ಭೀಕರ ಅಪಘಾತ: ಇ-ರಿಕ್ಷಾಗೆ ಹೇರಲಾಗಿದ್ದ ಕಬ್ಬಿಣದ ಸರಳುಗಳು ಚುಚ್ಚಿ ಕ್ಯಾಬ್ ಚಾಲಕ ದಾರುಣ ಸಾವು! Video
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹರಿಯಾಣ ನಡುವಿನ ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇ-ರಿಕ್ಷಾಗೆ ತುಂಬಿದ್ದ ಕಬ್ಬಿಣದ ಸರಳುಗಳು ಕಾರು ಚಾಲಕನಿಗೆ ಚುಚ್ಚಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನವದೆಹಲಿ: ಇ-ರಿಕ್ಷಾ ಚಾಲಕನ ಸಣ್ಣ ನಿರ್ಲಕ್ಷ್ಯದಿಂದಾಗಿ ಕಾರು ಚಾಲಕ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹರಿಯಾಣ ನಡುವಿನ ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇ-ರಿಕ್ಷಾಗೆ ತುಂಬಿದ್ದ ಕಬ್ಬಿಣದ ಸರಳುಗಳು ಕಾರು ಚಾಲಕನಿಗೆ ಚುಚ್ಚಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಂತೆಯೇ ಈ ಘಟನೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಭೀಕರ ಘಟನೆ ಮತ್ತೊಮ್ಮೆ ವೇಗದ ರಸ್ತೆಗಳಲ್ಲಿ ಅತಿಭಾರದ ಸಾಗಣೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಅಪಘಾತ ನಡೆದಿದ್ದು ಹೇಗೆ?
ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ಈ ದುರ್ಘಟನೆ ನಡೆದಿದೆ. ಕಬ್ಬಿಣದ ಉದ್ದನೆಯ ರಾಡ್‌ಗಳನ್ನು ಸಾಗಿಸುತ್ತಿದ್ದ ಇ-ರಿಕ್ಷಾದ ಹಿಂಭಾಗದಿಂದ ರಾಡ್‌ಗಳು ಬಹಳಷ್ಟು ಹೊರಚಾಚಿಕೊಂಡಿದ್ದವು. ಅವುಗಳಿಗೆ ಎಚ್ಚರಿಕೆ ನೀಡುವ ಕೆಂಪು ಧ್ವಜ, ರಿಫ್ಲೆಕ್ಟರ್ ಅಥವಾ ಯಾವುದೇ ಸುರಕ್ಷತಾ ಗುರುತುಗಳನ್ನು ಅಳವಡಿಸಿರಲಿಲ್ಲ.
ಈ ವೇಳೆ ಹಿಂದಿನಿಂದ ಬರುತ್ತಿದ್ದ ಕ್ಯಾಬ್ ಇ-ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ, ಕ್ಯಾಬ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಯಿತು. ಢಿಕ್ಕಿಯ ರಭಸಕ್ಕೆ ಕಬ್ಬಿಣದ ರಾಡ್‌ಗಳಲ್ಲಿ ಒಂದು ಕ್ಯಾಬ್‌ನ ಮುಂಭಾಗದ ಗಾಜನ್ನು ಭೇದಿಸಿ ನೇರವಾಗಿ ಚಾಲಕನ ಎದೆಗೆ ನುಗ್ಗಿತು. ತೀವ್ರ ಗಾಯಗೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟರು. ಕ್ಯಾಬ್‌ನಲ್ಲಿದ್ದ ಮಹಿಳಾ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇ-ರಿಕ್ಷಾ ಚಾಲಕ ವಶಕ್ಕೆ
ಘಟನೆಯ ಬಳಿಕ ಪೊಲೀಸರು ಇ-ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸ್ ಹಾಗೂ ಸಂಚಾರ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಕ್ಯಾಬ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರಿಂದ ಚಾಲಕನ ಮೃತದೇಹವನ್ನು ಹೊರತೆಗೆಯಲು ಸಿಬ್ಬಂದಿಗೆ ಸಾಕಷ್ಟು ಸಮಯ ಬೇಕಾಯಿತು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರ ಅಸ್ತವ್ಯಸ್ತ
ಅಪಘಾತದಿಂದ ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲಕಾಲ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಬಳಿಕ ಪೊಲೀಸರು ಎರಡೂ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಸಹಜಗೊಳಿಸಿದರು.
ಅಪಘಾತಕ್ಕೆ ಕಾರಣವೇನು?
ಇ-ರಿಕ್ಷಾ ಚಾಲಕ ತಾನು ನಿಧಾನವಾಗಿ ವಾಹನ ಚಲಾಯಿಸುತ್ತಿದ್ದಾಗ ಕ್ಯಾಬ್ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಅತಿವೇಗದ ಚಾಲನೆ ಹಾಗೂ ಹಿಂದಿನಿಂದ ಸಂಭವಿಸಿದ ಡಿಕ್ಕಿಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ವೇಗದ ರಸ್ತೆಗಳಲ್ಲಿ ಅತಿಭಾರದ ಸಾಗಣೆ ಅಪಾಯಕಾರಿ
ಈ ದುರ್ಘಟನೆ ವೇಗದ ರಸ್ತೆಗಳಲ್ಲಿ ಇ-ರಿಕ್ಷಾ ಸೇರಿದಂತೆ ಸಣ್ಣ ವಾಹನಗಳಲ್ಲಿ ಉದ್ದನೆಯ ಕಬ್ಬಿಣದ ರಾಡ್‌ಗಳು ಹಾಗೂ ನಿರ್ಮಾಣ ಸಾಮಗ್ರಿಗಳನ್ನು ಸುರಕ್ಷತಾ ಕ್ರಮಗಳಿಲ್ಲದೆ ಸಾಗಿಸುವ ಅಪಾಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
ರಸ್ತೆ ಸುರಕ್ಷತಾ ತಜ್ಞರ ಪ್ರಕಾರ, ವಾಹನದ ಹೊರಭಾಗಕ್ಕೆ ಮೀರಿ ಸಾಗುವ ಯಾವುದೇ ಸರಕುಗಳನ್ನು ಸುರಕ್ಷಿತವಾಗಿ ಕಟ್ಟುವುದರ ಜೊತೆಗೆ ಎಚ್ಚರಿಕೆ ಧ್ವಜ ಅಥವಾ ಪ್ರತಿಫಲಕಗಳನ್ನು ಅಳವಡಿಸುವುದು ಕಡ್ಡಾಯ. ಇಲ್ಲವಾದರೆ, ಕ್ಷಣಿಕ ನಿರ್ಲಕ್ಷ್ಯವೂ ಭೀಕರ ದುರಂತಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




