ದೇಶ

ಮದುವೆ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ: ತಿರುಪತಿಯಲ್ಲಿ ಡಬಲ್ ಮರ್ಡರ್

ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ತಿರುಚಾನೂರು ರಸ್ತೆಯಲ್ಲಿರುವ ಕಲ್ಯಾಣ ಮಂಟಪದ ಬಳಿ ಬುಧವಾರ ರಾತ್ರಿ ಸುಮಾರು 9.40ರ ವೇಳೆ ಈ ಘಟನೆ ನಡೆದಿದ್ದು, ಮದುವೆ ಸಂಬಂಧಿತ ವಿವಾದದ ವೇಳೆ ಇಬ್ಬರು ವ್ಯಕ್ತಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.

ಮದುವೆ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ: ತಿರುಪತಿಯಲ್ಲಿ ಡಬಲ್ ಮರ್ಡರ್
ತಿರುಪತಿಯಲ್ಲಿ ಡಬಲ್ ಮರ್ಡರ್
Published On :

ತಿರುಪತಿ: ಮದುವೆ ಕಾರ್ಯಕ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಸಣ್ಣ ಜಗಳವೊಂದು ಭೀಕರ ತಿರುವು ಪಡೆದು ಜೋಡಿ ಕೊಲೆ ನಡೆದ ದಾರುಣ ತಿರುಪತಿಯಲ್ಲಿ ವರದಿಯಾಗಿದೆ.

ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ತಿರುಚಾನೂರು ರಸ್ತೆಯಲ್ಲಿರುವ ಕಲ್ಯಾಣ ಮಂಟಪದ ಬಳಿ ಬುಧವಾರ ರಾತ್ರಿ ಸುಮಾರು 9.40ರ ವೇಳೆ ಈ ಘಟನೆ ನಡೆದಿದ್ದು, ಮದುವೆ ಸಂಬಂಧಿತ ವಿವಾದದ ವೇಳೆ ಇಬ್ಬರು ವ್ಯಕ್ತಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ.

ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಜೀವಕೋಣದ 50 ವರ್ಷದ ಮುನಿರತ್ನಂ ರೆಡ್ಡಿ ಹಾಗೂ ತಿರುಪತಿಯ ಸುಬ್ಬಾ ರೆಡ್ಡಿ ನಗರದ ಮಣಿಕಂಠ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಮುನಿರತ್ನಂ ರೆಡ್ಡಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಣಿಕಂಠ ಅವರನ್ನು ತಕ್ಷಣವೇ ಶ್ರೀ ವೆಂಕಟೇಶ್ವರ ರಾಮನಾರಾಯಣ ರುಯಾ ಸರ್ಕಾರಿ ಸಾಮಾನ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ವೇಳೆ ಅವರು ಮೃತಪಟ್ಟರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಪ್ರತ್ಯಕ್ಷದರ್ಶಿಗಳು ಚಿತ್ರೀಕರಿಸಿರುವ ವಿಡಿಯೊಗಳನ್ನೂ ಪರಿಶೀಲಿಸುತ್ತಿದ್ದಾರೆ. ಘಟನೆಯೊಂದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಈ ದ್ವಿಹತ್ಯೆ ಕುಟುಂಬ ಕಲಹದ ಹಿನ್ನೆಲೆಯಲ್ಲೇ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯೇರ್ಪೇಡು ಮಂಡಲದ ಜಂಗಲಪಲ್ಲಿ ಗ್ರಾಮದ ಸುನೀಲ್, ಆತನ ಸಹೋದರ, ಸಹೋದರಿ ಹಾಗೂ ಮತ್ತೊಬ್ಬ ಸಂಬಂಧಿಕರು ಸೇರಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಸುನೀಲ್ ಹಲವು ವರ್ಷಗಳಿಂದ ತನ್ನ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಬುಧವಾರ ರಾತ್ರಿ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಸುನೀಲ್ ಬಂದಿರುವ ವಿಷಯ ಆತನ ಅತ್ತೆ ಸಂಪೂರ್ಣಮ್ಮ ಅವರಿಗೆ ತಿಳಿದಿತ್ತು. ಈ ಕುರಿತು ಅವರು ತಮ್ಮ ಮಗಳ ವಿವಾಹವನ್ನು ಏರ್ಪಡಿಸಿದ್ದ ಮುನಿರತ್ನಂ ರೆಡ್ಡಿ ಹಾಗೂ ಮಣಿಕಂಠ ಅವರಿಗೆ ಮಾಹಿತಿ ನೀಡಿದ್ದರು.

ಇದಾದ ಬಳಿಕ ಮುನಿರತ್ನಂ ಮತ್ತು ಮಣಿಕಂಠ ಮದುವೆ ಮಂಟಪದಲ್ಲಿ ಸುನೀಲ್ ಅವರನ್ನು ಎದುರಿಸಿ, ಪತ್ನಿಯನ್ನು ತೊರೆದು ಹೋಗಿರುವ ಬಗ್ಗೆ ಪ್ರಶ್ನಿಸಿದ್ದರೆಂದು ತಿಳಿದುಬಂದಿದೆ. ಈ ವೇಳೆ ಸುನೀಲ್ ಅವರ ಸಂಬಂಧಿಕರೂ ಸ್ಥಳಕ್ಕೆ ಆಗಮಿಸಿ ವಾಗ್ವಾದದಲ್ಲಿ ಭಾಗಿಯಾಗಿದ್ದು, ಪರಿಸ್ಥಿತಿ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು.

ಪೊಲೀಸರ ಪ್ರಕಾರ, ಬಳಿಕ ಆರೋಪಿಗಳು ಮುನಿರತ್ನಂ ಮತ್ತು ಮಣಿಕಂಠ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು. ಆದರೆ ತಿರುಪತಿಯಿಂದ ತಪ್ಪಿಸಿಕೊಳ್ಳುವ ಮುನ್ನವೇ ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಿರುಪತಿ ಪೂರ್ವ ವಲಯದ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸುಲು ಮಾತನಾಡಿ, ಘರ್ಷಣೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತನಿಖೆಯಲ್ಲಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಕುಟುಂಬ ಕಲಹವೇ ಘಟನೆಗೆ ಕಾರಣವಾಗಿರಬಹುದೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.