ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ: ರಾಮ ಮಂದಿರ ದೇಣಿಗೆಯಲ್ಲಿ ಕಳ್ಳತನ, ಪ್ರಮುಖ ಅಸ್ತ್ರವನ್ನಾಗಿಸಲು ಕಾಂಗ್ರೆಸ್ ರಣತಂತ್ರ!
ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸ '10 ಜನಪಥ್'ನಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಈ ಕಾರ್ಯತಂತ್ರವನ್ನು ಅಂತಿಮಗೊಳಿಸಲಾಗಿದೆ.

ನವದೆಹಲಿ: ಜುಲೈ 20 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಮ ಮಂದಿರ ದೇಣಿಗೆಯಲ್ಲಿ ಅವ್ಯವಹಾರದ ಆರೋಪ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯ "ವ್ಯವಸ್ಥಿತ ಕುಸಿತ", ಬೆಲೆ ಏರಿಕೆ ಮತ್ತು ವಿದೇಶಾಂಗ ನೀತಿ ಸೇರಿದಂತೆ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ರಣವ್ಯೂಹ ರೂಪಿಸುತ್ತಿದೆ.
ಅಲ್ಲದೇ, ಕ್ಷೇತ್ರ ಮರು-ವಿಂಗಡಣೆ, ಸಚಿವರು ಮತ್ತು ಮುಖ್ಯಮಂತ್ರಿಗಳ ಪದಚ್ಯುತಿಗೆ ಸಂಬಂಧಿಸಿದ ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಗಳು ಮತ್ತು ಅಧಿವೇಶನದಲ್ಲಿ ಮಂಡನೆಯಾಗಲಿರುವ ಇತರ ಹಲವು ಮಸೂದೆಗಳನ್ನು ಬಲವಾಗಿ ವಿರೋಧಿಸುವುದಾಗಿಯೂ ಪಕ್ಷ ಘೋಷಿಸಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸ '10 ಜನಪಥ್'ನಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಈ ಕಾರ್ಯತಂತ್ರವನ್ನು ಅಂತಿಮಗೊಳಿಸಲಾಗಿದೆ.
ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯಸಭೆಯ ಮುಖ್ಯ ಸಚೇತಕ ಜೈರಾಮ್ ರಮೇಶ್, ಪಿ. ಚಿದಂಬರಂ, ಕೆ. ಸುರೇಶ್, ನಸೀರ್ ಹುಸೇನ್, ಮಾಣಿಕಂ ಠಾಗೋರ್, ಕುಮಾರಿ ಸೆಲ್ಜಾ, ತಾರಿಖ್ ಅನ್ವರ್, ಶಶಿ ತರೂರ್, ಮನೀಶ್ ತಿವಾರಿ ಮತ್ತಿತರ ಹಿರಿಯ ನಾಯಕರು ಭಾಗವಹಿಸಿದ್ದರು.
ಸಭೆಯ ನಂತರ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಅಧಿವೇಶನದಲ್ಲಿ ಪಕ್ಷವು ಪ್ರಸ್ತಾಪಿಸಲು ಉದ್ದೇಶಿಸಿರುವ ವಿಷಯಗಳನ್ನು ವಿವರಿಸಿದ್ದಾರೆ.ಹಲವು ಹಗರಣಗಳು, ಭ್ರಷ್ಟಾಚಾರ ಆರೋಪಗಳು, ಬೆಲೆ ಏರಿಕೆ, ಸುಮಾರು 3.5 ಕೋಟಿ ವಾಹನಗಳ ಮಾಲೀಕರ ಮೇಲೆ ಎಥೆನಾಲ್ ಮಿಶ್ರಣದ ಮೇಲೆ ಸುಂಕದ ಏರಿಕೆಯ ಪಿತೂರಿ, ಎಸ್ ಸಿ, ಎಸ್ ಟಿ ಮತ್ತು ಅಲ್ಪಸಂಖ್ಯಾತರ ಮೇಲಿನ ಹಕ್ಕುಗಳ ಮೇಲೆ ಮುಂದುವರೆದ ದೌರ್ಜನ್ಯ ಮತ್ತಿತರ ಅನೇಕ ವಿಚಾರಗಳನ್ನು ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಖರ್ಗೆ ತಿಳಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಈ ವರ್ಷದ ಆರಂಭದಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ವಿಫಲವಾದ ನಂತರ, ಕ್ಷೇತ್ರ ಮರು-ವಿಂಗಡಣೆಗೆ (delimitation) ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮರು-ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ವಿಷಯ ಪಕ್ಷಕ್ಕೆ ತಿಳಿದುಬಂದಿದೆ ಎಂದರು.
ಕೇಂದ್ರ ಗೃಹ ಸಚಿವರು (ಅಮಿತ್ ಶಾ) ಕ್ಷೇತ್ರ ಮರು-ವಿಂಗಡಣೆ ಮಸೂದೆಯನ್ನು ಮತ್ತೆ ಮಂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಏಪ್ರಿಲ್ 17 ರಂದು ಸರ್ಕಾರವು ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿತ್ತು ಮತ್ತು ದೊಡ್ಡ ಹಿನ್ನಡೆಯನ್ನು ಅನುಭವಿಸಿತ್ತು. ಈಗ ಅದೇ ಮಸೂದೆಯನ್ನು ಮರು-ಮಂಡಿಸಲು ಬಯಸುತ್ತಿದೆ." ಗಂಭೀರ ಅಪರಾಧ ಪ್ರಕರಣಗಳಲ್ಲಿ 30 ದಿನಗಳ ಕಾಲ ವಶದಲ್ಲಿರುವ (ಬಂಧನದಲ್ಲಿರುವ) ಸಚಿವರನ್ನು ಹುದ್ದೆಯಿಂದ ತೆಗೆದುಹಾಕಲು ಉದ್ದೇಶಿಸಿರುವ ಮತ್ತೊಂದು ಸಂವಿಧಾನ ತಿದ್ದುಪಡಿ ಮಸೂದೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
"ಕ್ಷೇತ್ರ ಮರು-ವಿಂಗಡಣೆ ಮಸೂದೆಯನ್ನು ಬಲವಾಗಿ ವಿರೋಧಿಸುವುದಾಗಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಹೇಳುತ್ತಾ ಬಂದಿದೆ. ಮುಂದೆಯೂ ಅದನ್ನು ಮುಂದುವರಿಸಲಿದೆ. ಎಲ್ಲಾ ವಿರೋಧ ಪಕ್ಷಗಳ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿಕೊಳ್ಳಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಅದೇ ರೀತಿ, ಸಚಿವರನ್ನು ಹುದ್ದೆಯಿಂದ ತೆಗೆದುಹಾಕುವ ಕುರಿತಾದ ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಯನ್ನೂ ನಾವು ದೃಢವಾಗಿ ವಿರೋಧಿಸುತ್ತೇವೆ ಎಂದರು.
ಪ್ರಸ್ತುತ ಜಂಟಿ ಸಂಸದೀಯ ಸಮಿತಿಯ (JPC) ಪರಿಶೀಲನೆಯಲ್ಲಿರುವ 'ಒಂದು ದೇಶ, ಒಂದು ಚುನಾವಣೆ' (One Nation, One Election) ಶಾಸನದ ಕುರಿತಾಗಿಯೂ ಚರ್ಚೆ ನಡೆದಿದೆ. ಅಧಿವೇಶನದ ಅವಧಿಯಲ್ಲಿ 'ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ'ಯನ್ನು (Viksit Bharat Shiksha Adhishthan Bill) ಮಂಡಿಸಿದ್ದರೆ ಕಾಂಗ್ರೆಸ್ ಅದನ್ನೂ ವಿರೋಧಿಸಲಿದೆ ಎಂದು ರಮೇಶ್ ತಿಳಿಸಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ'ಗೆ ಕಾನೂನು ಆಧಾರವಾಗಿರುವ 'ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013'ಕ್ಕೆ ಪ್ರಸ್ತಾಪಿಸಲಾದ ತಿದ್ದುಪಡಿಗಳ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಜೈರಾಮ್ ರಮೇಶ್ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



