಚೆನ್ನಮ್ಮ ಅವರು ನಿಧನರಾಗಿರುವ ವಿಷಯ ಅತೀವ ದುಃಖವನ್ನುಂಟು ಮಾಡಿದೆ. ಶ್ರೀಮತಿ ಚನ್ನಮ್ಮ ಅವರು ಅಪಾರ ದೈವಭಕ್ತೆಯಾಗಿದ್ದರು. ಅವರು ಆಸ್ಪತ್ರೆಯಿಂದ ಗುಣಮುಖರಾಗಿ ವಾಪಸ್ಸು ಬರುತ್ತಾರೆಂದು ಎಲ್ಲರೂ ನಂಬಿಕೆ ಇಟ್ಟುಕೊಂಡಿದ್ದೆವು. ಆದರೆ ಆ ನಂಬಿಕೆ ಸುಳ್ಳಾಗಿರುವುದಕ್ಕೆ ಬಹಳ ಬೇಸರವಾಗಿದೆ' ಎಂದು ಬರೆದಿದ್ದಾರೆ.

ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎನ್ನುತ್ತಾರೆ. ಅದರಂತೆ ಚೆನ್ನಮ್ಮನವರು ದೇವೇಗೌಡರ ಪ್ರತಿ ಯಶಸ್ಸಿನ‌ ಹಿಂದೆ ಹಾಗೂ ರಾಜಕೀಯದ ಏಳು-ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಮನೆಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಮೂಲಕ ಅವರು ದೇವೇಗೌಡರ ಬದುಕಿನ ಶಕ್ತಿಯಾಗಿದ್ದರು. ಯಾವುದೇ ಪ್ರಚಾರ ಬಯಸದೆ ತೆರೆಮರೆಯಲ್ಲಿ ಇದ್ದರು. ಅವರ ಅಗಲಿಕೆ ಕುಟುಂಬಸ್ಥರಿಗೆ ಹಾಗೂ ಆಪ್ತರಿಗೆ ತುಂಬಲಾರದ ನಷ್ಟವಾಗಿದೆ. ಭಗವಂತ ಹಿರಿಯರ ಆತ್ಮಕ್ಕೆ ಚಿರಶಾಂತಿ ನೀಡಲಿ, ಕುಟುಂಬಸ್ಥರಿಗೆ, ಬಂಧು-ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಡಿಕೆ ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ಇನ್ನು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಸಂತಾಪ ಸೂಚಿಸಿದ್ದು, ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. 'ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ, ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ' ಎಂದು ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.