ದೇಶ

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು ನಿಕಾಹ್ ಸಮಾರಂಭ; 12 ಮಂದಿಗೆ ಗಾಯ, Video

ಊಟದ ವೇಳೆ ಚಿಕನ್ ಬಡಿಸಿದ್ದರಿಂದ ವಿವಾದ ಭುಗಿಲೆದ್ದಿತು. ಇದರಿಂದ ಆಕ್ರೋಶಗೊಂಡ ವರನ ಕಡೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು ನಿಕಾಹ್ ಸಮಾರಂಭ; 12 ಮಂದಿಗೆ ಗಾಯ, Video
ಬಿಹಾರ ನಿಕಾಹ್ ಕಾರ್ಯಕ್ರಮದಲ್ಲಿ ಗಲಾಟೆ
Published On :

ಪಾಟ್ನಾ: ಮಾಂಸದೂಟದ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ವಾಕ್ಸಮರ ಬಳಿಕ ಸಂಘರ್ಷಕ್ಕೆ ತಿರುಗಿ ಪರಸ್ಪರ ಮಾರಾಮಾರಿಯಾಗಿರುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯ ಸಿಮ್ರಿ ಬಖ್ತಿಯಾರ್ಪುರ್ ಪಟ್ಟಣದಲ್ಲಿಲ್ಲಿ ನಡೆದಿದೆ.

ವರನ ಕಡೆಯವರಿಗೆ ಮಟನ್ ಬಡಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಊಟದ ವೇಳೆ ಚಿಕನ್ ಬಡಿಸಿದ್ದರಿಂದ ವಿವಾದ ಭುಗಿಲೆದ್ದಿತು. ಇದರಿಂದ ಆಕ್ರೋಶಗೊಂಡ ವರನ ಕಡೆಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ವಧುವಿನ ಕುಟುಂಬದವರು ಬರಾತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ನಡೆದ ಸಂಘರ್ಷದಲ್ಲಿ 12 ಮಂದಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮೊಹಮ್ಮದ್ ಅನ್ವರ್ ಅವರ ಪುತ್ರ ಮೊಹಮ್ಮದ್ ಅಬ್ದುಲ್ಲಾ ಅಲಿಯಾಸ್ ಚಾಂದ್ ಹಾಗೂ ಮೊಹಮ್ಮದ್ ಜಾವೇದ್ ಅಲಿಯಾಸ್ ಮೋಟೋ ಅವರ ಪುತ್ರಿಯ ನಿಕಾಹ್ ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ನೆರವೇರಿತು.

ಅಧಿಕಾರಿಗಳ ಪ್ರಕಾರ, ನಿಕಾಹ್ ಸಮಾರಂಭವು ಯಾವುದೇ ಅಡಚಣೆಯಿಲ್ಲದೆ ಶಾಂತಿಯುತ ಮತ್ತು ಸೌಹಾರ್ದಯುತ ವಾತಾವರಣದಲ್ಲಿ ನಡೆದಿತ್ತು. ಆದರೆ ಈ ವೇಳೆ ಊಟದ ವಿಚಾರಕ್ಕೆ ಭುಗಿಲೆದ್ದ ವಾಗ್ವಾದ ಬಳಿಕ ಸಂಘರ್ಷಕ್ಕೆ ಕಾರಣವಾಯಿತು.

ವರನ ಸಂಬಂಧಿಕರೊಬ್ಬರ ಪ್ರಕಾರ, ನಿಕಾಹ್ ಬಳಿಕ ಎಲ್ಲಾ ಬರಾತಿಗಳು ಊಟಕ್ಕೆ ಕುಳಿತಾಗ ಸಮಸ್ಯೆ ಆರಂಭವಾಯಿತು. ಮದುವೆ ಊಟದಲ್ಲಿ ಮಟನ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ತಟ್ಟೆಯಲ್ಲಿ ಚಿಕನ್ ಬಡಿಸಿದ್ದನ್ನು ಕಂಡ ವರನ ಕಡೆಯವರು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ಆತಿಥೇಯರು ಮತ್ತು ಅತಿಥಿಗಳ ನಡುವೆ ಮೊದಲು ಮಾತಿನ ಚಕಮಕಿ ನಡೆಯಿತು. ಬಳಿಕ ಅದು ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿ, ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದರು.

ಈ ಗಲಾಟೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಒಂದು ವಿಡಿಯೊದಲ್ಲಿ ಕೆಲವರು ಅತಿಥಿಗಳ ಮೇಲೆ ಲಾಠಿಗಳಿಂದ ಹಲ್ಲೆ ನಡೆಸುತ್ತಿರುವುದು ಹಾಗೂ ಕತ್ತಿಗಳನ್ನು ಬೀಸುತ್ತಿರುವ ದೃಶ್ಯಗಳು ಕಂಡುಬಂದಿವೆ.

ಗಾಯಗೊಂಡವರನ್ನು ಸಿಮ್ರಿ ಬಖ್ತಿಯಾರ್ಪುರ್ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.