ಮುಂಬೈ ಮುಂಗಾರು ಅಬ್ಬರ: ಜಲಾವೃತ ರೈಲು ಹಳಿಗಳಲ್ಲಿ ಮೀನುಗಳ ಸ್ವಚ್ಛಂದ ಈಜಾಟ; Video Viral
ಸ್ಥಳೀಯ ರೈಲು ನಿಲ್ದಾಣದ ಹಳಿಗಳ ಮೇಲೆ ನೀರು ನಿಂತಿದ್ದು, ಆ ನೀರಿನಲ್ಲೇ ಮೀನುಗಳು ಈಜಾಡುತ್ತಿರುವ ಅಪರೂಪದ ದೃಶ್ಯವೊಂದು ಕಂಡುಬಂದಿದೆ.

ಮುಂಬೈ: ನೆರೆಯ ಮಹಾರಾಷ್ಟ್ರದಲ್ಲಿ ಮುಂಗಾರು ಮಾರುತಗಳ ಅಬ್ಬರ ಜೋರಾಗಿಯಾ ಸಾಗಿದ್ದು, ರಾಜ್ಯಾದ್ಯಂತ ಭಾರಿ ಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ.
ಪ್ರಮುಖವಾಗಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ಥಗೊಳಿಸಿದ್ದು, ಮುಂಬೈನ ಹಲವು ಪ್ರದೇಶಗಳು ಜಲಾವೃತವಾಗಿವೆ. ಈ ನಡುವೆಯೇ, ಸ್ಥಳೀಯ ರೈಲು ನಿಲ್ದಾಣದ ಹಳಿಗಳ ಮೇಲೆ ನೀರು ನಿಂತಿದ್ದು, ಆ ನೀರಿನಲ್ಲೇ ಮೀನುಗಳು ಈಜಾಡುತ್ತಿರುವ ಅಪರೂಪದ ದೃಶ್ಯವೊಂದು ಕಂಡುಬಂದಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಮಳೆ ನೀರು ತುಂಬಿಕೊಂಡಿರುವ ರೈಲು ಹಳಿಗಳ ನಡುವೆ ಹಲವು ಮೀನುಗಳು ಈಜಾಡುತ್ತಿರುವುದು ಹಾಗೂ ಅತ್ತಿತ್ತ ಚಲಿಸುತ್ತಿರುವುದು ಕಾಣಿಸುತ್ತದೆ. ಈ ಅಪರೂಪದ ದೃಶ್ಯ ನೆಟ್ಟಿಗರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ.
ಅಂದಹಾಗೆ ಮುಂಬೈನ ಈ ವರ್ಷದ ಮುಂಗಾರು ಅವಧಿಯ ಅತ್ಯಂತ ಚರ್ಚಿತ ವಿಡಿಯೊಗಳಲ್ಲಿ ಒಂದಾಗಿದೆ. ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆಗಳು ಹಾಗೂ ಉಪನಗರ ರೈಲು ಹಳಿಗಳು ಜಲಾವೃತಗೊಂಡಿದ್ದವು. ಇದರ ಪರಿಣಾಮ ಸ್ಥಳೀಯ ರೈಲು ಸಂಚಾರ ಅಸ್ತವ್ಯಸ್ತಗೊಂಡು, ಸಾವಿರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಅವಾಂತರದ ನಡುವೆ ನಗೆ ತರಿಸಿದ ದೃಶ್ಯ
ಮಳೆಯ ಅವಾಂತರದ ನಡುವೆಯೇ ರೈಲು ಹಳಿಗಳಲ್ಲಿ ಮೀನುಗಳು ಕಾಣಿಸಿಕೊಂಡ ದೃಶ್ಯ ಜನರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ನಗು ತರಿಸಿತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಸ್ಯಮಯ ಪ್ರತಿಕ್ರಿಯೆಗಳನ್ನು ನೀಡಲು ಆರಂಭಿಸಿದ್ದಾರೆ.
ಮಳೆಯ ಅಬ್ಬರದಿಂದ ಸಂಚಾರ ಅಸ್ತವ್ಯಸ್ತ
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಬೈ, ಠಾಣೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಹವಾಮಾನ ಎಚ್ಚರಿಕೆಯನ್ನೂ ಜಾರಿ ಮಾಡಲಾಗಿತ್ತು.
ನಿರಂತರ ಮಳೆಯಿಂದ ನಗರದ ಹಲವೆಡೆ ನೀರು ನಿಂತು, ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯ ರೈಲುಗಳ ಸಂಚಾರವೂ ವಿಳಂಬಗೊಂಡ ಪರಿಣಾಮ, ಸಾವಿರಾರು ನಿತ್ಯ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು.
ವಾರ್ಷಿಕ ಮುಂಗಾರು ಸವಾಲುಗಳಿಗೆ ಮತ್ತೊಂದು ಉದಾಹರಣೆ
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಡುವೆ, ಪ್ರತಿವರ್ಷ ಮುಂಗಾರು ಸಂದರ್ಭದಲ್ಲಿ ಮುಂಬೈ ಎದುರಿಸುವ ಪ್ರವಾಹ ಹಾಗೂ ಜಲಾವೃತ ಸಮಸ್ಯೆಗಳನ್ನು ಇದು ಮತ್ತೊಮ್ಮೆ ನೆನಪಿಸಿದೆ. ಜೊತೆಗೆ, ಮಳೆಯ ಅವಾಂತರದ ನಡುವೆಯೂ ಕೆಲವೊಮ್ಮೆ ಇಂತಹ ಅನಿರೀಕ್ಷಿತ ಹಾಗೂ ಕುತೂಹಲಕಾರಿ ಘಟನೆಗಳು ಜನರ ಗಮನ ಸೆಳೆಯುತ್ತವೆ ಎಂಬುದನ್ನೂ ಈ ಘಟನೆ ತೋರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



