ವಿದೇಶ

ಪತ್ನಿ ಹತ್ಯೆಗೈದ Indian ಟೆಕ್ಕಿ; ಮೃತದೇಹದ ಫೋಟೋ ಭಾರತದಲ್ಲಿದ್ದ ಪ್ರೇಯಸಿಗೆ ಕಳುಹಿಸಿದ ಭೂಪ

ಅಮೆರಿಕದ ಬೆಲ್ಲವ್ಯೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಪತ್ನಿ ಕೊಲೆ ಪ್ರಕರಣದಲ್ಲಿ ಅವಿನಾಶ್ ನರ್ನೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಹತ್ಯೆಗೈದ Indian ಟೆಕ್ಕಿ; ಮೃತದೇಹದ ಫೋಟೋ ಭಾರತದಲ್ಲಿದ್ದ ಪ್ರೇಯಸಿಗೆ ಕಳುಹಿಸಿದ ಭೂಪ
ಪತ್ನಿ ಹತ್ಯೆಗೈದ Indian ಟೆಕ್ಕಿ
Published On :

ನವದೆಹಲಿ: 30 ವರ್ಷದ ಭಾರತ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ಪತ್ನಿಯನ್ನು ಹತ್ಯೆಗೈದು, ಆಕೆಯ ಮೃತದೇಹದ ಫೋಟೋವನ್ನು ಭಾರತದಲ್ಲಿದ್ದ ತನ್ನ ಪ್ರೇಯಸಿಗೆ ಕಳುಹಿಸಿರುವ ವಿದ್ರಾವಕ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದ ಬೆಲ್ಲವ್ಯೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಪತ್ನಿ ಕೊಲೆ ಪ್ರಕರಣದಲ್ಲಿ ಅವಿನಾಶ್ ನರ್ನೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತನ್ನ 27 ವರ್ಷದ ಪತ್ನಿ ರಾಜಿತಾ ಸಬ್ಬಿನೇನಿ ಅವರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ಘಟನಾ ಸ್ಥಳವನ್ನು ಆತ್ಮಹತ್ಯೆಯಂತೆ ತೋರಿಸಲು ಪ್ರಯತ್ನಿಸಿದ್ದಾನೆ ಎಂದು ಬೆಲ್ಲವ್ಯೂ ಪೊಲೀಸರು ತಿಳಿಸಿದ್ದಾರೆ.

2025ರ ಅಕ್ಟೋಬರ್ 27ರಂದು ನರ್ನೆ ಪೊಲೀಸರಿಗೆ ಕರೆ ಮಾಡಿ, ತನ್ನ ಪತ್ನಿ ಬಾತ್‌ರೂಮ್‌ನಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು ಹೊರಬರುತ್ತಿಲ್ಲ ಎಂದು ಮಾಹಿತಿ ನೀಡಿದ್ದ. ಪೊಲೀಸರು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ರಾಜಿತಾ ಬಾತ್‌ರೂಮ್ ನೆಲದ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳದಲ್ಲೇ ವೈದ್ಯರು ಅವರನ್ನು ಮೃತಪಟ್ಟಿದ್ದಾರೆಂದು ಘೋಷಿಸಿದ್ದರು.

ಪ್ರಾಥಮಿಕ ವಿಚಾರಣೆಯಲ್ಲಿ, ಅಕ್ಟೋಬರ್ 27ರಂದು ತಾನು ಕೆಲವು ಕೆಲಸಗಳ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದು, ಸುಮಾರು 40 ನಿಮಿಷಗಳ ಬಳಿಕ ಮನೆಗೆ ಮರಳಿದಾಗ ಪತ್ನಿ ಬಾತ್‌ರೂಮ್‌ನಲ್ಲಿ ಬೀಗ ಹಾಕಿಕೊಂಡಿರುವುದನ್ನು ಕಂಡೆ ಎಂದು ನರ್ನೆ ಹೇಳಿದ್ದ. ಆದರೆ, ಆತ ಹೊರಗಿದ್ದ ಸಮಯದಲ್ಲಿ ಬೇರೆ ಯಾರೂ ಮನೆಗೆ ಪ್ರವೇಶಿಸಿರುವ ಯಾವುದೇ ಸಾಕ್ಷ್ಯ ಪೊಲೀಸರಿಗೆ ಲಭ್ಯವಾಗಿರಲಿಲ್ಲ.

ಮಾರನೇ ದಿನ ಕಿಂಗ್ ಕೌಂಟಿ ವೈದ್ಯಕೀಯ ಪರೀಕ್ಷಾಧಿಕಾರಿ ಕಚೇರಿ ರಾಜಿತಾ ಅವರ ಸಾವು ಕೊಲೆ ಎಂದು ದೃಢಪಡಿಸಿತು. ಕತ್ತು ಹಿಸುಕಿದ ಪರಿಣಾಮ ಉಸಿರುಗಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.

ಪರಸ್ತ್ರೀಗಾಗಿ ಪತ್ನಿಯನ್ನೇ ಕೊಂದ ಪಾಪಿ

ತನಿಖೆಯ ವೇಳೆ, ಅವಿನಾಶ್ ನರ್ನೆಗೆ ಭಾರತದಲ್ಲಿದ್ದ ಮಹಿಳೆಯೊಬ್ಬಳೊಂದಿಗೆ ಹಲವು ವರ್ಷಗಳಿಂದ ರಹಸ್ಯ ಪ್ರೇಮ ಸಂಬಂಧವಿದ್ದ ವಿಚಾರ ಬೆಳಕಿಗೆ ಬಂದಿದೆ. ಆ ಸಂಬಂಧ ಮುಂದುವರಿದಿದ್ದರೂ, 2025ರ ಜೂನ್ 5ರಂದು ಕುಟುಂಬದ ಒಪ್ಪಿಗೆಯಂತೆ ರಾಜಿತಾ ಅವರನ್ನು ವಿವಾಹವಾಗಿದ್ದಾನೆ. ವಿಶೇಷವೆಂದರೆ, ಆತನ ಪ್ರೇಯಸಿಯೇ ಮದುವೆ ಸಮಾರಂಭಕ್ಕೂ ಹಾಜರಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆಯಾದ ಬಳಿಕವೂ ಅವಿನಾಶ್ ನರ್ನೆ ಮತ್ತು ಆತನ ಪ್ರೇಯಸಿಯ ಸಂಪರ್ಕ ಮುಂದುವರಿದಿತ್ತು. ಕೊಲೆ ನಡೆದ ದಿನ ನರ್ನೆ ಕನಿಷ್ಠ ನಾಲ್ಕು ಬಾರಿ ಆಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾನೆ. ತಾನು ಬಾತ್‌ರೂಮ್ ಬಾಗಿಲು ತೆರೆಯಲು ಯತ್ನಿಸುತ್ತಿದ್ದೇನೆ ಎಂದು ಪೊಲೀಸರಿಗೆ ಹೇಳಿದ ಸಮಯದಲ್ಲಿಯೂ ಆತ ಪ್ರೇಯಸಿಗೆ ಕರೆ ಮಾಡಿದ್ದಾನೆ. ಅಲ್ಲದೆ, ಪತ್ನಿಯ ಮೃತದೇಹದ ಫೋಟೋವನ್ನೂ ಆಕೆಗೆ ಕಳುಹಿಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ರಾಜಿತಾ ತಮ್ಮ ಪತಿಗೆ ಕಳುಹಿಸಿದ್ದ ಸಂದೇಶಗಳನ್ನೂ ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಅದರಲ್ಲಿ, ನರ್ನೆ ತಯಾರಿಸುತ್ತಿದ್ದ ಪಾನೀಯಗಳು ಹಲವು ಬಾರಿ "ಕಹಿಯಾಗಿ" ಅಥವಾ "ವಿಚಿತ್ರ ರುಚಿ" ಹೊಂದಿದ್ದವು ಎಂದು ಅವರು ಹೇಳಿಕೊಂಡಿದ್ದರು. ಸಾವಿನ ದಿನವೂ, ಆತ ತಯಾರಿಸಿದ್ದ ಸ್ಮೂದಿ "ಔಷಧ" ಹಾಗೂ "ಕೆಮ್ಮಿನ ಸಿರಪ್" ರುಚಿಯಂತಿದೆ ಎಂದು ರಾಜಿತಾ ಸಂದೇಶ ಕಳುಹಿಸಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 5ರಂದು ಅವಿನಾಶ್ ನರ್ನೆ ವಿರುದ್ಧ ಪ್ರಥಮ ದರ್ಜೆ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತಪ್ಪಿತಸ್ಥನೆಂದು ಸಾಬೀತಾದರೆ ಜೀವಾವಧಿ ಶಿಕ್ಷೆ ಎದುರಿಸಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಅವಿನಾಶ್ ನರ್ನೆಯನ್ನು 50 ಲಕ್ಷ ಡಾಲರ್‌ಗಳ ಜಾಮೀನು ಮೊತ್ತದ ಮೇಲೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.